ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೆಂಬ ನನ್ನ ಹೇಳಿಕೆಗೆ ಈಗಲೂ ನಾನು ಬದ್ಧನಾಗಿದ್ದೇನೆ. ಅವರ ಶ್ರಮ, ಹೋರಾಟಕ್ಕೆ ಪ್ರತಿಫಲ ಸಿಗಬೇಕು ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

ರಾಮನಗರ (ಆ.07): ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೆಂಬ ನನ್ನ ಹೇಳಿಕೆಗೆ ಈಗಲೂ ನಾನು ಬದ್ಧನಾಗಿದ್ದೇನೆ. ಅವರ ಶ್ರಮ, ಹೋರಾಟಕ್ಕೆ ಪ್ರತಿಫಲ ಸಿಗಬೇಕು ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ.ಶಿವಕುಮಾರ್ ನಮ್ಮ ನಾಯಕರು. ಅವರಿಗೆ ಸೂಕ್ತ ಸ್ಥಾನಮಾನ, ಗೌರವ ಕೊಡುವಂತೆ ಕೇಳೋಕೆ ನನಗೆ ಹಕ್ಕಿದೆ. ನಾನು ಕೂಡ ಇದೇ ಜಿಲ್ಲೆಯಲ್ಲಿ ಹುಟ್ಟಿದ್ದೇನೆ. ಅವರ ಜೊತೆ ಬೆಳೆದಿದ್ದೇನೆ. ಡಿಕೆಶಿಯವರು ಪಕ್ಷಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದು, ಅವರ ಹೋರಾಟಕ್ಕೆ ಬೆಲೆ ಇಲ್ವಾ? ಎಂದು ಪ್ರಶ್ನಿಸಿದರು.

ಇದೇ ವೇಳೆ, ಚುನಾವಣಾ ಅಕ್ರಮದ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಹೋರಾಟ ಕುರಿತು ಪ್ರತಿಕ್ರಿಯಿಸಿ, ಈ ಬಗ್ಗೆ ಹೈಕಮಾಂಡ್ ರೂಪುರೇಷೆ ನೀಡಿದೆ. ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಅವರಿಗೆ ಶಕ್ತಿ ತುಂಬುವ ಕೆಲಸವನ್ನು ನಾವು ಮಾಡುತ್ತೇವೆ. ಅವರ ಹೋರಾಟಕ್ಕೆ ನಾವು ಬೆಂಬಲ ಕೊಡುತ್ತೇವೆ. ಯಾವ ರೀತಿ ಅಕ್ರಮ ಆಗಿದೆ ಎಂಬುದರ ಬಗ್ಗೆ ನಮ್ಮ ರಾಷ್ಟ್ರೀಯ ನಾಯಕರು ಮಾಹಿತಿ ಕೊಡುತ್ತಾರೆ ಎಂದು ಹೇಳಿದರು.

ಪಿಡಿಒಗಳು ಯಾರದೊ ಕಂಟ್ರೋಲ್‌ನಲ್ಲಿ ಕೆಲಸ ಮಾಡಬೇಡಿ: ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆಸಕ್ತಿ ಇದ್ದರೆ ಕೆಲಸ ಮಾಡಿ. ಇಲ್ಲದಿದ್ದರೆ ಬೇರೆ ಜಾಗ ನೋಡಿಕೊಳ್ಳಿ. ಯಾರದೊ ಕಂಟ್ರೋಲ್ ನಲ್ಲಿ ಕೆಲಸ ಮಾಡಬೇಡಿ ಎಂದು ಶಾಸಕ ಇಕ್ಬಾಲ್ ಹುಸೇನ್ ಕಿಡಿಕಾರಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನಿಮ್ಮದೆ ಆದ ಗೌರವ ಇದೆ.

ಆ ಗೌರವ ಉಳಿಸಿಕೊಳ್ಳಲು ಕೆಲಸ ಮಾಡಿ ಇಲ್ಲವೇ ಬೇರೆಡೆಗೆ ವರ್ಗಾಯಿಸಿಕೊಂಡು ಹೋಗಿ ಎಂದು ತಾಕೀತು ಮಾಡಿದರು. ಗ್ರಾಮೀಣ ಪ್ರದೇಶಗಳ ಜನರಿಗೆ ಗ್ರಾಮ ಪಂಚಾಯಿತಿಗಳು ಸರ್ಕಾರದ ಸೇವೆ ಒದಗಿಸುತ್ತವೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಅನುಷ್ಠಾನಗೊಳಿಸುವ ಜೊತೆಗೆ ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯೂ ನಿಮ್ಮ ಮೇಲಿದೆ. ಆದರೆ, ಪಿಡಿಒಗಳು ನಿರಾಶಕ್ತಿ ತೋರುತ್ತಿರುವುದು ಕಾಣುತ್ತಿದೆ ಎಂದು ಹೇಳಿದರು.

