ಎಐಸಿಸಿ ಅಧ್ಯಕ್ಷ: ಖರ್ಗೆ ಆಯ್ಕೆಯಿಂದ ಭಾರತಕ್ಕೇ ಶಕ್ತಿ, ಡಿಕೆಶಿ
ಖರ್ಗೆ ಶ್ರಮದಿಂದ ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ: ವಿಶ್ವಾಸ
ಬೆಂಗಳೂರು(ಅ.20): ‘ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಿಂದ ಕೇವಲ ರಾಜ್ಯ, ದಕ್ಷಿಣ ಭಾರತಕ್ಕೆ ಮಾತ್ರವಲ್ಲ ಅಖಂಡ ಭಾರತಕ್ಕೆ ಶಕ್ತಿ ಬಂದಂತಾಗಿದೆ. ಕರ್ನಾಟಕ ಮಾತ್ರವಲ್ಲ ದೇಶದ ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ತರುವ ಸವಾಲು ಅವರ ಮೇಲಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸಲಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಖರ್ಗೆ ಅವರ ಆಯ್ಕೆ ದೇಶಕ್ಕೆ ದೊಡ್ಡ ಸಂದೇಶ ರವಾನಿಸಿದೆ. ಖರ್ಗೆ ಅವರು ಮೂರನೇ ಶಕ್ತಿ ಕೇಂದ್ರ ಆಗುವುದಿಲ್ಲ. ಎಐಸಿಸಿ ಅಧ್ಯಕ್ಷ ಸ್ಥಾನವೇ ಶಕ್ತಿ ಕೇಂದ್ರ’ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು.
‘ನಿಜಲಿಂಗಪ್ಪನವರ ನಂತರ ದೇಶದ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗರು ಆಯ್ಕೆಯಾಗಿರುವುದು ನಮ್ಮ ಪಾಲಿಗೆ ಭಾಗ್ಯ. ಪಕ್ಷಕ್ಕೆ ನಿಷ್ಠರಾಗಿ ಶ್ರಮಿಸಿದರೆ ಯಾವ ಹಂತದವರೆಗೆ ಬೇಕಾದರೂ ಬೆಳೆಯಬಹುದು ಎಂಬುದಕ್ಕೆ ಖರ್ಗೆ ಅವರು ಸಾಕ್ಷಿ’ ಎಂದು ಹೇಳಿದರು.
ಕನ್ನಡಿಗರ ಹಿರಿಮೆ ಹೆಚ್ಚಿಸಿದ ಖರ್ಗೆ ಗೆಲುವಿಗೆ ಆಂಜನೇಯ ಸಂತಸ
ನನಗೂ ಸ್ಪರ್ಧಿಸ್ತೀರಾ ಎಂದು ಸೋನಿಯಾ ಕೇಳಿದ್ರು: ಡಿಕೆಶಿ
ಬೆಂಗಳೂರು: ಪಕ್ಷದ ವರಿಷ್ಠರಾದ ಸೋನಿಯಾಗಾಂಧಿ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತೀರಾ? ಎಂದು ತಮಾಷೆಯಾಗಿ ಕೇಳಿದ್ದರು ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
‘ನಾನು ಹಾಗೂ ಡಿ.ಕೆ. ಸುರೇಶ್ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ‘ನಿಮ್ಮ ಕುಟುಂಬದವರೇ ಅಧ್ಯಕ್ಷರಾಗಬೇಕು’ ಎಂದು ಕೇಳಿದ್ದೆವು. ಆಗ ಅವರು ನಗುತ್ತಲೇ ‘ನೀವು ಸ್ಪರ್ಧಿಸುತ್ತೀರಾ?’ ಎಂದು ಕೇಳಿದ್ದರು. ನಾನು ಆಗ ಈಗಾಗಲೇ ಕೊಟ್ಟಿರುವ ಜವಾಬ್ದಾರಿಯೇ ಹೆಚ್ಚಾಗಿದೆ. ಅಷ್ಟೊಂದು ದೊಡ್ಡ ಸ್ಥಾನ ಬೇಡ ಎಂದಿದ್ದೆ’ ಎಂದರು.
ಪ್ರಿಯಾಂಕ ಬರುವ ವಿಶ್ವಾಸ: ಡಿಕೆಶಿ
ಬೆಂಗಳೂರು: ರಾಯಚೂರಿನ ಭಾರತ ಜೋಡೋ ಯಾತ್ರೆಗೆ ಪ್ರಿಯಾಂಕಾ ಗಾಂಧಿ ಅವರು ಆಗಮಿಸುವ ವಿಶ್ವಾಸವಿದೆ. ಈಗಾಗಲೇ ಸೋನಿಯಾ ಗಾಂಧಿ ಅವರು ಮೂರು ದಿನ ರಾಜ್ಯದಲ್ಲೇ ವಾಸ್ತವ್ಯ ಹೂಡಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದರು. ರಾಹುಲ್ ಗಾಂಧಿ ಅವರು ಇನ್ನೆರಡು ದಿನ ಮಾತ್ರ ರಾಜ್ಯದಲ್ಲಿ ಪಾದಯಾತ್ರೆ ನಡೆಸಲಿದ್ದು, ಈ ವೇಳೆ ಪ್ರಿಯಾಂಕ ಗಾಂಧಿ ಹೆಜ್ಜೆ ಹಾಕುವ ವಿಶ್ವಾಸವಿದೆ ಎಂದರು.