ಎಲ್ಲ ರಾಜ್ಯದಲ್ಲೂ ಕನಿಷ್ಠ ಒಬ್ಬ ಜೆಡಿಎಸ್ ಶಾಸಕ ಇರಬೇಕು: ದೇವೇಗೌಡ
ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ನಮ್ಮ ಕಾರ್ಯಕರ್ತರು ಇದ್ದಾರೆ. ಪ್ರತಿ ರಾಜ್ಯದಲ್ಲಿಯೂ ನಮ್ಮ ಪಕ್ಷದ ಶಾಸಕರು ಇರಬೇಕು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಬೆಂಗಳೂರು (ಅ.29): ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ನಮ್ಮ ಕಾರ್ಯಕರ್ತರು ಇದ್ದಾರೆ. ಪ್ರತಿ ರಾಜ್ಯದಲ್ಲಿಯೂ ನಮ್ಮ ಪಕ್ಷದ ಶಾಸಕರು ಇರಬೇಕು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಶುಕ್ರವಾರ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಪರಿಷತ್ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದೇ ಬರುತ್ತದೆ. ಇದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಪ್ರತಿ ರಾಜ್ಯದ ಒಂದು ಕ್ಷೇತ್ರದಲ್ಲಿ ಒಬ್ಬರಾದರೂ ನಮ್ಮ ಶಾಸಕರು ಇರಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು. ನಮ್ಮ ಕೆಲಸ ನಾವು ಪ್ರಾಮಾಣಿಕವಾಗಿ ಮಾಡಬೇಕು.
ನನ್ನನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ಮರು ಆಯ್ಕೆ ಮಾಡಿದ್ದಕ್ಕೆ ಕಾರ್ಯಕಾರಿಣಿ ಸಮಿತಿಗೆ ಧನ್ಯವಾದಗಳು ಎಂದರು. ಮಹಾ ಅಧಿವೇಶನದಲ್ಲಿ ಮೂರು ನಿರ್ಣಯ ಅಂಗೀಕಾರವಾಗಿವೆ. ಇದೊಂದು ಅತ್ಯುತ್ತಮ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ. ಲಕ್ಷಾಂತರ ಕಾರ್ಯಕರ್ತರು ಈ ಪಕ್ಷದ ಬೆನ್ನಲುಬು ಆಗಿದ್ದಾರೆ. ಕಾಂಗ್ರೆಸ್-ಬಿಜೆಪಿ ಬಗ್ಗೆ ಚರ್ಚೆ ಬೇಡ. ನಮ್ಮ ಕೆಲಸ ನಾವು ಪ್ರಾಮಾಣಿಕವಾಗಿ ಮಾಡಬೇಕು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜನತಾ ಜಲಧಾರೆ ಮಾಡಿದರು. ಈಗ ಪಂಚರತ್ನ ರಥಯಾತ್ರೆ ಮಾಡುತ್ತಿದ್ದಾರೆ. ಇವೆಲ್ಲವೂ ಜನರ ಅಭಿವೃದ್ಧಿ ಕಾರ್ಯಕ್ರಮಗಳು ಎಂದು ತಿಳಿಸಿದರು.
ಮೀಸಲಾತಿ ಬಗ್ಗೆ ಬಿಜೆಪಿ, ಕಾಂಗ್ರೆಸ್ ಬಹಿರಂಗ ಚರ್ಚೆಗೆ ಬರಲಿ: ದೇವೇಗೌಡ
ಪಂಚರತ್ನ ಯಾತ್ರೆಗೆ ಸಾಂಕೇತಿಕ ಚಾಲನೆ: ‘ಕಾಂಗ್ರೆಸ್‌ನವರು ಯಾವ ಜೋಡೋ ಆದರೂ ಮಾಡಿಕೊಳ್ಳಲಿ. ಬಿಜೆಪಿಯವರು ಯಾವ ಸಂಕಲ್ಪ ಯಾತ್ರೆಯನ್ನಾದರೂ ಮಾಡಿಕೊಳ್ಳಲಿ. ಮುಂಬರುವ 2023ಕ್ಕೆ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬಸವನಗುಡಿಯಲ್ಲಿ ಪಂಚರತ್ನ ರಥಯಾತ್ರೆಗೆ ಸಾಂಕೇತಿಕವಾಗಿ ಚಾಲನೆ ನೀಡಿದ ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್-ಬಿಜೆಪಿಯವರು ಜನರಿಂದ ಲೂಟಿ ಮಾಡಿದ ಹಣವನ್ನು ಹಂಚಲು ಬರುತ್ತಾರೆ. ಒಂದು ಮತಕ್ಕೆ ಎರಡು ಸಾವಿರ ರು. ಮತ್ತು ಕುಕ್ಕರ್ ಎಂದು ಬರುತ್ತಾರೆ. ಇದೆಲ್ಲಾ ಹಣ ರಾಜ್ಯದ ಜನರಿಂದ ಲೂಟಿ ಮಾಡಿರುವ ಹಣ. ಆದರೆ ನಾವು ಯಾರೂ ದುಡ್ಡು ಲೂಟಿ ಹೊಡೆದಿಲ್ಲ. ಭಾರತ್ ಜೋಡೋದಿಂದ ಜನರ ಸಮಸ್ಯೆಗಳು ಅರ್ಥವಾಗುವುದಿಲ್ಲ. ಇವಾಗ ಏನೋ ಕಾಂಗ್ರೆಸ್ ನಾಯಕರು ಪಟ್ಟಿಮಾಡುತ್ತಾರಂತೆ. ಅವರಿಂದ ಜನರ ಸಮಸ್ಯೆ ನಿವಾರಣೆಯಾಗುವುದಿಲ್ಲ ಎಂದು ಟೀಕಿಸಿದರು.