ಗ್ರಾಪಂ ವ್ಯಾಪ್ತಿಯಲ್ಲಿ ಹಿಂದೆ ವಿವಿಧ ಶೀರ್ಷಿಕೆಗಳಡಿ ಕೈಗೊಂಡಿರುವ ಕೆಲಸಗಳನ್ನು ಪೂರ್ಣಗೊಳಿಸಿ, ಪ್ರತಿ ಗ್ರಾಪಂಗೆ ಒಂದು ಕೋಟಿ ರುಪಾಯಿ ಅನುದಾನ ನೀಡಲಾಗುವುದು. ಅಗತ್ಯವಾಗಿ ಆಗಬೇಕಿರುವ ಕೆಲಸಗಳನ್ನು ಪಟ್ಟಿ ಮಾಡಿ ಆದ್ಯತೆಯ ಮೇರೆಗೆ ಕೆಲಸ ಕೈಗೆತ್ತಿಕೊಂಡು ಅಭಿವೃದ್ಧಿಗೆ ಪಿಡಿಓಗಳು ಗಮನ ಹರಿಸಬೇಕು ಎಂದು ಇಕ್ಬಾಲ್ ಹುಸೇನ್ ರವರು ಸೂಚನೆ ನೀಡಿದರು. ಕುಡಿಯುವ ನೀರು, ವಿವಿಧ ನಿಗಮಗಳ ಯೋಜನೆಯ ಅನುಷ್ಠಾನ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಮತ್ತು ಸವಲತ್ತು ವಿತರಣೆ ಮಾಡಿರುವ ಬಗ್ಗೆ ಮಾಹಿತಿ ಪಡೆದ ಶಾಸಕರು, ಅರ್ಹರಿಗೆ ಸವಲತ್ತುಗಳನ್ನು ತಲುಪಿಸಲು ಇಚ್ಚಾಶಕ್ತಿ ತೋರಬೇಕಿದೆ ಎಂದು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.

ಬಲದಂಡೆ ನಾಲೆ ವೀಕ್ಷಣೆ: ಕಾವೇರಿ ನೀರಾವರಿ ನಿಗಮದ ಎಇಇ ಉಮೇರಾರವರು ಮಂಚನಬೆಲೆ ಎಡದಂಡೆ 35 ಕಿ.ಮೀ ನಾಲೆಯಿದ್ದು, 20 ಕಿ.ಮೀ ನೀರು ಬಿಡಲಾಗಿದೆ, ಇನ್ನುಳಿದ ನಾಲೆ ಶುದ್ದೀಕರಣ, ದುರಸ್ಥಗೆ 38 ಕೋಟಿಗೆ ಡಿಪಿಆರ್ ಯೋಜನೆ ಮಾಡಲಾಗಿದೆ. ಬಲದಂಡೆ‌ನಾಲೆ ಪರಿಸ್ಥಿತಿ ಅವಲೋಕಿಸಲು ನೀರು ಹಾಯಿಸಬೇಕಿದೆ. ಅರ್ಕಾವತಿ ನದಿಯ ಎರಡು ಕಡೆಗಳಲ್ಲಿ ತಲಾ 2 ಕಿ.ಮೀಟರ್ ನಲ್ಲಿ 156 ಕೋಟಿ ರು. ವೆಚ್ಚದಲ್ಲಿ ವಾಕಿಂಗ್ ಪಾಥ್ ನಿರ್ಮಾಣ ಯೋಜನೆಯಡಿ ಎರಡು ಕಡೆ 30 ಕಿ.ಮೀ ಭೂ ಸ್ವಾಧೀನ ಆಗಬೇಕಿದೆ. ಗಾಣಾಳು ಏತ ನೀರಾವರಿ ಯೋಜನೆಯಲ್ಲಿ ಕನಕಪುರ ಮತ್ತು ಕೈಲಂಚಾ ಭಾಗದ ಕೆಲವು ಕೆರೆಗಳನ್ನು110 ಕೋಟಿ ವೆಚ್ಚದಲ್ಲಿ 46 ಟ್ಯಾಂಕ್ ಗಳಿಗೆ ನೀರು ತುಂಬಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ಇದಕ್ಕೆ ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯಿಸಿ, ಎಡದಂಡೆ ಮಾದರಿಯಲ್ಲಿಯೇ ಬಲದಂಡೆ ನಾಲೆಯನ್ನು ದುರಸ್ತಿಗೊಳಿಸಿ ನೀರು ಹರಿಸಬೇಕಿದೆ. ಆಗಸ್ಟ್ 10ರಂದು ಬಲದಂಡೆ ನಾಲೆ ವೀಕ್ಷಣೆ ಮಾಡುತ್ತೇನೆ. ಅರ್ಕಾವತಿ ರಿವಲ್ ಫ್ರಂಟ್ ಯೋಜನೆಗೆ ವೇಗ ನೀಡುವಂತೆ ಸೂಚನೆ ನೀಡಿದರು. ಸಣ್ಣ ನೀರಾವರಿ ಇಲಾಖೆ ಎಇಇ ಕೊಟ್ರೇಶ್ ಮಾತನಾಡಿ, 19 ಕೆಲಸಗಳಲ್ಲಿ 11 ಕೆಲಸಗಳು ಮುಗಿ ದಿದ್ದು, 8 ಕೆಲಸಗಳು ಬಾಕಿ ಇವೆ. ಕಾಳೇಗೌಡನದೊಡ್ಡಿ ಏತ ನೀರಾವರಿ ಯೋಜನೆಯ 4 ಕಿ.ಮೀಟರ್ ಪೈಪ್ ಲೈನ್ ಮುಗಿದಿದೆ ಎಂದಾಗ, ಶಾಸಕರು ಪಾದರಹಳ್ಳಿ ಗ್ರಾಮದ ಹಳ್ಳಕ್ಕೆ ನೀರು ಹರಿಸಲು ವಾಲ್ ಇಡುವಂತೆ ಸೂಚಿಸಿದರಲ್ಲದೆ ಅಚ್ಚಲು ಮತ್ತು ಜಕ್ಕನಹಳ್ಳಿ ಕೆಲಸ ಬೇಗ ಮುಗಿಸಿ ಎಂದು ತಿಳಿಸಿದರು.