ಧಾರವಾಡ (ಜೂನ್.15) :  ಬಿಜೆಪಿಯಿಂದ ಗೆದ್ದು ಅಧ್ಯಕ್ಷೆಯಾಗಿದ್ದ ಚೈತ್ರಾ ಗುರುಪಾದಪ್ಪ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿ ಕಾಂಗ್ರೆಸ್ ಪರ ಮತ ಚಲಾವಣೆ ಮಾಡಿದ್ದ ನಾಲ್ವರು ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯರನ್ನು ಅನರ್ಹಗೊಳಿಸಿ ಚುನಾವಣಾ ಆಯೋಗ ಅನರ್ಹಗೊಳಿಸಿ ಆದೇಶ ಹೊರಡಿಸಿದೆ. 

ಗರಗ ಜಿ.ಪಂ.ಕ್ಷೇತ್ರದ ರತ್ನಾ ದಯಾನಂದ ಪಾಟೀಲ, ಗಳಗಿ ಕ್ಷೇತ್ರದ ಅಣ್ಣಪ್ಪ ಫಕ್ಕೀರಪ್ಪ ದೇಸಾಯಿ, ತಬಕದಹೊನ್ನಿಹಳ್ಳಿ ಕ್ಷೇತ್ರದ ಮಂಜವ್ವ ಶೇಖಪ್ಪ ಹರಿಜನ, ಗುಡಕೇರಿ ಕ್ಷೇತ್ರದ ಜ್ಯೋತಿ ಬೆಂತೂರ ಎನ್ನುವರ ಸದಸ್ಯತ್ವ ಅನರ್ಹಗೊಂಡಿದೆ.

2019 ಫೆ.5 ರಂದು ನಡೆದ ವಿಶೇಷ ಸಭೆಯಲ್ಲಿ  ಜಿ.ಪಂ.ಅಧ್ಯಕ್ಷೆ ಚೈತ್ರಾ ಶಿರೂರ ಅವರ ವಿರುದ್ದ ಕಾಂಗ್ರೆಸ್ ಪಕ್ಷದ ಸದಸ್ಯರು ಮಂಡಿಸಲಾದ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಜಯವಾಗಿತ್ತು. ಒಟ್ಟು 22 ಸಂಖ್ಯಾ ಬಲದ ಜಿ.ಪಂ.ನಲ್ಲಿ 10 ಬಿಜೆಪಿ ಹಾಗೂ 11 ಕಾಂಗ್ರೆಸ್, ಓರ್ವ ಪಕ್ಷೇತರ ಸದಸ್ಯರಿದ್ದರು.

ಆಪರೇಷನ್ ಹಸ್ತ ಸಕ್ಸಸ್, ಪ್ರಹ್ಲಾದ್ ಜೋಶಿ, ಶೆಟ್ಟರ್‌ಗೆ ಮುಖಭಂಗ

 ಈ ಪೈಕಿ ಅವಿಶ್ವಾಸ ಗೊತ್ತುವಳಿ ಪರ 15 ಮತಗಳು ಬೇಕಾಗಿತ್ತು. ಆದರೆ ಸಭೆಯಲ್ಲಿ ಕಾಂಗ್ರೆಸ್ 11, ಬಿಜೆಪಿ 4 ಹಾಗೂ ಪಕ್ಷೇತರ ಸದಸ್ಯರು ಸೇರಿ ಒಟ್ಟು 16 ಮತಗಳು ಬಿದ್ದರೆ ಗೊತ್ತುವಳಿ ವಿರುದ್ದ ಬಿಜೆಪಿಯ 6 ಸದಸ್ಯರ ಮತಗಳು ಬಿದ್ದಿದ್ದವು. ಈ ಮೂಲಕ ಅವಿಶ್ವಾಸ ಗೊತ್ತುವಳಿ ಮಂಡನೆ ಪರ ಹೆಚ್ಚು ಮತಗಳು ಬಿದ್ದು, ಅದು ಅಂಗೀಕಾರಗೊಳ್ಳುವ ಮೂಲಕ ಚೈತ್ರಾ ಶಿರೂರ ಅಧ್ಯಕ್ಷ ಸ್ಥಾನದಿಂದ ಕೆಳಗಡೆ ಇಳಿಯಬೇಕಾಗಿತ್ತು.

ಇದಾದ ಬಳಿಕ ನಡೆದ ಅಧ್ಯಕ್ಷರ ಆಯ್ಕೆಯಲ್ಲಿ ಕಾಂಗ್ರೆಸ್‌ನ ವಿಜಯಲಕ್ಷ್ಮೀ ಪಾಟೀಲ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮುಖಭಂಗಕ್ಕೆ ಕಾರಣವಾಗಿತ್ತು.

 ಈ ಹಿನ್ನೆಲ್ಲೆಯಲ್ಲಿ ಕಾಂಗ್ರೆಸ್ ಪರ ಮತ ಚಲಾಯಿಸಿದ ಮೇಲೆ ತಿಳಿಸಲಾದ ನಾಲ್ವರು ಬಿಜೆಪಿ ಸದಸ್ಯರುಗಳ ವಿರುದ್ಧ ದೂರು ನೀಡಲಾಗಿತ್ತು. ಬಿಜೆಪಿ ಚಿಹ್ನೆಯಡಿ ಆಯ್ಕೆಯಾಗಿದ್ದ ನಾಲ್ವರು ಸದಸ್ಯರು ಪಕ್ಷದ ವಿಪ್ ಉಲ್ಲಂಘನೆ ಮಾಡಿದ್ದು, ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವಂತೆ ಅಂದಿನ ಬಿಜೆಪಿ ಜಿಲ್ಲಾ ಅಧ್ಯಕ್ಷ ಈರಣ್ಣ ಜಡಿ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಇದೀಗ ಚುನಾವಣಾ ಆಯೋಗ ಅನರ್ಹಗೊಳಿಸಿದೆ.