ಡಿಕೆ ಸಹೋದರರ ಕ್ಷೇತ್ರದಿಂದಲೇ ಬಿಜೆಪಿ ರಣ ಕಹಳೆಗೆ ಸಿದ್ಧತೆ
ಹಳೇ ಮೈಸೂರಿನಲ್ಲಿ ಕಮಲ ಅರಳಿಸಲು ಬಿಜೆಪಿ ಹೊಸ ಪ್ಲಾನ್. ಪಕ್ಷ ಸಂಘಟನೆಗೆ ಉಸ್ತುವಾರಿಗಳಾಗಿ ಕೇಂದ್ರ ಸಚಿವರ ನೇಮಕ. ಡಿಕೆ ಸಹೋದರರ ಕ್ಷೇತ್ರ ಆರಿಸಿದ ಬಿಜೆಪಿ.
ಎಂ.ಅಫ್ರೇಜ್ ಖಾನ್
ರಾಮನಗರ (ಅ.12): ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿರುವ ಆಡಳಿತರೂಢ ಬಿಜೆಪಿ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದಲೇ ಚಾಲನೆ ನೀಡಲು ಮುಂದಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ ಸಂಸದ ಡಿ.ಕೆ.ಸುರೇಶ್ ಪ್ರತಿನಿಧಿಸುವ ಕ್ಷೇತ್ರದಲ್ಲಿಯೇ ಬಿಜೆಪಿ ರಣಕಹಳೆ ಮೊಳಗಿಸಲು ಅಖಾಡ ಸಜ್ಜುಗೊಳಿಸುತ್ತಿದೆ. ಇದಕ್ಕಾಗಿ ಕೇಂದ್ರ ಸಚಿವರನ್ನು ನಿಯೋಜನೆ ಮಾಡಿದೆ. ಹಳೇ ಮೈಸೂರು ಭಾಗದ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದ ಸಂಘಟನೆಗಾಗಿ ಕೇಂದ್ರ ಸಚಿವರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಅದರಂತೆ ಬೆಂ.ಗ್ರಾ. ಲೋಕಸಭಾ ಕ್ಷೇತ್ರಕ್ಕೆ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಸಂಘಟನೆ ಜವಾಬ್ದಾರಿ ನೀಡಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಿಷನ್ 150 ಕಾರ್ಯಗತಗೊಳಿಸುವ ಹಾಗೂ ಸಂಸತ್ ಚುನಾವಣೆ ಉದ್ದೇಶದಿಂದ ಪಕ್ಷ ಸಂಘಟನೆ ದುರ್ಬಲವಾಗಿರುವ ಭಾಗದಲ್ಲಿ ಹೆಚ್ಚು ಸ್ಥಾನ ಗಳಿಸಲು ಪಕ್ಷ ಸಂಘಟನೆಯ ಹೆಸರಿನಲ್ಲಿ ಬಿಜೆಪಿ ಹೊಸ ತಂತ್ರ ರೂಪಿಸಿದೆ.
ಬೂತ್‌ಗಳ ವಿಂಗಡಣೆ: ಬಿಜೆಪಿ ಬೂತ್ ಗಳನ್ನು ಎಬಿಸಿ ಎಂದು 3 ವಿಧಗಳಾಗಿ ವಿಂಗಡಿಸಿದೆ. ‘ಎ‘ ಎಂದರೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ, ‘ಬಿ‘ ಎಂದರೆ ಬಿಜೆಪಿಗೆ ಮತಗಳು ಬರುತ್ತವೆ ಆದರೆ, ಅಭ್ಯರ್ಥಿಗಳು ಇಲ್ಲ ಎನ್ನುವುದು. ‘ಸಿ‘ ಎಂದರೆ ಇಲ್ಲಿ ಬೇರೆ ಪಕ್ಷಗಳದೇ ಮೇಲುಗೈ ಎನ್ನುವುದು. ಈ ಆಧಾರದ ಮೇಲೆ ಬಿಜೆಪಿ ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಕೈ ಹಾಕಿದೆ.
ಇದರ ಮೊದಲ ಭಾಗವಾಗಿ ಆ. 13ರಂದು ವಿದೇಶಾಂಗ ಸಚಿವ ಜೈ ಶಂಕರ್ ಕನಕಪುರ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಸರ್ಕಾರಿ ಕಾರ್ಯಕ್ರಮದ ಜತೆಗೆ ಪಕ್ಷ ಸಂಘಟನೆಗೆ ಪೂರಕವಾಗಿ ಪಾದಯಾತ್ರೆ ಹಾಗೂ ಬಿಜೆಪಿ ನಾಯಕರೊಂದಿಗೆ ಸಭೆಯನ್ನು ಸಚಿವರು ನಡೆಸುವರು.