ಬಡವ, ಶ್ರೀಮಂತ ಎಂದು ತಾರತಮ್ಯ ಇಲ್ಲದೆ ಅತ್ಯಾಧುನಿಕ ಶಿಕ್ಷಣ ಕೊಡಿಸಬೇಕು. ಗ್ರಾಮ ಪಂಚಾಯಿತಿ, ಪ್ರತಿ ವಾರ್ಡ್‌ನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಂತೆ ಶಿಕ್ಷಣ ಕೊಡಬೇಕು. ಕೋವಿಡ್ ಸಮಯದಲ್ಲಿ ಶಾಲೆ ನಡೆಯದಿದ್ದರೂ ಖಾಸಗಿ ಶಿಕ್ಷಣ ಸಂಸ್ಥೆಯವರು ಶುಲ್ಕ ಕಟ್ಟಲೇಬೇಕು ಎಂದು ಒತ್ತಡ ಹಾಕಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಮತ್ತು ಅತ್ಯುತ್ತಮ ಶಿಕ್ಷಣ ನೀಡಲು ಈ ಯೋಜನೆ ರೂಪಿಸಲಾಗಿದೆ. ಮಕ್ಕಳಿಗೆ ಇಂಗ್ಲೀಷ್ ಕೂಡ ಅನಿವಾರ್ಯ. ವೃತ್ತಿ ಬದುಕಿಗೆ ಇದು ಅಗತ್ಯವಾಗಿದೆ ಎಂದರು.
ನನ್ನ ಕಣ್ಮುಂದೆ ಜೆಡಿಎಸ್‌ಗೆ ಮತ್ತೆ ಅಧಿಕಾರ: ದೇವೇಗೌಡ
ಆರೋಗ್ಯ ವಿಚಾರದಲ್ಲಿ ಎಲ್ಲರಿಗೂ ಉಚಿತ ಚಿಕಿತ್ಸೆ ಲಭ್ಯವಾಗಬೇಕು. ಕ್ಯಾನ್ಸರ್, ಡಯಾಲಿಸಿಸ್‌ಗೆ ಲಕ್ಷಾಂತರ ರು. ಪಾವತಿಸಬೇಕು. ಆರೋಗ್ಯ ವಿಮೆಯನ್ನು ಸರ್ಕಾರವೇ ಮಾಡಬೇಕು. ಗ್ರಾಮಮಟ್ಟದಲ್ಲಿ ಹೆರಿಗೆಗೆ ತಕ್ಷಣಕ್ಕೆ ಬೇಕಾದ ಸೌಲಭ್ಯ ಸಿಗಬೇಕು. ಅಲ್ಲದೇ, ಪ್ರತಿ ಜಿಲ್ಲೆಯಲ್ಲಿ ಉದ್ಯೋಗ ನೀಡುವ ಯೋಜನೆ ಹಾಕಿದ್ದೆ. ಬಿಜೆಪಿ ಸರ್ಕಾರ ಅದನ್ನು ನಿಲ್ಲಿಸಿದ್ದಾರೆ. ನಾನು ಮಾಡಿದ ಯೋಜನೆಯನ್ನು ಮುಂದೆ ಬಂದ ಸರ್ಕಾರಗಳು ಗಾಳಿಗೆ ತೂರಿದವು. ನನ್ನ ಮುಂದಿನ ಯೋಜನೆಯಲ್ಲಿ ಮಹಿಳೆಯರು ಮತ್ತು ಯುವಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶ ಇದೆ ಎಂದು ಹೇಳಿದರು.