Asianet Suvarna News Asianet Suvarna News

ಮುಂಬರುವ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲು ನಿರ್ಧಾರ: ಡಿಕೆಶಿ ಪ್ರತಿಕ್ರಿಯೆ

*   ಪಕ್ಷದ ವರಿಷ್ಠರು, ರಾಹುಲ್‌ ತೀರ್ಮಾನ
*  ಸಿದ್ದರಾಮಯ್ಯ ಹಾಗೂ ತಮ್ಮ ನಡುವಿನ ನಾಯಕತ್ವ ಪೈಪೋಟಿ
*  ಸಿದ್ದರಾಮೋತ್ಸವಕ್ಕೆ ಹೋಗುವೆ 8 ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಣೆ ತಪ್ಪಿಲ್ಲ 

DK Shivakumar React on Mass leadership in Karnataka Assembly Elections 2023 grg
Author
Bengaluru, First Published Jul 4, 2022, 4:30 AM IST

ಬೆಂಗಳೂರು(ಜು.04):  ರಾಹುಲ್‌ ಗಾಂಧಿ ಹಾಗೂ ಪಕ್ಷದ ವರಿಷ್ಠರು ಮುಂಬರುವ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಬೇಕು ಎಂದು ತೀರ್ಮಾನಿಸಿದ್ದಾರೆ. ಹೀಗಾಗಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಯನ್ನೇ ಎದುರಿಸಲಿದ್ದೇವೆ. ಪಕ್ಷದ ಅಧ್ಯಕ್ಷನಾಗಿ ಈ ಮಾತು ಹೇಳುತ್ತಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ಸಿದ್ದರಾಮಯ್ಯ ಹಾಗೂ ತಮ್ಮ ನಡುವಿನ ನಾಯಕತ್ವ ಪೈಪೋಟಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ವ್ಯಕ್ತಿಗಿಂತ ಪಕ್ಷ ನಿಷ್ಠೆಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟವರು ನಾವು. ನನಗೆ ಸಚಿವ ಸ್ಥಾನ ಸಿಗದಿದ್ದಾಗಲೂ ಉಸಿರು ಎತ್ತರಲಿಲ್ಲ. ಅಷ್ಟೆಅಲ್ಲ, ಸಿದ್ದರಾಮಯ್ಯ ಪರ ನಡೆದ ಹೋರಾಟದಲ್ಲಿ ಭಾಗಿಯಾದವನು. ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುವಾಗ ಪ್ರಚಾರ ಸಮಿತಿ ಅಧ್ಯಕ್ಷನಾಗಿದ್ದವನು.
ಮುಂದೆ ಪಕ್ಷ ಸೋತಾಗಲೂ ಅವರನ್ನೇ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮಾಡಬೇಕು ಎಂದು ಶಾಸಕರಾಗಿ ಹೇಳಿದ್ದವನು. ಹೀಗಾಗಿ ನನಗೆ ವ್ಯಕ್ತಿಗಿಂತ ಪಕ್ಷದ ಹಿತ ಮುಖ್ಯ. ನಾನು ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆ ಮಾಡುವವನು ಎಂದರು.

ಡಿಕೆ ಶಿವಕುಮಾರ್ ಮನೆಗೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ!

ಸಮೀಕ್ಷೆ ನಮ್ಮ ಪರವಾಗಿದೆ:

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ನಾಯಕರು ಸೇರಿದಂತೆ ಎಲ್ಲರೂ ಮಾತನಾಡುತ್ತಿದ್ದಾರೆ. ಪಕ್ಷದ ವತಿಯಿಂದ ನಡೆಸಿದ ಸಮೀಕ್ಷೆಯೂ ಪರಿಸ್ಥಿತಿ ಪೂರಕವಾಗಿದೆ ಎಂದೇ ಹೇಳಿದೆ. ಸಮೀಕ್ಷೆ ಪಕ್ಕಕ್ಕಿಟ್ಟರೂ ಇತ್ತೀಚೆಗೆ ನಡೆದ ಉಪ ಚುನಾವಣೆಗಳಲ್ಲಿ ಬಿಜೆಪಿಯವರು ಎಷ್ಟುಗೆದ್ದಿದ್ದಾರೋ ನಾವು ಅಷ್ಟೇ ಗೆದ್ದಿದ್ದೇವೆ. ಪರಿಷತ್‌ ಚುನಾವಣೆಯಲ್ಲೂ ಪಕ್ಷ ಉತ್ತಮ ಸಾಧನೆ ಮಾಡಿದೆ. ನಮ್ಮ ಸರ್ಕಾರ ಇದ್ದಾಗ ಮಂಡ್ಯ, ತುಮಕೂರಿನಲ್ಲಿ ಪಕ್ಷ ಸೋತಿತ್ತು. ಈ ಬಾರಿ ಗೆದ್ದಿದ್ದೇವೆ.

