ನಾಯಕತ್ವ ಬದಲಾವಣೆ ಚರ್ಚೆ ಅನಗತ್ಯ ಎಂದ ಸಚಿವ ದಿನೇಶ್ ಗುಂಡೂರಾವ್, ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಯುದ್ಧದ ಕಾರಣದಿಂದ ರಾಜ್ಯದಲ್ಲಿ ಔಷಧ ಹಾಗೂ ಗ್ಯಾಸ್ ಕೊರತೆ ಉಂಟಾಗಿದ್ದು, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಂಗಳೂರು (ಏ.11): ಉಪ ಚುನಾವಣೆ ಫಲಿತಾಂಶಕ್ಕೂ ನಾಯಕತ್ವ ಬದಲಾವಣೆಗೂ ಯಾವುದೇ ಸಂಬಂಧ ಇಲ್ಲ. ಈ ವಿಚಾರಗಳ ಬಗ್ಗೆ ಸಿಎಂ, ಡಿಸಿಎಂ ಅವರು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾಯಕತ್ವ ಬದಲಾವಣೆ ಸೇರಿದಂತೆ ಮುಂತಾದ ವಿಚಾರಗಳ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ನಾವು ಚರ್ಚೆ ಮಾಡುವ ಅಗತ್ಯ, ಅನಿವಾರ್ಯತೆ, ಅವಶ್ಯಕತೆ ಇಲ್ಲ. ಉಪ ಚುನಾವಣೆ ನಡೆದ ಎರಡೂ ಕ್ಷೇತ್ರದಲ್ಲೂ ಕಾಂಗ್ರೆಸ್‌ ಗೆಲ್ಲುವ ವಿಶ್ವಾಸವಿದೆ’ ಎಂದರು.

ಯುದ್ಧದ ಸನ್ನಿವೇಶದಿಂದಾಗಿ ಮಧ್ಯಪ್ರಾಚ್ಯದಿಂದ ಭಾರತಕ್ಕೆ ಬರುತ್ತಿದ್ದ ಕೆಲವು ಔಷಧಗಳ ಪೂರೈಕೆ ಆಗುತ್ತಿಲ್ಲ. ಔಷಧ ಪೂರೈಕೆಗೆ ಸ್ವಲ್ಪ ಸಮಯ ಕೇಳುತ್ತಿದ್ದಾರೆ. ಈ ಹಿಂದೆ ಕೊಟ್ಟಿರುವ ಆರ್ಡರ್‌ಗಳ‌ ಡೆಲಿವರಿ ಮಾಡಲು ಆಗುತ್ತಿಲ್ಲ. 30 ದಿನ‌‌ ಸಮಯ ಕೊಡಿ ಎಂದು ಕೇಳುತ್ತಿದ್ದಾರೆ. ಮೆಡಿಸಿನ್ ತಯಾರಿಕೆ ಮಾಡುವವರಿಗೂ ಕಚ್ಚಾವಸ್ತುಗಳು ಬರದೆ ಕೊರತೆ ಆಗಿದೆ. ಈ ಬಗ್ಗೆ ಅವರು ಸಹ ನಮಗೆ ಪತ್ರ ಬರೆದಿದ್ದಾರೆ. ಕೆಲವು ಔಷಧಗಳ ಬೆಲೆ ಏರಿಕೆಯಾಗಿದೆ. ಮೆಡಿಸಿನ್ ಉತ್ಪಾದನಾ ವೆಚ್ಚ ಕೂಡ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಬೇರೆ ಬೇರೆ ದೇಶದಿಂದ ಖರೀದಿ ಮಾಡುವ ವ್ಯವಸ್ಥೆ ಮಾಡಬೇಕು. ಬಹಳ‌ ದೊಡ್ಡ ಜವಾಬ್ದಾರಿ ಕೇಂದ್ರದ ಮೇಲೆ ಇದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಗ್ಯಾಸ್‌ ಸಮಸ್ಯೆ ಇದೆ:

ರಾಜ್ಯದಲ್ಲಿ ಗ್ಯಾಸ್ ಸಮಸ್ಯೆ ಇದೆ ಎಂದು ಸ್ಪಷ್ಟವಾಗಿ ಹೇಳಬೇಕು. ಸುಮ್ಮನೆ ಸಮಸ್ಯೆ ಇಲ್ಲ‌ ಎಂದು ಹೇಳಬಾರದು. ಅನೇಕ‌ ಕಡೆ ಆಹಾರ ತಯಾರಿಕೆ ಶೇ.50ಕ್ಕೆ ಇಳಿಸಿದ್ದಾರೆ. ಎಲ್ಲ ಕಡೆ ಕಮರ್ಷಿಯಲ್ ಗ್ಯಾಸ್‌ಗೆ ತೊಂದರೆ ಇದೆ ಎಂದರು.