ಬೆಂಗಳೂರು (ನ.11):  ಹೊಸ ನಾಯಕತ್ವದ ಹುರುಪಿನಲ್ಲಿ ವಿನೂತನ ಜಾತಿ ಸಮೀಕರಣ ರೂಪಿಸಿ ಪಕ್ಷದ ಬಲವನ್ನು ಹೆಚ್ಚಿಸುವ ಉಮೇದಿಯಲ್ಲಿ ಹೊರಟಿದ್ದ ಕಾಂಗ್ರೆಸ್‌ಗೆ ಉಪ ಚುನಾವಣೆ ಸೋಲು (ಅದರಲ್ಲೂ ಸೋಲಿನ ಅಂತರ) ತೊಡರುಗಾಲು ಹಾಕಿದೆ. ವಿಶೇಷವಾಗಿ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಎದುರಿಸಿದ ಪ್ರಥಮ ಪರೀಕ್ಷೆಯಲ್ಲಿ ಸಮಾಧಾನಕರ ಅಂಕವನ್ನು ಪಡೆಯಲಿಲ್ಲ ಎಂಬ ಟೀಕೆಯನ್ನು ಡಿ.ಕೆ. ಶಿವಕುಮಾರ್‌ ಎದುರಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳ ಜತೆಗೆ ಒಕ್ಕಲಿಗ ಮತಗಳನ್ನು ಒಗ್ಗೂಡಿಸುವ ಪಕ್ಷಕ್ಕೆ ಬಲ ತುಂಬುತ್ತಾರೆ ಹಾಗೂ ಪಕ್ಷವನ್ನು ಕಡಿಮೆ ಅವಧಿಯಲ್ಲೇ ತಳ ಮಟ್ಟದ ಸಂಘಟನೆ ಮಾಡುತ್ತಾರೆ ಎಂಬ ನಿರೀಕ್ಷೆಯನ್ನಿಟ್ಟುಕೊಂಡೇ ಕಾಂಗ್ರೆಸ್‌ ಹೈಕಮಾಂಡ್‌ ಡಿ.ಕೆ. ಶಿವಕುಮಾರ್‌ ಅವರನ್ನು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಆಯ್ಕೆ ಮಾಡಿತ್ತು. ರಾಜ್ಯದಲ್ಲಿ ದುರ್ಬಲಗೊಳ್ಳುತ್ತಿರುವ ಜೆಡಿಎಸ್‌ ಬಗ್ಗೆ ಭ್ರಮನಿರಸನ ಹೊಂದಿರುವ ಒಕ್ಕಲಿಗ ಮತದಾರರನ್ನು ಕಾಂಗ್ರೆಸ್‌ ಕಡೆಗೆ ಸೆಳೆಯುವ ಶಕ್ತಿ ಶಿವಕುಮಾರ್‌ಗೆ ಇದೆ ಎಂಬ ನಂಬಿಕೆ ಈ ಆಯ್ಕೆಗೆ ಕಾರಣವಾಗಿತ್ತು.

ಡಿಕೆಶಿ ಹೊಸ ಸವಾಲಿಗೆ ಸಿದ್ಧತೆ : ಭವಿಷ್ಯದ ಬಗ್ಗೆ ಮಾಸ್ಟರ್ ಪ್ಲಾನ್ ...

