ರಾಜ್ಯ, ಕೇಂದ್ರದಲ್ಲಿರುವುದು ಡಬಲ್ ದೋಖಾ ಸರ್ಕಾರಗಳು: ಖಂಡ್ರೆ
* ರಾಜ್ಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಸರ್ಕಾರವಿದೆ
* 40 ಪರ್ಸೆಂಟ್ ಕಮಿಷನ್ ಹಣ ನೀಡಿಕೆಗಳಂತಹ ಅನೇಕ ಹಗರಣಗಳ ಸರಮಾಲೆ ಬಿಜೆಪಿ ಸರ್ಕಾರದಲ್ಲಿದೆ
* ಬಿಜೆಪಿಗರು ಸರ್ಕಾರ ನಡೆಸಲು ಯೋಗ್ಯರಲ್ಲ. ಮುಂದಿನ ದಿನಗಳಲ್ಲಿ ಮತದಾರ ತಕ್ಕ ಪಾಠ ಕಲಿಸಲಿದ್ದಾನೆ
ಜಮಖಂಡಿ(ಜು.10): ಕೇಂದ್ರ ಮತ್ತು ರಾಜ್ಯದಲ್ಲಿನ ಸರ್ಕಾರಗಳು ಡಬಲ್ ಎಂಜಿನ್ ಸರ್ಕಾರಗಳಲ್ಲ. ಅವು ಡಬಲ್ ದೋಖಾ ಸರ್ಕಾರಗಳಾಗಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಚಿವ ಈಶ್ವರ ಖಂಡ್ರೆ ವ್ಯಂಗ್ಯವಾಡಿದರು.
ಇಲ್ಲಿನ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಸರ್ಕಾರವಿದ್ದು, ಪಿಎಸ್‌ಐ, ಉಪನ್ಯಾಸಕರ ನೇಮಕಾತಿ ಹಗರಣಗಳು ಅಲ್ಲದೇ 40 ಪರ್ಸೆಂಟ್ ಕಮಿಷನ್ ಹಣ ನೀಡಿಕೆಗಳಂತಹ ಅನೇಕ ಹಗರಣಗಳ ಸರಮಾಲೆ ಬಿಜೆಪಿ ಸರ್ಕಾರದಲ್ಲಿದೆ. ಅವರು ಸರ್ಕಾರ ನಡೆಸಲು ಯೋಗ್ಯರಲ್ಲ. ಮುಂದಿನ ದಿನಗಳಲ್ಲಿ ಮತದಾರ ತಕ್ಕ ಪಾಠ ಕಲಿಸಲಿದ್ದಾನೆ ಎಂದು ಹೇಳಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾತಿ-ಜಾತಿ, ಧರ್ಮ-ಧರ್ಮಗಳ ಮಧ್ಯ ವೈಷಮ್ಯ ಹುಟ್ಟಿಸಿ, ಸಮಾಜದಲ್ಲಿ ಕೋಮುವಾದ ಹೆಚ್ಚಾಗುವಂತೆ ಮಾಡಿ ಪ್ರಜಾಪ್ರಭುತ್ವವನ್ನು ಹಾಳುಗೆಡವಲಾಗಿದೆ. ಸಂವಿಧಾನ ಅಪಾಯದಲ್ಲಿದೆ ಎಂದು ಆರೋಪಿಸಿದರು.
ಅಗ್ನಿಪಥ್ ಯೋಜನೆ: ಬಿಜೆಪಿಯಿಂದ ಯುವಕರ ದುರ್ಬಳಕೆ, ಈಶ್ವರ ಖಂಡ್ರೆ
ಬಿಜೆಪಿ ಸಮಾಜವನ್ನು ಒಡೆಯಲು ಹೊರಟಿದೆ. ಇದನ್ನು ಖಂಡಿಸಿ ಕಾಂಗ್ರೆಸ್ ಭಾರತ ಜೋಡೊ ಎಂಬ ಸಮಾಜ ಜೋಡಿಸುವ ಅಭಿಯಾನ ಹಮ್ಮಿಕೊಂಡಿದೆ ಎಂದ ಅವರು, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಕರ್ನಾಟಕಗಳಲ್ಲಿ ಅಭಿವೃದ್ಧಿಗಾಗಿ ನವಸಂಕಲ್ಪ ಕಾರ್ಯಕ್ರಮ ಹಾಕಿಕೊಂಡು ಅಭಿವೃದ್ಧಿಗೆ ಹೋರಾಟ ನಡೆಸಿ, ಪ್ರತಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚಿಂತನ-ಮಂಥನ ಉಳ್ಳ ಪ್ರಣಾಳಿಕೆಯನ್ನು ಕಾಂಗ್ರೆಸ್ ರೂಪಿಸಲಿದೆ. ಸಾಮಾಜಿಕ, ಶೈಕ್ಷಣಿಕ, ಆರೋಗ್ಯ, ಜೌದ್ಯೋಗಿಕವಾಗಿ ಸುಧಾರಣೆ ತರಲು ಕಾಂಗ್ರೆಸ್ ಪಾದಯಾತ್ರೆ ಮೂಲಕ ಜನವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ರೂಪಿಸಲಿದೆ ಎಂದು ಹೇಳಿದರು. ಮಾಜಿ ಸಿಎಂ ಸಿದ್ದರಾಮಯ್ಯನವರ ಜನ್ಮದಿನದ ಅಂಗವಾಗಿ ಸಿದ್ದರಾಮೋತ್ಸವವನ್ನು ಅವರ ಅಭಿಮಾನಿಗಳು ಆಚರಿಸುತ್ತಿದ್ದು, ಇದರಲ್ಲಿ ಯಾವುದೇ ರಾಜಕೀಯ ಇಲ್ಲವೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.