Asianet Suvarna News Asianet Suvarna News

ನನಗೆ ಇಷ್ಟೂ ಶಾಸಕರು ಸಂಪರ್ಕದಲ್ಲಿದ್ದಾರೆ : ಡಿಕೆಶಿ ತಿರುಗೇಟು

  • ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನದ್ದು ಮಿಷನ್‌ -123, ಬಿಜೆಪಿಯವರದ್ದು ಮಿಷನ್‌-150 ಎಂದು ಹೇಳುತ್ತಿದ್ದಾರೆ.
  • ನಾನು 224 ಕ್ಷೇತ್ರಗಳ ಶಾಸಕರ ಜೊತೆಯೂ ಸಂಪರ್ಕದಲ್ಲಿದ್ದೇನೆ. ನಮ್ಮದು ಮಿಷನ್‌ -224 - DKS
DK Shivakumar reacts on nalin Kumar operation  statement snr
Author
Bengaluru, First Published Sep 29, 2021, 7:26 AM IST
  • Facebook
  • Twitter
  • Whatsapp

 ನವದೆಹಲಿ (ಸೆ.29):  ‘ಮುಂಬರುವ ವಿಧಾನಸಭೆ  ಚುನಾವಣೆಯಲ್ಲಿ (Assembly Election) ಜೆಡಿಎಸ್‌ನದ್ದು (JDS) ಮಿಷನ್‌ -123, ಬಿಜೆಪಿಯವರದ್ದು ಮಿಷನ್‌-150 ಎಂದು ಹೇಳುತ್ತಿದ್ದಾರೆ. ಆದರೆ, ನಾನು 224 ಕ್ಷೇತ್ರಗಳ ಶಾಸಕರ ಜೊತೆಯೂ ಸಂಪರ್ಕದಲ್ಲಿದ್ದೇನೆ. ನಮ್ಮದು ಮಿಷನ್‌ -224’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಹೇಳಿದ್ದಾರೆ.

ದೆಹಲಿಯಲ್ಲಿ (Delhi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ 20 ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಾರೆ. ನಾನು 224 ಶಾಸಕರ ಜೊತೆಗೂ ಮಾತನಾಡುತ್ತೇನೆ. ಯಾರ ಜತೆಗೂ ನನಗೆ ಭಿನ್ನಾಭಿಪ್ರಾಯವಿಲ್ಲ. ಸದ್ಯಕ್ಕೆ ನಾವು ಆಪರೇಷನ್‌ ಹಸ್ತದ ವಿಚಾರವಾಗಿ ಯೋಚನೆ ಮಾಡಿಲ್ಲ. ಅವರು (ಬಿಜೆಪಿ) ಎಷ್ಟುಜನರನ್ನು ಕರೆದುಕೊಳ್ಳಬೇಕೋ ಕರೆದುಕೊಳ್ಳಲಿ ಎಂದು ತಿರುಗೇಟು ನೀಡಿದರು.

ಹಲವರ ಸೇರ್ಪಡೆ : ಆಯುಧಪೂಜೆಯೊಳಗೆ ಕಾಂಗ್ರೆಸ್‌ ಹೊಸ ಟೀಂ

ಇದೇ ವೇಳೆ ಕಾಂಗ್ರೆಸ್‌ (Congress) ಶಾಸಕರು ಬಿಜೆಪಿಗೆ ಸೇರಲಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ (Nalin Kumar Kateel) ಕಟೀಲ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ‘ಕಟೀಲ್‌ ಅವರು 20 ಮಂದಿ ಶಾಸಕರು ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋಗುತ್ತಿರುವುದಾಗಿ ಹೇಳಿದ್ದಾರೆ. ಮತ್ತೊಬ್ಬರು ಅರ್ಧ ಗಂಟೆಯಲ್ಲಿ 5 ಮಂದಿಯನ್ನು ಕರೆತರುತ್ತೇನೆ ಎಂದಿದ್ದಾರೆ. ಅವರು ಎಷ್ಟುಜನರನ್ನು ಕರೆದುಕೊಳ್ಳಬೇಕೋ ಕರೆದುಕೊಳ್ಳಲಿ. ಅವರಂತೆ ಸಿನಿಮಾ ಶೈಲಿಯಲ್ಲಿ ನಾನು ನಂಬರ್‌ ಹೇಳುವುದಿಲ್ಲ. ಜೆಡಿಎಸ್‌ನಿಂದ ಯಾರೆಲ್ಲ ಬರಲು ಸಿದ್ಧರಿದ್ದಾರೆ ಎಂಬ ಮಾಹಿತಿ ಬಹಿರಂಗಪಡಿಸಲೂ ಸಾಧ್ಯವಿಲ್ಲ. ನಮಗೂ ಅವರಿಗೂ ವ್ಯತ್ಯಾಸವಿರಬೇಕಲ್ಲ’ ಎಂದು ಹೇಳಿದರು.