ಒಕ್ಕಲಿಗ ಬಾಹುಳ್ಯವುಳ್ಳ ಕ್ಷೇತ್ರಗಳಾಗಿದ್ದ ರಾಜರಾಜೇಶ್ವರಿ ನಗರ ಹಾಗೂ ಶಿರಾ ಕ್ಷೇತ್ರಗಳ ಸೋಲು ಈ ನಂಬಿಕೆಗೆ ತುಸು ಹೊಡೆತ ನೀಡಿದೆ. ಇದನ್ನ ಬಳಸಿಕೊಳ್ಳಲು ಕಾಂಗ್ರೆಸ್‌ನೊಳಗಿನ ಅವರ ವಿರೋಧಿ ಗುಂಪು ಪ್ರಯತ್ನ ಆರಂಭಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಮೂಲಗಳ ಪ್ರಕಾರ ಶಿವಕುಮಾರ್‌ ಅವರನ್ನು ಒಕ್ಕಲಿಗರು ಸಾರಸಗಟಾಗಿ ಒಪ್ಪುವುದಿಲ್ಲ ಎಂದು ಬಿಂಬಿಸಿ ಮತ್ತೊಂದು ಪರ್ಯಾಯ ಜಾತಿ ಸಮೀಕರಣ ಮುಂದಿಡುವ ಪ್ರಯತ್ನವನ್ನು ಪಕ್ಷದವೊಂದು ಬಣ ಶೀಘ್ರವೇ ಆರಂಭಿಸಲಿದೆ. ಹಾಗಂತ ಇದು ಖುಲ್ಲಂಖುಲ್ಲಾ ನಡೆಯುವುದಿಲ್ಲ. ಮುಂದಿನ ಸಾರ್ವಜನಿಕ ಚುನಾವಣೆ ವೇಳೆಗೆ ಫಲಕೊಡುವಂತೆ ಮಾಡಲು ಈಗಿನಿಂದಲೂ ಮುಗುಂ ಆಗಿ ಇಂತಹದೊಂದು ಒಳಸುಳಿ ಆರಂಭಗೊಳ್ಳಲಿದ್ದು, ಅದಕ್ಕೆ ಈ ಫಲಿತಾಂಶ ವೇದಿಕೆ ಕಲ್ಪಿಸಿದೆ ಎನ್ನಲಾಗುತ್ತಿದೆ.

ಏನಿದು ಹೊಸ ಸಮೀಕರಣ?:

ಸಾರ್ವತ್ರಿಕ ಚುನಾವಣೆಗೆ ಇನ್ನೂ ಮೂರು ವರ್ಷವಿದೆ. ಅಲ್ಲಿಯವರೆಗೂ ನಡೆಯುವ ಉಪ ಚುನಾವಣೆ, ಬಿಬಿಎಂಪಿ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷ ಹಿನ್ನೆಡೆ ಸಾಧಿಸಿದರೆ ಅದರ ಹೊಣೆ ಸಹಜವಾಗಿಯೇ ಶಿವಕುಮಾರ್‌ ಹೆಗಲಿಗೆ ವರ್ಗಾವಣೆಯಾಗಲಿದೆ. ಒಕ್ಕಲಿಗ ಮತವನ್ನು ಪಕ್ಷಕ್ಕೆ ತರುವಲ್ಲಿ ಶಿವಕುಮಾರ್‌ ನಿರೀಕ್ಷಿಸಿದಷ್ಟುಯಶಸ್ವಿಯಲ್ಲ ಎಂದು ಬಿಂಬಿಸಿ ಅದಕ್ಕೆ ಪರ್ಯಾಯವಾಗಿ ಕುರುಬ, ಒಕ್ಕಲಿಗ ಹಾಗೂ ಲಿಂಗಾಯಿತ ಸಮೀಕರಣವನ್ನು ಹೈಕಮಾಂಡ್‌ ಹೈಕಮಾಂಡ್‌ ಮುಂದಿಡುವುದು ಉದ್ದೇಶ.

ಅದರಂತೆ ಚುನಾವಣೆ ಸಮೀಪಿಸುವ ವೇಳೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಪಕ್ಷದ ನಾಯಕತ್ವಕ್ಕೆ (ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ) ಸೂಚಿಸುವುದು. ಕೃಷ್ಣ ಬೈರೇಗೌಡ ಅವರ ಹೆಸರನ್ನು ಕಾರ್ಯಾಧ್ಯಕ್ಷ ಸ್ಥಾನಕ್ಕೆ ಸೂಚಿಸುವುದು ಮತ್ತು ಎಂ.ಬಿ. ಪಾಟೀಲ್‌ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷ ಹುದ್ದೆಗೆ ಬಿಂಬಿಸುವುದು. ಇದು ಬಹಳ ದೂರದ ಆಲೋಚನೆಯಾದರೂ ಇಂತಹದೊಂದು ಆಲೋಚನೆ ಈಗಾಗಲೇ ಮೊಳೆತಿದೆ ಎಂದೇ ಮೂಲಗಳು ಹೇಳುತ್ತವೆ.