ಬೆಂಗಳೂರು[ಅ.18]: ಆರೋಪ-ಪ್ರತ್ಯಾರೋಪಕ್ಕೆ ಉತ್ತರ ನೀಡಲಿ. ಆದರೆ ವೈಯಕ್ತಿಕ ವಿಷಯಕ್ಕೆ ದೇವರನ್ನು ಮಧ್ಯೆ ತರುವುದು ಒಳ್ಳೆಯದಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿರಿಯ ಮುಖಂಡ ಎಚ್‌.ವಿಶ್ವನಾಥ್‌ ಹಾಗೂ ಮಾಜಿ ಸಚಿವ ಸಾ.ರಾ.ಮಹೇಶ್‌ ನಡುವೆ ನಡೆಯುತ್ತಿರುವ ‘ಆಣೆ-ಪ್ರಮಾಣ’ ಸವಾಲಿನ ಬಗ್ಗೆ ಪ್ರತಿಕ್ರಿಯಿಸಿದರು. ಇಬ್ಬರೂ ಸಚಿವರಾಗಿದ್ದವರು, ಒಟ್ಟಿಗೇ ಇದ್ದವರು. ಹೀಗಿರುವಾಗ ವೈಯಕ್ತಿಕ ವಿಷಯಗಳನ್ನು ಮುಂದಿಟ್ಟುಕೊಂಡು ಟೀಕೆ-ಟಿಪ್ಪಣಿ ಮಾಡುವುದು ಸರಿಯಲ್ಲ. ಆರೋಪ-ಪ್ರತ್ಯಾರೋಪಗಳ ಬಗ್ಗೆ ಅಂತಿಮವಾಗಿ ಜನರು ತೀರ್ಮಾನಿಸುತ್ತಾರೆ ಎಂದರು.

ಚಾಮುಂಡಿ ಸನ್ನಿಧಿಯಲ್ಲಿ ಆಣೆ- ಪ್ರಮಾಣದ ಭರಾಟೆ: ಏನೇನಾಯ್ತು? ಎಲ್ಲಾ ಸುದ್ದಿಗಳು ಒಂದು ಕ್ಲಿಕ್‌ನಲ್ಲಿ

ಸಮಾಜಕ್ಕೆ, ದೇಶಕ್ಕೆ ಒಳ್ಳೆಯದಾಗಲಿ. ಕುಟುಂಬಕ್ಕೆ ಒಳ್ಳೆಯದಾಗಲಿ ಎಂಬುದಾಗಿ ದೇವರಲ್ಲಿ ಪ್ರಾರ್ಥಿಸಲಿ. ಅದನ್ನು ಬಿಟ್ಟು ವೈಯಕ್ತಿಕ ವಿಷಯಗಳಿಗಾಗಿ ದೇವರನ್ನು ಮಧ್ಯೆ ತಂದು, ಆಣೆ, ಪ್ರಮಾಣ ಮಾಡುವುದು ಸರಿಯಲ್ಲ ಎಂದು ಇಬ್ಬರಿಗೂ ತಾವು ಸಲಹೆ ನೀಡುವುದಾಗಿ ಅವರು ಹೇಳಿದರು.

ಹತಾಶರಾಗಿ ಟೀಕೆ:

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಅನೇಕ ಸಚಿವರು ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ ಚುನಾವಣೆಯಲ್ಲಿ ಗೆಲ್ಲಲಿದೆ. ಹೀಗಾಗಿ ಹತಾಶರಾಗಿರುವ ಪ್ರತಿಪಕ್ಷಗಳ ಮುಖಂಡರು ರಾಜ್ಯದ ಸಚಿವರು ಪ್ರಚಾರದಲ್ಲಿ ತೊಡಗಿರುವುದನ್ನು ಟೀಕಿಸುತ್ತಿದ್ದಾರೆ. ವಿರೋಧ ಪಕ್ಷಗಳಿಗೆ ಟೀಕೆ ಮಾಡುವುದನ್ನು ಬಿಟ್ಟರೆ ಬೇರೆ ಏನಿದೆ ಎಂದರು.