ಪದವೀಧರ ಹಾಗೂ ಶಿಕ್ಷಕ ಕ್ಷೇತ್ರದ ಚುನಾವಣೆಯಲ್ಲಿ ನಾವು ಗೆದ್ದಿರಲಿಲ್ಲ, ಈಗ ಗೆದ್ದಿದ್ದೇವೆ. ಚುನಾಯಿತ ಪ್ರತಿನಿಧಿಗಳು ನಮ್ಮ ಪಕ್ಷಕ್ಕೆ ಬೆಂಬಲ ನೀಡಿದ್ದರು. ಈಗ ವಿದ್ಯಾವಂತರು, ಶಿಕ್ಷಕರು ಹಾಗೂ ಪ್ರಜ್ಞಾವಂತರು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಇದು ಜನರ ಅಭಿಪ್ರಾಯ ಏನು ಎಂಬುದನ್ನು ತಿಳಿಸುತ್ತಿದೆ. ಎಲ್ಲರೂ ಉತ್ತಮ ಆಡಳಿತಕ್ಕೆ ಕಾಂಗ್ರೆಸ್‌ ಬರಬೇಕು ಎಂದು ಬಯಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ನಕಲಿ ಸಮೀಕ್ಷೆ ಮಾಡಲಾಗಿದೆ ಎಂಬ ಬಿಜೆಪಿ ಆರೋಪಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ, ‘ನಾನು ಸಮೀಕ್ಷೆ ಬಗ್ಗೆ ಮಾತನಾಡುತ್ತಿಲ್ಲ. ಅದರ ಹೊರತಾಗಿ ಉಪ ಚುನಾವಣೆಗಳ ಫಲಿತಾಂಶ ನೋಡಿದಾಗಲೂ ವಾಸ್ತವ ಅರಿವಾಗುತ್ತದೆ. ಸಮೀಕ್ಷೆ ವರದಿಗಳೆಲ್ಲವೂ ಸತ್ಯ ಎಂದು ಹೇಳುವುದಿಲ್ಲ. ಪರಿಷತ್‌ ಚುನಾವಣೆ ಫಲಿತಾಂಶದ ಮೇಲೆ ಜನರ ಅಭಿಪ್ರಾಯದ ಬಗ್ಗೆ ನೀವೇ ವಿಶ್ಲೇಷಣೆ ಮಾಡಿ’ ಎಂದು ತಿಳಿಸಿದರು.

ಸಿದ್ದರಾಮೋತ್ಸವಕ್ಕೆ ಹೋಗುವೆ 8 ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಣೆ ತಪ್ಪಿಲ್ಲ: ಡಿಕೆಶಿ

ಸಿದ್ದರಾಮೋತ್ಸವ ಕಾರ್ಯಕ್ರಮದ ಬಗೆಗಿನ ಬಿಜೆಪಿ ಟೀಕೆಗೆ, ಬೇರೆಯವರು ಏನಾದರೂ ಹೇಳಲಿ. ಸಿದ್ದರಾಮಯ್ಯ ಅವರ ಹುಟ್ಟುಹಬ್ಬವನ್ನು ಆಚರಿಸಲು ಅಭಿಮಾನಿಗಳು ಬಯಸುತ್ತಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ. ನನಗೂ ಸಿದ್ದರಾಮಯ್ಯ ಆಹ್ವಾನ ಕೊಟ್ಟಿದ್ದಾರೆ. ನಾನೂ ಹೋಗುತ್ತಿದ್ದೇನೆ ಎಂದು ಹೇಳಿದರು.

