ಬೆಂಗಳೂರು(ಜು.03): ದೇಶದ ಇತಿಹಾಸದಲ್ಲೇ ಅತಿ ದೊಡ್ಡ ವರ್ಚುವಲ್‌ ಕಾರ್ಯಕ್ರಮದ ಮೂಲಕ ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್‌ ಅವರು ಕೆಪಿಸಿಸಿಯ 41ನೇ ಅಧ್ಯಕ್ಷರಾಗಿ ಗುರುವಾರ ಪದಗ್ರಹಣ ಮಾಡಿದರು.

"

ಡಿಜಿಟಲ್‌ ಸಾಧನಗಳ ಮೂಲಕ ನಾಡಿನ ಎಲ್ಲೆಡೆಯಿಂದ ಈ ಪ್ರತಿಜ್ಞಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸುಮಾರು 20 ಲಕ್ಷ ಕಾಂಗ್ರೆಸ್‌ ಕಾರ್ಯಕರ್ತರ ಸಮ್ಮುಖದಲ್ಲಿ ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವ ಸಂಕಲ್ಪವನ್ನೂ ಶಿವಕುಮಾರ್‌ ತೊಟ್ಟರು.

ಡಿಕೆಶಿ ಪದಗ್ರಹಣ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾರ್ಯಾಧ್ಯಕ್ಷರುಗಳಾದ ಸಲೀಂ ಅಹಮದ್‌, ಈಶ್ವರ್‌ ಖಂಡ್ರೆ ಹಾಗೂ ಸತೀಶ್‌ ಜಾರಕಿಹೊಳಿ ಅವರು ಆನ್‌ಲೈನ್‌ ಮೂಲಕ ಜತೆಗೂಡಿದ್ದ 20 ಲಕ್ಷ ಕಾರ್ಯಕರ್ತರೊಂದಿಗೆ ಪಕ್ಷದ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಇದೇ ವೇಳೆ ಇದೇ ವರ್ಚುವಲ್‌ ಸಮೂಹ ಏಕಕಾಲಕ್ಕೆ ಸಂವಿಧಾನ ಪೀಠಿಕೆಯನ್ನು ಪಠಣ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿತು. ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡ 114 ದಿನಗಳ ನಂತರ ಶಿವಕುಮಾರ್‌ ಪದಗ್ರಹಣ ಮಾಡಿದರು ಎಂಬುದು ವಿಶೇಷ.

ಬೆಳಗ್ಗಿನಿಂದ ಕಾರ್ಯಕ್ರಮ:

ಕೆಪಿಸಿಸಿ ಕಚೇರಿ ಬಳಿ ಬೆಳಗ್ಗೆ 10.30ಕ್ಕೆ ಶುರುವಾದ ಕಾರ್ಯಕ್ರಮದಲ್ಲಿ ಸುಮಾರು 300 ಮಂದಿ ಭಾಗವಹಿಸಿದ್ದರು. ಅಲ್ಲದೆ ಕಾರ್ಯಕ್ರಮದ ನೇರ ಪ್ರಸಾರಕ್ಕಾಗಿ ರಾಜ್ಯದ ವಿವಿಧೆಡೆ 7,800 ಕಡೆ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯಾದ್ಯಂತ ಏರ್ಪಡಿಸಿದ್ದ ಕಾರ್ಯಕ್ರಮಗಳಲ್ಲೂ ಕಾರ್ಯಕರ್ತರು ಶಿಸ್ತು ಹಾಗೂ ಸಂಯಮದಿಂದ ಭಾಗವಹಿಸಿದ್ದರು. ವಿಶೇಷವೆಂದರೆ, ಕೇಂದ್ರದ ಮಾಜಿ ಸಚಿವ ಆಸ್ಕರ್‌ ಫರ್ನಾಂಡಿಸ್‌, ಕೆಪಿಸಿಸಿ ಮಾಜಿ ಅಧ್ಯಕ್ಷ ಜನಾರ್ದನ ಪೂಜಾರಿ, ಹಲವು ಮಠಾ​ಧೀಶರು ಸಹ ಜೂಮ್‌ ಆ್ಯಪ್‌ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಖುದ್ದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಿಂದ ಮೆಚ್ಚುಗೆ ಹಾಗೂ ಶ್ಲಾಘನೆ ದೊರೆಯಿತು.

 

ಡಿಕೆ ಶಿವಕುಮಾರ್ ಯಾರಿಗೂ ಜಗ್ಗೋ ಮಗ ಅಲ್ಲ: ಬಿಜೆಪಿ ಮುಕ್ತ ರಾಷ್ಟ್ರವಾಗಿಸಲು ಕರೆ!

ಸೋನಿಯಾ ಗಾಂಧಿ ಶುಭಾಶಯ ಕೋರಿ ಪತ್ರ ಬರೆದರೆ, ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಯವರು ಕಾರ್ಯಕ್ರಮದ ವೇಳೆಯೇ ಕರೆ ಮಾಡಿ ಅತಿದೊಡ್ಡ ವರ್ಚುಯಲ್‌ ಕಾರ್ಯಕ್ರಮದ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತಪಡಿಸಿದರು. ಜತೆಗೆ ಎಲ್ಲರನ್ನೂ ಒಟ್ಟಿಗೆ ಒಯ್ಯುವ ಮೂಲಕ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವಂತೆ ಕರೆ ನೀಡಿದರು.

ಕಾಂಗ್ರೆಸ್‌ ಪಕ್ಷ ಗೆಲ್ಲಿಸೋಣ, ಬಿಜೆಪಿಮುಕ್ತ ರಾಜ್ಯ ಮಾಡೋಣ

ಕನಕಪುರದ ಬಂಡೆಯಾಗಲು ನನಗಿಷ್ಟವಿಲ್ಲ. ಈ ಬಂಡೆಗೆ ಎಷ್ಟುಉಳಿ ಪೆಟ್ಟುಬಿದ್ದರೂ ಸರಿ ಚಪ್ಪಡಿ ಕಲ್ಲಾಗಿ ವಿಧಾನಸೌಧದ ಮೆಟ್ಟಿಲಾಗುತ್ತೇನೆ. ಪಕ್ಷದ ಕಾರ್ಯಕರ್ತರು, ಮುಖಂಡರು ನನ್ನ ತುಳಿದುಕೊಂಡು ವಿಧಾನಸೌಧದ ಮೂರನೇ ಮಹಡಿ ತಲುಪಿದರೆ ಅಷ್ಟೇ ಸಾಕು. ಒಗ್ಗಟ್ಟಿನಿಂದ ಹೋರಾಡಿ ಕರ್ನಾಟಕವನ್ನು ಬಿಜೆಪಿ ಮುಕ್ತ ರಾಜ್ಯವನ್ನಾಗಿ ಮಾಡೋಣ. ಈ ಉದ್ದೇಶ ಸಾಧನೆಗಾಗಿ ಕಾಂಗ್ರೆಸ್‌ ಅನ್ನು ಕೇಡರ್‌ ಬೇಸ್‌ ಪಕ್ಷವಾಗಿ ಪರಿವರ್ತಿಸಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.