ಬಿಜೆಪಿಯವರು ಏಕೆ ವಿಳಂಬ ಮಾಡುತ್ತಿದ್ದಾರೆ?:

ಕಾಂಗ್ರೆಸ್‌ ಶಾಸಕರು ಬಿಜೆಪಿ ಸೇರ್ಪಡೆ ಸಂಬಂಧ ನಾನು ಯಡಿಯೂರಪ್ಪ ಅವರ ಹೇಳಿಕೆ ಗಮನಿಸಿದ್ದೇನೆ. ಬಿಜೆಪಿ ರಾಜ್ಯಾಧ್ಯಕ್ಷರಾದ ಕಟೀಲ್ ಕೂಡ ನಮ್ಮಿಂದ 20 ಶಾಸಕರು ಅವರ ಪಕ್ಷಕ್ಕೆ ಬರುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರು ನಮ್ಮ ಶಾಸಕರನ್ನು ಸೇರಿಸಿಕೊಳ್ಳಲು ಯಾಕೆ ವಿಳಂಬ ಮಾಡುತ್ತಿದ್ದಾರೋ ಗೊತ್ತಿಲ್ಲ. ಅವರು 20, 30, 40 ಅಥವಾ 68 ಶಾಸಕರನ್ನೂ ಸೆಳೆಯುವ ಪ್ರಯತ್ನ ಮಾಡಲಿ. ನನ್ನನ್ನು ಹಾಗೂ ಸಿದ್ದರಾಮಯ್ಯ (Siddaramaiah) ಅವರನ್ನು ಪರಿಗಣಿಸಿದ್ದಾರೋ, ಇಲ್ಲವೋ ಗೊತ್ತಿಲ್ಲ. ಸಿನಿಮಾ ಶೈಲಿಯ ನಂಬರ್‌ ಹೇಳುತ್ತಿದ್ದಾರೆ. ಎಲ್ಲವೂ ಮುಗಿಯಲಿ ಎಂದು ವ್ಯಂಗ್ಯವಾಡಿದರು.

ನಮ್ಮ ಪಕ್ಷದ ಸಿದ್ಧಾಂತ, ನಾಯಕತ್ವದ ಬಗ್ಗೆ ಯಾರಿಗೆ ನಂಬಿಕೆ ಇದೆಯೋ, ಅವರೆಲ್ಲ ಪಕ್ಷ ಸೇರಲು ಅರ್ಜಿ ಹಾಕಬೇಕು. ಅದನ್ನು ಪರಿಶೀಲಿಸಲು ಒಂದು ಸಮಿತಿ ಇದೆ. ಯಾರೇ ಬಂದರೂ ಬೇಷರತ್ತಾಗಿ ಬೆಂಬಲ ನೀಡಬೇಕು ಎಂದು ಹೇಳಿದ್ದೇವೆ ಎಂದರು.

ಬಿಜೆಪಿಯ ಸುರೇಶ್‌ಗೌಡ ಅವರ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ರಾಜಣ್ಣ ಅವರು ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಯಿಸಿದ ಅವರು, ಈ ವಿಚಾರವಾಗಿ ಮಾಹಿತಿ ಪಡೆಯುತ್ತೇನೆ. ಈಗ ಅದರ ಬಗ್ಗೆ ಮಾತನಾಡಿ ರಾಜಣ್ಣ ಹಾಗೂ ಸುರೇಶ್‌ ಅವರ ಘನತೆಗೆ ಧಕ್ಕೆ ತರುವುದಿಲ್ಲ ಎಂದು ಹೇಳಿದರು.

Follow Us:
Download App:
  • android
  • ios