ಇದು ಶಕ್ತಿ ಪ್ರದರ್ಶನ ಅಲ್ಲವೇ ಎಂದು ಕೇಳಿದ ಪ್ರಶ್ನೆಗೆ, ನಮ್ಮ ಪಕ್ಷಕ್ಕೆ ಏನೆಲ್ಲಾ ಅನುಕೂಲವಾಗುತ್ತದೆಯೋ ಅದನ್ನೆಲ್ಲ ಮಾಡೋಣ. ಇನ್ನು ಖರ್ಗೆ ಅವರು ಶಾಸಕರಾಗಿ 50 ವರ್ಷ ಆಗಿದೆ, ಆ ಕಾರ್ಯಕ್ರಮ ಮಾಡಬೇಕು ಎಂದು ಅವರ ಅಭಿಮಾನಿಗಳು ಕೇಳುತ್ತಾರೆ. ಪರಮೇಶ್ವರ್‌ ಅವರ ಅಭಿಮಾನಿಗಳು ಬಂದು ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಾಡಬೇಕು ಎಂದು ಕೇಳುತ್ತಾರೆ. ಒಬ್ಬೊಬ್ಬರದ್ದು ಒಂದೊಂದು ಆಸೆ ಇರುತ್ತದೆ. ಅದನ್ನು ತಪ್ಪು ಎಂದು ಹೇಳಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಸವದತ್ತಿಯಿಂದ ಸಿದ್ದರಾಮಯ್ಯ ಸ್ಪರ್ಧೆ: ಸತೀಶ ಜಾರಕಿಹೊಳಿ ಹೇಳಿದ್ದಿಷ್ಟು

ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಕಾರ್ಯಕ್ರಮ ಪಕ್ಷದ ಆಶ್ರಯದಲ್ಲಿ ನಡೆಯುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ಈ ಕಾರ್ಯಕ್ರಮಕ್ಕೆ ಒಂದು ಸಮಿತಿ ರಚಿಸಿಕೊಂಡಿದ್ದು ಅದರಡಿ ಮಾಡುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ರಾಹುಲ್‌ ಗಾಂಧಿ ಅವರ ಆಗಮನದ ಬಗ್ಗೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರು ಆಹ್ವಾನ ನೀಡಿರಬಹುದು. ನನಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದರು.

ಜಾತಿ ಸಮಾವೇಶ ನಡೆಸುವ ಬಗ್ಗೆ ಮಾತನಾಡಿದ ಅವರು, ’ ಎಲ್ಲಾ ಸಮಾಜದವರು ಮಾಡಲು ಮುಂದಾಗಿದ್ದಾರೆ. ನಮ್ಮ ಸಮಾಜದ್ದೂ ಆಗಿದೆ. ಬೇರೆ ಸಮಾಜದ್ದೂ ಆಗಿವೆ. ಮಡಿವಾಳರ ಸಮಾಜದ ಸಮಾವೇಶವೂ ಆಗಿದೆ. ಚುನಾವಣೆಗೂ ಮುನ್ನ ಅವರು ತಮ್ಮ ಬೇಡಿಕೆ ಮುಂದಿಡುವುದರಲ್ಲಿ ತಪ್ಪೇನಿಲ್ಲ ಎಂದರು.

ರಾಜಣ್ಣ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ: ಡಿಕೆಶಿ

ಎಚ್‌.ಡಿ. ದೇವೇಗೌಡರ ಕುರಿತ ಕೆ.ಎನ್‌ ರಾಜಣ್ಣ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ರಾಜಣ್ಣ ಅವರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅವರು ಕ್ಷಮೆ ಕೇಳಬೇಕು ಎಂದು ನಾನು ಹಾಗೂ ಪಕ್ಷದ ವರಿಷ್ಠರು ಸೂಚಿಸಿದ್ದೆವು. ಅವರು ಕೂಡ ಗೌರವಯುತವಾಗಿ ಕ್ಷಮೆ ಕೇಳಿದ್ದಾರೆ. ಈ ವಿಚಾರ ಇಲ್ಲಿಗೆ ಬಿಡೋಣ. ನಮ್ಮನ್ನು ಒಂದಲ್ಲಾ ಒಂದು ದಿನ ಹೊತ್ತುಕೊಂಡು ಹೋಗಬೇಕು. ಇದೇ ಪ್ರಕೃತಿ ನಿಯಮ ಎಂದರು.
 

Follow Us:
Download App:
  • android
  • ios