Asianet Suvarna News Asianet Suvarna News

Mekedatu Project Row: 'ಪ್ರಧಾನಿಯೇ ಸಮಾವೇಶ ಮಾಡಿರುವಾಗ ನಾವ್ಯಾಕೆ ಪಾದಯಾತ್ರೆ ಮಾಡಬಾರ್ದು?'

*ಬಿಜೆಪಿಯ ಪಿತೂರಿಗೆ ಬಗ್ಗಲ್ಲ, 100 ಬಾರಿ ಜೈಲಿಗೆ ಕಳಿಸಿದರೂ ಹೆದರಲ್ಲ
*ಕೋವಿಡ್‌ ನಿಯಮ ಪಾಲಿಸಿಯೇ ಯಶಸ್ವಿಯಾಗಿ ಪಾದಯಾತ್ರೆ ನಡೆಸ್ತೇವೆ
*ಪ್ರಧಾನಿ ಮೋದಿಗೆ ಒಂದು ಕಾನೂನು, ನಮಗೊಂದು ಕಾನೂನು?: ಸಿದ್ದು
 

Even if sent to jail 100 times Mekedatu Padayatra will not stop said Siddaramaiah mnj
Author
Bengaluru, First Published Jan 5, 2022, 5:45 AM IST

ಬೆಂಗಳೂರು (ಜ.5): ಬಿಜೆಪಿ ನಾಯಕರು (BJP Leaders) ಏನೇ ಪಿತೂರಿ ಮಾಡಿದರೂ ಜನಪರ ಹೋರಾಟವಾದ ಮೇಕೆದಾಟು ಪಾದಯಾತ್ರೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಕೋವಿಡ್‌ ನಿಯಮ ಪಾಲಿಸಿಯೇ ಪಾದಯಾತ್ರೆ ನಡೆಸುತ್ತೇವೆ ಎಂದು ಕಾಂಗ್ರೆಸ್‌ ನಾಯಕರು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ನಗರದಲ್ಲಿ ಮಂಗಳವಾರ ಪ್ರತ್ಯೇಕವಾಗಿ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar) ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಪಾದಯಾತ್ರೆ ತಡೆಯಲು ಬಿಜೆಪಿ ಪಿತೂರಿ ನಡೆಸಿದೆ. ನಮ್ಮ ವಿರುದ್ಧ 100 ಬಾರಿ ಕೇಸು ದಾಖಲಿಸಿ ಜೈಲಿಗೆ ಕಳುಹಿಸಿದರೂ ಪಾದಯಾತ್ರೆಯಿಂದ ಹಿಂಜರಿಯುವುದಿಲ್ಲ ಎಂದು ತಿಳಿಸಿದ್ದಾರೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಪ್ರಧಾನಿ ಮೋದಿಯೇ (PM Narendra Modi) ಉತ್ತರ ಪ್ರದೇಶದಲ್ಲಿ ಸಮಾವೇಶಗಳನ್ನು ಮಾಡಿರುವಾಗ, ನಾವ್ಯಾಕೆ ಪಾದಯಾತ್ರೆ ಮಾಡಬಾರದು. ಈ ದೇಶದಲ್ಲಿ ಪ್ರಧಾನಿ ಮೋದಿಗೆ ಒಂದು ಕಾನೂನು, ನಮಗೊಂದು ಕಾನೂನು ಇದೆಯಾ. ನಾವು ರಾಜಕೀಯಕ್ಕಾಗಿ ಪಾದಯಾತ್ರೆ ಮಾಡುತ್ತಿಲ್ಲ, ಜನರ ಹಿತಕ್ಕಾಗಿ ಮಾಡುತ್ತಿದ್ದೇವೆ. ನಮ್ಮ ಪಾದಯಾತ್ರೆಯನ್ನು ಹತ್ತಿಕ್ಕಲು ಬಿಜೆಪಿ ಕೊರೊನಾ ನೆಪವೊಡ್ಡುತ್ತಿದೆ. ನಾವು ಮಾತ್ರ ಪಾದಯಾತ್ರೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಪಾದಯಾತ್ರೆ ನಡೆಸಿದರೆ ಸೋಂಕು ಹೆಚ್ಚಾಗುವುದಿಲ್ಲ!

ಆರೋಗ್ಯ ಸಚಿವ ಸುಧಾಕರ್‌ ಅವರು ಪಾದಯಾತ್ರೆ ಕೈಬಿಡುವಂತೆ ಕಾಂಗ್ರೆಸ್‌ಗೆ ಮನವಿ ಮಾಡಿರುವುದಾಗಿ ಹೇಳಿದ್ದಾರಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಕಾಂಗ್ರೆಸ್‌ ಪಾದಯಾತ್ರೆ ನಡೆಸಿದರೆ ಸೋಂಕು ಹೆಚ್ಚಾಗುವುದಿಲ್ಲ. ಸುಧಾಕರ್‌ ಅವರು ಸೋಂಕು ನಿಯಂತ್ರಿಸಬೇಕಾದ ತಮ್ಮ ಕೆಲಸವನ್ನು ಸರಿಯಾಗಿ ಮಾಡದ ಕಾರಣ ಸೋಂಕು ಹೆಚ್ಚಾಗಿದೆ. ನಮಗೂ ಜವಾಬ್ದಾರಿ ಇದೆ. ಕೋವಿಡ್‌ ನಿಯಮಗಳನ್ನು ಪಾಲಿಸಿಯೇ ಪಾದಯಾತ್ರೆ ಮಾಡುತ್ತೇವೆ ಎಂದರು.

