ಕಳೆದ ಸಂಸತ್ ಚುನಾವಣೆ ವೇಳೆ ಗೃಹ ಸಚಿವ ಡಾ। ಜಿ.ಪರಮೇಶ್ವರ್ ಅವರು ಮಾತನಾಡಿದ್ದ ತುಣುಕು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ.

ತುಮಕೂರು (ಆ.05): ಮತಗಳ್ಳತನ ವಿರೋಧಿಸಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಬೆಂಗಳೂರಲ್ಲಿ ಪ್ರತಿಭಟನೆ ನಡೆಯುವ ಬೆನ್ನಲ್ಲೇ ಕಳೆದ ಸಂಸತ್ ಚುನಾವಣೆ ವೇಳೆ ಗೃಹ ಸಚಿವ ಡಾ। ಜಿ.ಪರಮೇಶ್ವರ್ ಅವರು ಮಾತನಾಡಿದ್ದ ತುಣುಕು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ. ಬಿಜೆಪಿಯು ಈ ವಿಡಿಯೋವನ್ನು ವೈರಲ್‌ ಮಾಡಿದ್ದು, ಕಾಂಗ್ರೆಸ್‌ನ ಮತಗಳ್ಳತನ ಆರೋಪಕ್ಕೆ ಟಾಂಗ್‌ ನೀಡಿದೆ.

ವಿಡಿಯೋದಲ್ಲಿ ಏನಿದೆ?: ಕಳೆದ ಸಂಸತ್ ಚುನಾವಣೆ ವೇಳೆ ತುಮಕೂರಲ್ಲಿ ನಡೆದಿದ್ದ ಪ್ರಚಾರ ಸಭೆಯಲ್ಲಿ ಪರಮೇಶ್ವರ್ ಅವರು ಬ್ಯಾಲೇಟ್ ಪೇಪರ್‌ನಲ್ಲಿ ಮತ ಚಲಾವಣೆ ಬಗ್ಗೆ ಮಾತನಾಡಿದ್ದರು. ಆಗಿನ ಚುನಾವಣೆಯಲ್ಲಿ ಒತ್ತುವುದು. ಏನ್ ಈರಣ್ಣ.., ಇವಿಎಂ ಇರಲಿಲ್ಲ ಕಣೋ ಆಗ. ಎಲ್ಲಾ ಒತ್ತೋದು, ಒಬ್ರೋ ಇಬ್ರೋ ಕೂತ್ಕೊಂಡು ಒತ್ತು ಬುಡ್ರೋ ಅನ್ನೋರು. ಮಧು ಚಂದ್ರ ಈಗ್ಲು ಇದ್ದಾನೆ, ಗೊಲ್ಲರಹಟ್ಟಿಯವನು ಎಂದಿದ್ದರು.

ಹಟ್ಟಿಯಲ್ಲಿ ಒಬ್ನೋ ಇಬ್ನೋ, ಒಬ್ನೋ ಇಬ್ನೋ ಕೂತ್ಕೊಂಡು ಒತ್ತಿ ಹೋಗಪ್ಪ ಅತ್ಲಾಗೆ ಅಂತ ಕಳಿಸೋರು ಎಂದಿದ್ದ ತುಣುಕು ವೈರಲ್ ಆಗಿದೆ. ಇತ್ತ ಮಂಗಳವಾರ ಬೆಂಗಳೂರಿನಲ್ಲಿ ಕಾಂಗ್ರೆಸ್‌ ಪಕ್ಷವು ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮತಗಳ್ಳತನದ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದೆ. ಇದರ ಬೆನ್ನಲ್ಲೆ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಪರಂ ಹೇಳಿಕೆಯನ್ನು ವೈರಲ್‌ ಮಾಡಿ, ನಿಮಗೆ ಬ್ಯಾಲೆಟ್‌ ಪೇಪರ್‌ನಲ್ಲಿ ಮತಗಳ್ಳತನಕ್ಕೆ ಅವಕಾಶ ಇವಿಎಂನಿಂದಾಗಿ ತಪ್ಪಿದೆ ಎಂದು ಬೇಸರವಾಗಿದೆ. ಹಾಗಾಗಿ ಮತಗಳ್ಳತನ ಆರೋಪ ಮಾಡುತ್ತಿದ್ದೀರಿ ಎಂದು ಟೀಕಾ ಪ್ರಹಾರ ನಡೆಸಿದೆ.

ರಾಗಾ ಮತಗಳ್ಳತನ ಆರೋಪ ಆಧಾರರಹಿತ: ಸಂವಿಧಾನದ ಪುಸ್ತಕ ಸದಾ ಕೈಯಲ್ಲಿ ಹಿಡಿದು ಓಡಾಡುವ ರಾಹುಲ್‌ ಗಾಂಧಿ ಮತಗಳ್ಳತನವಾಗಿದೆ ಎಂದು ಹೋರಾಟ ನಡೆಸಲು ಮುಂದಾಗಿದ್ದಾರೆ. ಇವರಿಗೆ ಅಂಬೇಡ್ಕರ್ ಬಗ್ಗೆಯಾಗಲಿ ಹಾಗೂ ದೇಶದ ಸಂವಿಧಾನದ ಬಗ್ಗೆಯಾಗಲಿ ಕಿಂಚಿತ್ತೂ ಗೌರವವಿಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಟೀಕಿಸಿದರು. ಹೊನ್ನಾಳಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅಜ್ಜಿ, ಮಾಜಿ ಪ್ರಧಾನಿಯಾದ ಇಂದಿರಾ ಗಾಂಧಿ ತಾವು ಅಧಿಕಾರ ಉಳಿಸಿಕೊಳ್ಳಲು ಅಂದು ರಾತ್ರೋರಾತ್ರಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದರು.

ಆ ಮೂಲಕ ಪ್ರಜಾತಂತ್ರದ ಕಗ್ಗೊಲೆ ಮಾಡಿದ್ದರು. ಇದನ್ನು ರಾಹುಲ್ ಗಾಂಧಿ ಮರೆತಂತಿದೆ ಎಂದು ಹೇಳಿದರು. ಜನವಿರೋಧಿ, ಸಂವಿಧಾನ ವಿರೋಧಿ ನೀತಿಯಿಂದ ಯಾವುದೇ ಕಾರಣಕ್ಕೂ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ದೇಶದ ಜನರ ಭಾವನೆಗಳನ್ನು, ಗಮನವನ್ನು ಬೇರೆಡೆಗೆ ಸೆಳೆಯಲು ಮತಗಳ್ಳತನದ ಆಧಾರರಹಿತ ಆರೋಪಗಳನ್ನು ಮಾಡುತ್ತ ರಾಹುಲ್ ಗಾಂಧಿಯವರು ಓಡಾಡುತ್ತಿದ್ದಾರೆ. ಸಾಧ್ಯವಾದರೆ ದಾಖಲೆ ಪತ್ರಗಳನ್ನು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.