Asianet Suvarna News Asianet Suvarna News

ಕಾಂಗ್ರೆಸ್‌ನಲ್ಲಿ ಅಸಮಾಧಾನದ ಬೇಗುದಿ: 'ಕೈ'ನಲ್ಲಿ ಕಾಣದ ಒಗ್ಗಟ್ಟು..!

ವಿಜಯನಗರ ಜಿಲ್ಲಾ ಕಾಂಗ್ರೆಸ್‌ ಈಗ ಮನೆಯೊಂದು ಮೂರು ಬಾಗಿಲು ಆಗಿದೆ. ಕಾಂಗ್ರೆಸ್‌ ಪದಾಧಿಕಾರಿಗಳ ನಡುವೆ ಒಂದು ಕಡೆಯಲ್ಲಿ ಸಮನ್ವಯತೆ ಇಲ್ಲದಾಗಿದೆ. ಒಂದು ಕಡೆಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್‌ಎನ್‌ಎಫ್‌ ಇಮಾಮ್‌ ಓಡಾಡಿದರೆ, ಇನ್ನೊಂದು ಕಡೆಯಲ್ಲಿ ಜಿಲ್ಲಾಧ್ಯಕ್ಷ ಸಿರಾಜ್‌ ಶೇಕ್‌ ಓಡಾಡುತ್ತಿದ್ದಾರೆ. ಪಕ್ಷದ ಕಚೇರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡರೂ ಪೂರ್ಣಪ್ರಮಾಣದ ಪದಾಧಿಕಾರಿಗಳು ಒಂದು ಕಡೆಯಲ್ಲಿ ಒಗ್ಗಟ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ.

Discontent in Congress at Vijayanagara District grg
Author
First Published Aug 12, 2023, 2:45 AM IST

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಆ.12): ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೂ ವಿಜಯನಗರ ಜಿಲ್ಲಾ ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಮಾತ್ರ ಕಾಣಿಸುತ್ತಿಲ್ಲ. ಸ್ಥಳೀಯ ಶಾಸಕ ಎಚ್‌.ಆರ್‌. ಗವಿಯಪ್ಪ ಪ್ರಗತಿ ಪರಿಶೀಲನಾ ಸಭೆಯಿಂದಲೇ ದೂರ ಉಳಿದಿದ್ದು, ಅಸಮಾಧಾನ ಮತ್ತೊಮ್ಮೆ ಸ್ಫೋಟಗೊಂಡಿದೆ.

ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ಜಿಲ್ಲೆಯಲ್ಲಿ ಆಡಳಿತಕ್ಕೆ ಚುರುಕು ಮೂಡಿಸಲು ತಾಲೂಕುವಾರು ಕೆಡಿಪಿ ಸಭೆಗಳನ್ನು ನಡೆಸುತ್ತಿದ್ದರೆ, ಇತ್ತ ಗವಿಯಪ್ಪ ಅವರು ಸಭೆಯತ್ತ ಮುಖ ಕೂಡ ಮಾಡಿಲ್ಲ. ಇನ್ನು ಗೃಹಜ್ಯೋತಿ ಚಾಲನಾ ಸಮಾರಂಭದಿಂದಲೂ ಗವಿಯಪ್ಪ ಅವರು ದೂರ ಉಳಿದಿದ್ದರು. ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ ಮತ್ತು ಕೂಡ್ಲಿಗಿ ಶಾಸಕ ಡಾ. ಎನ್‌.ಟಿ. ಶ್ರೀನಿವಾಸ್‌ ಆಗಮಿಸಿ ಗೃಹಜ್ಯೋತಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದರು. ಆದರೆ, ಸ್ಥಳೀಯ ಶಾಸಕರು ಗೈರಾಗಿದ್ದಲ್ಲದೇ, ಶಾಸಕರಿಗೆ ಸರಿಯಾಗಿ ಆಮಂತ್ರಿಸಿಲ್ಲ ಎಂದು ಅವರ ಬೆಂಬಲಿಗರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಕುಮಾರಸ್ವಾಮಿ ಪೆನ್‌ಡ್ರೈವ್‌ ಬುಟ್ಟಿ ಒಳಗಿನ ಹಾವು ಇದ್ದಂತೆ: ಜಮೀರ್‌ ಅಹಮದ್‌

ಸಮನ್ವಯ ಕೊರತೆ:

ವಿಜಯನಗರ ಜಿಲ್ಲಾ ಕಾಂಗ್ರೆಸ್‌ ಈಗ ಮನೆಯೊಂದು ಮೂರು ಬಾಗಿಲು ಆಗಿದೆ. ಕಾಂಗ್ರೆಸ್‌ ಪದಾಧಿಕಾರಿಗಳ ನಡುವೆ ಒಂದು ಕಡೆಯಲ್ಲಿ ಸಮನ್ವಯತೆ ಇಲ್ಲದಾಗಿದೆ. ಒಂದು ಕಡೆಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್‌ಎನ್‌ಎಫ್‌ ಇಮಾಮ್‌ ಓಡಾಡಿದರೆ, ಇನ್ನೊಂದು ಕಡೆಯಲ್ಲಿ ಜಿಲ್ಲಾಧ್ಯಕ್ಷ ಸಿರಾಜ್‌ ಶೇಕ್‌ ಓಡಾಡುತ್ತಿದ್ದಾರೆ. ಪಕ್ಷದ ಕಚೇರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡರೂ ಪೂರ್ಣಪ್ರಮಾಣದ ಪದಾಧಿಕಾರಿಗಳು ಒಂದು ಕಡೆಯಲ್ಲಿ ಒಗ್ಗಟ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ.
ವಿಜಯನಗರ ಜಿಲ್ಲಾ ಕಾಂಗ್ರೆಸ್‌ನಿಂದ ಹಮ್ಮಿಕೊಳ್ಳುವ ಪ್ರತಿಭಟನೆ, ಹೋರಾಟಗಳಿಂದಲೂ ಶಾಸಕ ಗವಿಯಪ್ಪ ಅವರು ದೂರ ಉಳಿಯುತ್ತಿದ್ದಾರೆ. ಇನ್ನು ಮಾಜಿ ಶಾಸಕರಾದ ಪಿ.ಟಿ. ಪರಮೇಶ್ವರ ನಾಯ್ಕ ಮತ್ತು ಎಸ್‌. ಭೀಮಾನಾಯ್ಕ ಅವರು ಕೂಡ ಕಾಣಿಸಿಕೊಳ್ಳುತ್ತಿಲ್ಲ.

ಜಿಲ್ಲಾ ಕಾಂಗ್ರೆಸ್‌ನ ನಾಯಕರೊಳಗಿನ ಅಸಮಾಧಾನದಿಂದಾಗಿ ಪಕ್ಷದ ಕಾರ್ಯಕರ್ತರು ಕಳೆಗುಂದುತ್ತಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದರೂ ತಮ್ಮನ್ನು ಗುರುತಿಸಲಾಗುತ್ತಿಲ್ಲ. ಜತೆಗೆ ನಮ್ಮ ಅಳಲನ್ನು ಯಾರೂ ಆಲಿಸುತ್ತಿಲ್ಲ. ತಾಪಂ, ಜಿಪಂ ಚುನಾವಣೆಗೆ ಪಕ್ಷ ಸಜ್ಜುಗೊಳ್ಳಬೇಕಿದೆ. ಈ ಹಂತದಲ್ಲೇ ಪಕ್ಷದ ಮುಖಂಡರ ನಡುವೆ ಸಮನ್ವಯ ಕೊರತೆ ಕಾಣತೊಡಗಿದೆ ಎಂದು ಹೆಸರು ಹೇಳಲಿಚ್ಛಿಸದ ಕಾರ್ಯಕರ್ತರು ‘ಕನ್ನಡಪ್ರಭ’ದ ಬಳಿ ಅಸಮಾಧಾನ ತೋಡಿಕೊಂಡರು.

ಜಿಲ್ಲಾಧ್ಯಕ್ಷರ ವಿರುದ್ಧ ದೂರು:

ಒಂದು ಹೆಜ್ಜೆ ಮುಂದೆ ಹೋಗಿರುವ ಕೆಎಂಎಫ್‌ ಅಧ್ಯಕ್ಷ ಎಸ್‌. ಭೀಮಾನಾಯ್ಕ ಅವರು ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ನೇಮರಾಜ್‌ ನಾಯ್ಕ ಅವರು ಗೆಲ್ಲಲು ವಿಜಯನಗರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿರಾಜ್‌ ಶೇಕ್‌ ಮತ್ತು ವಿಧಾನಪರಿಷತ್‌ನ ಮಾಜಿ ಸದಸ್ಯ ಕೆ.ಸಿ. ಕೊಂಡಯ್ಯನವರೇ ಕಾರಣರಾಗಿದ್ದಾರೆ ಎಂದು ಹೈಕಮಾಂಡ್‌ಗೆ ದೂರಿದ್ದಾರೆ.

ಜಿಲ್ಲೆಯಲ್ಲಿ ಒಂದು ವರ್ಗಾವಣೆಗೆ ಎರಡೆರಡು ಶಿಫಾರಸು ಪತ್ರಗಳನ್ನು ನೀಡಲಾಗುತ್ತಿದೆ. ನನ್ನ ಕ್ಷೇತ್ರದಲ್ಲಿ ಬೇರೆಯವರು ಕೈ ಹಾಕುತ್ತಿದ್ದಾರೆ. ಶಾಸಕ ಎಚ್‌.ಆರ್‌. ಗವಿಯಪ್ಪ ಅವರು ಸ್ವತಃ ಸಿಎಂ ಸಿದ್ದರಾಮಯ್ಯನವರ ಬಳಿಯೇ ಅಸಮಾಧಾನ ಹೊರಹಾಕಿದ್ದಾರೆ ಎಂದು ವಿಶ್ವಸನೀಯ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಹರಪನಹಳ್ಳಿ ಕ್ಷೇತ್ರದ ಶಾಸಕಿ ಎಂ.ಪಿ. ಲತಾ ಪಕ್ಷೇತರರಾಗಿ ಗೆದ್ದು ಕಾಂಗ್ರೆಸ್‌ ಜತೆ ಗುರುತಿಸಿಕೊಂಡಿದ್ದಾರೆ. ಅವರಿಗೂ ಸ್ಥಳೀಯ ಕಾಂಗ್ರೆಸ್‌ ನಾಯಕರ ಶಿಫಾರಸು ಪತ್ರಗಳು ಅಡ್ಡಿಯಾಗಿ ಪರಿಣಮಿಸುತ್ತಿವೆ. ಜಿಲ್ಲೆಯಲ್ಲಿ ಪಕ್ಷ, ಶಾಸಕರು ಮತ್ತು ಸರ್ಕಾರದ ನಡುವೆ ಸಮನ್ವಯ ಕೊರತೆ ಎದ್ದು ಕಾಣತೊಡಗಿದೆ.