ಕನಕಪುರ ಕ್ಷೇತ್ರ ವ್ಯಾಪ್ತಿಯ ಹಾರೋಹಳ್ಳಿಯಲ್ಲಿ 1 ಕಿ.ಮೀ ಪಾದಯಾತ್ರೆ ನಡೆಸುವ ಜೈಶಂಕರ್, ಜೈನ್ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳುವರು. ನಂತರ ಬೆಂಗಳೂರು - ಕನಕಪುರ ರಾಷ್ಟ್ರೀಯ ಹೆದ್ದಾರಿ -209 ವೀಕ್ಷಣೆ ಮಾಡಲಿದ್ದಾರೆ.
ನಂತರ ರಾಮನಗರಕ್ಕೆ ಭೇಟಿ ನೀಡುವ ಸಚಿವರು, ಅಂಬೇಡ್ಕರ್ ಭವನದಲ್ಲಿ ಫಲಾನುಭವಿಗಳೊಂದಿಗೆ ಚರ್ಚೆ ನಡೆಸುವರು. ಬಳಿಕ ಶಿಲ್ಹಾಂದ್ರ ರೆಸಾರ್ಚ್‌ನಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಜೈಶಂಕರ್ ಸಭೆ ನಡೆಸುವರು. ಇವರಿಗೆ ರಾಜ್ಯಸಭಾ ಸದಸ್ಯ ಜಗ್ಗೇಶ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಸಾಥ್ ನೀಡಲಿದ್ದಾರೆ.
ಬಿಜೆಪಿಯ ಹೊಸ ಕಾರ್ಯತಂತ್ರ: ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ ಒಬ್ಬೊಬ್ಬರು ಕೇಂದ್ರ ಸಚಿವರು, ಆಯಾ ಜಿಲ್ಲೆಯ ಉಸ್ತುವಾರಿ ಸಚಿವರು ತಿಂಗಳಿಗೆ ಮೂರು ದಿನ ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಪಾದಯಾತ್ರೆ ನಡೆಸಿ ಜನರ ಕಷ್ಟಸುಖಗಳನ್ನು ಆಲಿಸಬೇಕು. ಮುಂದಿನ 18 ತಿಂಗಳವರೆಗೂ ಈ ಪ್ರಕ್ರಿಯೆ ಚಾಲ್ತಿಯಲ್ಲಿರಬೇಕು ಎಂಬುದು ಬಿಜೆಪಿ ಚಿಂತನೆ.
ಇದಕ್ಕೆ ಪ್ರಮುಖ ಕಾರಣ ಬೆಂ.ಗ್ರಾ, ಮಂಡ್ಯ ಹಾಗೂ ಹಾಸನ ಲೋಕಸಭಾ ಕ್ಷೇತ್ರಗಳು. 2019ರಲ್ಲಿ ನಡೆದ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿತ್ತು.
ಚುನಾವಣೆಯಲ್ಲಿ ಬಿಟ್ಟಿ ಭಾಗ್ಯಗಳ ಘೋಷಣೆ, ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂ ಛೀಮಾರಿ!
ಬೆಂ. ಗ್ರಾ ಕ್ಷೇತ್ರದಲ್ಲಿ ಕಾಂಗ್ರೆಸ್, ಮಂಡ್ಯದಲ್ಲಿ ಪಕ್ಷೇತರ, ಹಾಸನದಲ್ಲಿ ಜೆಡಿಎಸ್ ಗೆಲುವು ಸಾಧಿಸಿತ್ತು. ಹೀಗಾಗಿ ಈ ಮೂರು ಕ್ಷೇತ್ರಗಳಲ್ಲಿಯೂ ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಮಾತ್ರವಲ್ಲದೆ ವಿಧಾನಸಭೆ ಚುನಾವಣೆಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಬಿಜೆಪಿ ಮುಂದಿನ 18 ತಿಂಗಳ ವರೆಗೂ ಬಿಜೆಪಿ ಈ ತಂತ್ರ ಅನುಸರಿಸಲಿದೆ.
ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್‌ಗೆ ತಲಾ 13 ಎಂಪಿ ಸೀಟು: ಮೋದಿ ಸ್ಥಾನಕ್ಕೆ ಯಾರು?
ಬಿಜೆಪಿ ಕರ್ನಾಟಕದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಸೇರಿ ಮೂರು ಕ್ಷೇತ್ರಗಳನ್ನು ಗುರಿಯಾಗಿಟ್ಟುಕೊಂಡಿದೆ. ಹೀಗಾಗಿಯೇ ಕೇಂದ್ರ ಸಚಿವರ ಜತೆಗೆ ಸಿನಿಮಾ ನಟ, ನಟಿಯರು ಹಾಗೂ ಆಯಾಯ ಜಿಲ್ಲಾ ಉಸ್ತುವಾರಿ ಸಚಿವರ ತಂಡವನ್ನು ಸಿದ್ದಪಡಿಸಿದೆ. ಈಗ ಕಾಂಗ್ರೆಸ್ ಸಂಸದ ಪ್ರತಿನಿಧಿಸುವ ಕ್ಷೇತ್ರದಿಂದಲೇ ಬಿಜೆಪಿ ತನ್ನ ಸಂಘಟನೆ ಶುರು ಮಾಡಿದೆ.