ರಾಜ್ಯದ ನೀರಾವರಿ ವಿಚಾರವಾಗಿ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ನಮ್ಮ ರಾಜ್ಯದ ಸಂಸದರು ಹೋರಾಟ ಮಾಡಬೇಕು. ಆಗ ಅವರು ಸಂಸದರಾಗಿರಲು ಅರ್ಹರಿರುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆಗ್ರಹಿಸಿದರು.

ಬೆಂಗಳೂರು (ನ.13): ರಾಜ್ಯದ ನೀರಾವರಿ ವಿಚಾರವಾಗಿ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ನಮ್ಮ ರಾಜ್ಯದ ಸಂಸದರು ಹೋರಾಟ ಮಾಡಬೇಕು. ಆಗ ಅವರು ಸಂಸದರಾಗಿರಲು ಅರ್ಹರಿರುತ್ತಾರೆ. ಇಲ್ಲದಿದ್ದರೆ ವಿಶ್ವಾಸ ಕಳೆದುಕೊಳ್ಳುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆಗ್ರಹಿಸಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌. ನೀರಾವರಿ ಯೋಜನೆಗಳಿಗೆ ಸಂಬಂಧಿಸಿ ನನ್ನದೇ ಆದ ಯೋಜನೆ ರೂಪಿಸುತ್ತಿದ್ದೇನೆ. ಮಹದಾಯಿ, ಎತ್ತಿನಹೊಳೆ ಯೋಜನೆ ವಿಚಾರವಾಗಿ ಅರಣ್ಯ ಇಲಾಖೆ ತಕರಾರು ಹಾಕಿಕೊಂಡಿದೆ.

ಎತ್ತಿನಹೊಳೆ ಯೋಜನೆಯ ಮಣ್ಣು ತೆಗೆದು ಕಂದಾಯ ಭೂಮಿಯಲ್ಲಿ ಹಾಕಿದ್ದರೂ ಅರಣ್ಯ ಭೂಮಿ ಎಂದು ಹೇಳುತ್ತಿದ್ದಾರೆ. ಅರಣ್ಯ ಭೂಮಿಗೆ ಪರ್ಯಾಯ ಭೂಮಿ ನೀಡಲು ಮುಂದಾಗಿದ್ದೇವೆ. ಅದಕ್ಕೂ ಅನುಮತಿ ನೀಡುತ್ತಿಲ್ಲ. ಹೀಗೆ ವಿಳಂಬವಾದರೆ ಯೋಜನಾ ವೆಚ್ಚ ಏರಿಕೆಯಾಗಲಿದೆ. ಕೇಂದ್ರ ಸರ್ಕಾರ ನಮಗೆ ಕೊಡಬೇಕಾದ ಹಣವನ್ನೂ ಕೊಡುತ್ತಿಲ್ಲ. ಯೋಜನೆಗಳಿಗೆ ಅನುಮತಿಯನ್ನೂ ನೀಡುತ್ತಿಲ್ಲ ಎಂದರು. ರಾಜ್ಯ ನಿಯೋಗ ಕೊಂಡೊಯ್ಯುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಕೇವಲ ನಿಯೋಗ ಮಾತ್ರವಲ್ಲ. ಈ ಬಾರಿ ದೊಡ್ಡ ಯೋಜನೆ ರೂಪಿಸಿದ್ದೇನೆ.

ನಮ್ಮ ಸಂಸದರು ಕೇಂದ್ರದ ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕು. ಆಗ ಮಾತ್ರ ಅವರು ಸಂಸದರಾಗಿರಲು ಅರ್ಹರಿರುತ್ತಾರೆ. ಇಲ್ಲದಿದ್ದರೆ ತಮ್ಮ ವಿಶ್ವಾಸ ಕಳೆದುಕೊಳ್ಳುತ್ತಾರೆ ಎಂದು ಹೇಳಿದರು. ಬೆಂಗಳೂರಿನಲ್ಲಿ ಮಾತನಾಡುವ ಬದಲು ದೆಹಲಿಗೆ ಬನ್ನಿ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ಸೋಮಣ್ಣ ಅವರ ಮನೆಗೆ ಉಪಹಾರಕ್ಕೆ ಹೋಗುತ್ತೇನೆ. ಸಂಸತ್‌ ಅಧಿವೇಶದ ವೇಳೆ ಸಂಸದರು, ಶಾಸಕರನ್ನು ಕರೆದುಕೊಂಡು ಹೋಗಿ ಚರ್ಚೆ ಮಾಡಬೇಕಿದೆ. ಅವರು ಕೇಂದ್ರ ಜಲಶಕ್ತಿ ಸಚಿವರು. ಅವರನ್ನು ಬಿಟ್ಟು ಏನನ್ನೂ ಮಾಡುವುದಿಲ್ಲ ಎಂದು ತಿಳಿಸಿದರು.

ನಾಳೆ ನೀರಿನ ಹೆಜ್ಜೆ ಬಿಡುಗಡೆ

ನೀಡಿನ ಹೆಜ್ಜೆ ಕೃತಿ ನ. 14ರಂದು ಲೋಕಾರ್ಪಣೆ ಮಾಡುತ್ತೇನೆ. ಜವಾಹರಲಾಲ್‌ ನೆಹರು ಅವರ ಜನ್ಮದಿನದಂದು ಪುಸ್ತಕ ಬಿಡುಗಡೆ ಮಾಡಲಿದ್ದು, ಅಲ್ಲಿ ಮಹದಾಯಿ, ಶರಾವತಿ, ಮೇಕೆದಾಟು ಸೇರಿ ರಾಜ್ಯದ ನೀರವಾರಿ ಯೋಜನೆಗಳ ಕುರಿತಂತೆ ಮಾತನಾಡುತ್ತೇನೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.