ತಮಗೆ ಬೇಕಾದ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿಕೊಳ್ಳಲು ಜಿಲ್ಲಾ ಕೇಂದ್ರವಾಗಿರುವ ಹೊಸಪೇಟೆಯ ಶಾಸಕ ಗವಿಯಪ್ಪ ಅವರು ಪ್ರಯತ್ನಿಸುತ್ತಿದ್ದರೆ, ತಮ್ಮ ಗಮನಕ್ಕೆ ಬಾರದೇ ಅಧಿಕಾರಿಗಳ ವರ್ಗಾವಣೆ ಆಗುತ್ತಿದೆ ಎಂದು ತಮ್ಮ ಆಪ್ತ ಬೆಂಬಲಿಗರ ಬಳಿ ಅಸಮಾಧಾನ ಕೂಡ ತೋಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈಗ ಕಳೆದ ಆ. 8ರಿಂದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ಹೊಸಪೇಟೆಯಲ್ಲೇ ವಾಸ್ತವ್ಯ ಹೂಡಿ ಜಿಲ್ಲಾದ್ಯಂತ ತಿರುಗಾಡುತ್ತಿದ್ದರೂ ಶಾಸಕ ಎಚ್‌.ಆರ್‌. ಗವಿಯಪ್ಪ ಅವರು ಮಾತ್ರ ಬೆಂಗಳೂರಿನಿಂದ ಕ್ಷೇತ್ರದ ಕಡೆಗೆ ಬಂದಿಲ್ಲ. ಹಾಗಾಗಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಅಸಮಾಧಾನ ಜೀವಂತವಾಗಿದೆ ಎಂಬುದು ಸಾಕ್ಷೀಕರಿಸಿದೆ. ಈ ಕುರಿತು ‘ಕನ್ನಡಪ್ರಭ’ ಶಾಸಕ ಎಚ್‌.ಆರ್‌. ಗವಿಯಪ್ಪ ಅವರನ್ನು ಫೋನಾಯಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.

ಯುವನಿಧಿ ಕಾರ್ಯಕ್ರಮವೂ ಅನುಷ್ಠಾನ; ಅನುದಾನ ಕೊರತೆ ಒಪ್ಪಿಕೊಂಡ ಸಚಿವ ಸಂತೋಷ್ ಲಾಡ್

ಶಾಸಕ ಎಚ್‌.ಆರ್‌. ಗವಿಯಪ್ಪ ಅವರು ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ಮೃತಪಟ್ಟಹಿನ್ನೆಲೆ ಬೆಂಗಳೂರಿಗೆ ತೆರಳಿದ್ದಾರೆ. ಬಿ.ಕೆ. ಶಿವರಾಂ ಅವರು ಗವಿಯಪ್ಪನವರ ಸಂಬಂಧಿಕರು. ಹಾಗಾಗಿ ತೆರಳಿದ್ದಾರೆ. ಜಿಲ್ಲೆಯಲ್ಲಿ ಎಲ್ಲ ಶಾಸಕರ ಜತೆ ಸಮನ್ವಯತೆ ಇದೆ. ನಮ್ಮ ನಡುವೆ ಅಸಮಾಧಾನ ಇಲ್ಲ ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ಹೇಳಿದ್ದಾರೆ. 

ಕೆಎಂಎಫ್‌ ಅಧ್ಯಕ್ಷ ಎಸ್‌. ಭೀಮಾನಾಯ್ಕ ಅವರು ವರಿಷ್ಠರಿಗೆ ದೂರಿದ್ದಾರೆ. ಆದರೆ, ಹಗರಿಬೊಮ್ಮನಹಳ್ಳಿ ಕ್ಷೇತ್ರದ ತಾಂಡಾಗಳ ಮತದಾರರೇ ಅವರಿಗೆ ಮತ ನೀಡಿಲ್ಲ. ಅವರಿಗೆ ತಾಂಡಾಗಳಲ್ಲಿ ಲೀಡ್‌ ಸಿಕ್ಕಿಲ್ಲ. ಇದಕ್ಕೇನಂತಾರೆ ಎಂದು ವಿಜಯನಗರ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಿರಾಜ್‌ ಶೇಕ್‌ ತಿಳಿಸಿದ್ದಾರೆ.  

Follow Us:
Download App:
  • android
  • ios