ಬೆಂಗಳೂರು, (ಜ.05): ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತು ಗೊಂದಲಗಳು ಮುಂದುವರೆದಿದ್ದು, ಈ ನಡುವಲ್ಲೇ ಡಿಕೆ.ಶಿವಕುಮಾರ್  ದಿಢೀರ್  ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಶನಿವಾರ ಡಾ.ಜಿ.ಪರಮೇಶ್ವರ್ ನಿವಾಸದಲ್ಲಿ ಕಾಂಗ್ರೆಸ್‌ ಹಿರಿಯ ನಾಯಕ, ವರಿಷ್ಠ ಬಳಗದಲ್ಲಿ ಗುರುತಿಸಿಕೊಂಡಿರುವ ಗುಲಾಮ್‌ ನಬಿ ನೇತೃತ್ವದಲ್ಲಿ ಸಭೆ ನಡೆಸಿದ್ದರು.

ಇದರ ಬೆನ್ನಲ್ಲೇ ಭಾನುವಾರ ಕಾವೇರಿ ನಿವಾಸದಲ್ಲಿ ಡಿ. ಕೆ. ಶಿವಕುಮಾರ್ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಡಿಕೆಶಿ ಕೆಪಿಸಿಸಿ ಪಟ್ಟ ಕಟ್ಟುವುದು ಬಹುತೇಕ ಖಚಿತ ಎನ್ನಲಾಗಿದೆ. ಆದ್ರೆ, ಮತ್ತೊಂದೆಡೆ ಕೆ. ಎಚ್. ಮುನಿಯಪ್ಪ, ಬಿ. ಕೆ. ಹರಿಪ್ರಸಾದ್ ಸೇರಿದಂತೆ ಇನ್ನಷ್ಟು ಕೆಲ ಮೂಲ ಕಾಂಗ್ರೆಸ್ಸಿಗರು ನಮಗೂ ಬೇಕೆಂದು ಪಟ್ಟುಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಇದನ್ನು ಬಗೆಹರಿಸಿ ಎಂದು ಡಿಕೆಶಿ ಸಿದ್ದರಾಮಯ್ಯನವರ ಮೊರೆ ಹೋಗಿದ್ದಾರೆ.

ಪರಂ ನಿವಾಸದಲ್ಲಿ ನಡೆದ ಸಭೆ
ಶನಿವಾರ ಡಾ.ಜಿ.ಪರಮೇಶ್ವರ್ ನಿವಾಸದಲ್ಲಿ ಕಾಂಗ್ರೆಸ್‌ ಹಿರಿಯ ನಾಯಕ, ವರಿಷ್ಠ ಬಳಗದಲ್ಲಿ ಗುರುತಿಸಿಕೊಂಡಿರುವ ಗುಲಾಮ್‌ ನಬಿ ನೇತೃತ್ವದಲ್ಲಿ ಸಭೆ ನಡೆದಿದೆ. ಈ ವೇಳೆ ಕೆಪಿಸಿಸಿ ಹಾಗೂ ಶಾಸಕಾಂಗ ನಾಯಕ ಆಯ್ಕೆ ಬಗ್ಗೆ ಸುದೀರ್ಘ ಚರ್ಚೆಗಳು ನಡೆದಿವೆ.  

ಸಿಎಲ್‌ಪಿ ನಾಯಕ ಮತ್ತು ಪ್ರತಿಪಕ್ಷ ನಾಯಕ ಸ್ಥಾನವನ್ನು ಪ್ರತ್ಯೇಕಿಸುವ ಬಗ್ಗೆ ಚರ್ಚೆ ನಡೆದಿದ್ದು, ಇದಕ್ಕೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಸಿಎಲ್‌ಪಿ ನಾಯಕರು ಆಗುವವರೇ ಪ್ರತಿಪಕ್ಷ ನಾಯಕರಾಗಿರುತ್ತಾರೆ. ಇಲ್ಲಿವರೆಗೆ ಅದೇ ರೀತಿ ನಡೆದುಕೊಂಡು ಬಂದಿದೆ. ಇದೀಗ ಅದನ್ನು ಬದಲಿಸುವುದು ಬೇಡ ಎಂದು ಸಿದ್ದರಾಮಯ್ಯ ಅವರು ಶನಿವಾರ ನಡೆದ ಸಭೆಯಲ್ಲಿ ಅಭಿಪ್ರಾಯ ತಿಳಿಸಿದ್ದಾರೆ.