ಇದನ್ನೂ ಓದಿMekedatu'ಮೇಕೆದಾಟು ಪಾದಯಾತ್ರೆ ನಿಲ್ಲಿಸಲು ಸಿದ್ದರಾಮಯ್ಯನವರೇ ಸರ್ಕಾರಕ್ಕೆ ರಹಸ್ಯ ಮನವಿ ಮಾಡಿದ್ದಾರೆ'

ಸೋಂಕು ಹೆಚ್ಚಾದರೆ ಕಾಂಗ್ರೆಸ್‌ ಹೊಣೆ ಎಂದು ಬಿಜೆಪಿ ನಾಯಕರು ಹೇಳಿದ್ದಾರಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರು, ಸಚಿವರು ಕೋವಿಡ್‌ ಸಮಯದಲ್ಲಿ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದ್ದರೂ ಯಾಕೆ ಅವರ ವಿರುದ್ಧ ಸಮನ್ಸ್‌ ಜಾರಿ ಮಾಡಿ ಪ್ರಕರಣ ದಾಖಲಿಸಿಲ್ಲ? 100 ನಾಟೌಟ್‌ ಪ್ರತಿಭಟನೆ ಮಾಡಿದ ಕಾಂಗ್ರೆಸ್‌ ನಾಯಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ನೂರು ಪ್ರಕರಣ ದಾಖಲಿಸಿ, ನಮ್ಮನ್ನು ನೂರು ಬಾರಿ ಜೈಲಿಗೆ ಕಳುಹಿಸಿದರೂ ನಾವು ಹೆದರುವುದಿಲ್ಲ. ಮೇಕೆದಾಟು ಪಾದಯಾತ್ರೆ ನಿಲ್ಲಿಸುವುದಿಲ್ಲ ಎಂದರು.

ಏರ್ಪೋರ್ಟ್‌ ಕಿರುಕುಳ ತಪ್ಪಿಸಲಿ- ಡಿಕೆಶಿ

ಇನ್ನು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌ ಅವರು, ನಾವು ಕೋವಿಡ್‌ ನಿಯಮ ಪಾಲಿಸಿಯೇ ಪಾದಯಾತ್ರೆ ನಡೆಸುತ್ತೇವೆ. ಪಾದಯಾತ್ರೆ ಬೇಡ ಎನ್ನುತ್ತಿರುವ ಸುಧಾಕರ್‌ ಅವರು ಎಷ್ಟರ ಮಟ್ಟಿಗೆ ರಾಜ್ಯದಲ್ಲಿ ಕೋವಿಡ್‌ ನಿಯಂತ್ರಿಸಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಕೋವಿಡ್‌ ವಿಚಾರವಾಗಿ ಸದ್ಯ ವಿಮಾನ ನಿಲ್ದಾಣದಲ್ಲಿ ಜನಸಾಮಾನ್ಯರಿಗೆ ಯಾವ ರೀತಿ ಕಿರುಕುಳ ನಡೆಯುತ್ತಿದೆ ಎಂಬುದನ್ನು ಮೊದಲು ಅವರು ಹೋಗಿ ಪರಿಶೀಲಿಸಲಿ. ಜತೆಗೆ ತಮಗೆ ಸಿಕ್ಕಿರುವ ಜವಾಬ್ದಾರಿ ಬಳಸಿ ಕೇಂದ್ರದಿಂದ ಬರಬೇಕಾದ ರಾಜ್ಯದ ಪಾಲಿನ ತೆರಿಗೆ, ನೆರೆ ಪರಿಹಾರ ಹಣವನ್ನು ವಸೂಲಿ ಮಾಡಿಕೊಂಡು ಬರಲಿ. ಜನರಿಗೆ ಸಹಾಯ ಮಾಡಲಿ ಸಾಕು ಎಂದು ತಿರುಗೇಟು ನೀಡಿದರು.

ಪಾದಯಾತ್ರೆ ಕೈ ಬಿಡಲು ಕಾಂಗ್ರೆಸ್‌ಗೆ ಮನವಿ

ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ತಾನು ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆ ಕೈಬಿಡಬೇಕು ಎಂದು ಸಚಿವ ಸುಧಾಕರ್‌ ಮನವಿ ಮಾಡಿದ್ದಾರೆ. ಸೋಂಕು ಇಷ್ಟುವೇಗವಾಗಿ ಹರಡಬಹುದು ಎಂದು ಯಾರು ನಿರೀಕ್ಷೆ ಮಾಡಿರಲಿಲ್ಲ. ಜ.15 ರ ನಂತರ ಮೂರನೇ ಅಲೆ ಬರುತ್ತದೆ ಎಂಬ ಭಾವನೆ ಇತ್ತು. ಆದರೆ, ಕಳೆದ ಮೂರ್ನಾಲ್ಕು ದಿನಗಳಿಂದ ವೇಗವಾಗಿ ಹರಡುತ್ತಿರುವುದನ್ನು ನೋಡಿಯಾದರೂ ಕಾಂಗ್ರೆಸ್‌ ನಾಯಕರು ಪಾದಯಾತ್ರೆ ಕೈ ಬಿಡಬೇಕು ಎಂದು ಮನವಿ ಮಾಡಿದರು.

Follow Us:
Download App:
  • android
  • ios