ಏಕನಾಥ್‌ ಶಿಂಧೆ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್‌ ಘೋಷಣೆ ಮಾಡಿದ ಬೆನ್ನಲ್ಲಿಯೇ, ತಾವು ಸಂಪುಟದಲ್ಲಿ ಇರುವುದಿಲ್ಲ ಎಂದು ಅವರು ಹೇಳಿದ್ದರು. ಇದರ ನಡುವೆ ಮಹಾರಾಷ್ಟ್ರ ರಾಜಕೀಯಕ್ಕೆ ಮಹಾ ಟ್ವಿಸ್ಟ್‌ ಸಿಕ್ಕಿದ್ದು, ದೇವೇಂದ್ರ ಫಡ್ನವಿಸ್‌ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. 

ಮುಂಬೈ (ಜೂನ್ 30): ಮಹಾರಾಷ್ಟ್ರ ರಾಜಕಾರಣದಲ್ಲಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಏಕನಾಥ್‌ ಶಿಂಧೆ ಸರ್ಕಾರದ ಭಾಗವಾಗಿ ತಾನಿರುವುದಿಲ್ಲ ಎಂದು ಹೇಳಿದ್ದ ದೇವೇಂದ್ರ ಫಡ್ನವಿಸ್‌ ಮಹಾರಾಷ್ಟ್ರದ ಹೊಸ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ಸಂಜೆಯ ವೇಳೆಗೆ ಹಠಾತ್‌ ಆಗಿ ಸುದ್ದಿಗೋಷ್ಠಿ ನಡೆಸಿದ ದೇವೇಂದ್ರ ಫಡ್ನವಿಸ್‌, ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗಿ ಏಕನಾಥ್‌ ಶಿಂಧೆ ಅಧಿಕಾರ ಸ್ವೀಕರಿಸಲಿದ್ದಾರೆ. ಇದು ಸಂಪೂರ್ಣವಾಗಿ ಶಿವಸೇನೆ ಸರ್ಕಾರವಾಗಿ ಇರಲಿದೆ. ಈ ಸರ್ಕಾರಕ್ಕೆ ನಮ್ಮ ಬೆಂಬಲ ಇರುತ್ತದೆ. ಆದರೆ, ನಾನು ಇದರ ಭಾಗವಾಗಿರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಆ ಮೂಲಕ ಉಪಮುಖ್ಯಮಂತ್ರಿ ಅಥವಾ ಸಂಪುಟದಲ್ಲಿ ಸಚಿವರಾಗುವ ಯಾವುದೇ ಗುರಿ ತಮಗಿಲ್ಲ ಎಂದು ಹೇಳಿದ್ದರು.

Maharashtra Political Ciris LIVE: ಶಿಂಧೆ ಸಿಎಂ, ಫಡ್ನವೀಸ್‌ ಡಿಸಿಎಂ: ಜೆಪಿ ನಡ್ಡಾ ಸ್ಪಷ್ಟನೆ

ಇದರ ಬೆನ್ನಲ್ಲಿಯೇ ಸುದ್ದಿಗೋಷ್ಠಿ ನಡೆಸಿದ ಬಿಜೆಪಿಯ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಮಹಾರಾಷ್ಟ್ರ ಸರ್ಕಾರದಲ್ಲಿ ದೇವೇಂದ್ರ ಫಡ್ನವಿಸ್‌ ಭಾಗವಾಗಿರಬೇಕು. ಅವರು ಉಪಮುಖ್ಯಮಂತ್ರಿ ಹುದ್ದೆ ವಹಿಸಿಕೊಳ್ಳಬೇಕು ಎಂದು ಹೇಳಿದ್ದರು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ಇದೇ ಮಾತನ್ನು ಹೇಳಿದ್ದರು. ಕೊನೆಗೆ ಅಮಿತ್‌ ಶಾ ಹಾಗೂ ಜೆಪಿ ನಡ್ಡಾ ಇಬ್ಬರೂ ಕೂಡ ದೇವೇಂದ್ರ ಫಡ್ನವಿಸ್‌ಗೆ ಈ ಕುರಿತಾಗಿ ಕರೆ ಮಾಡಿದ್ದು, ಉಪಮುಖ್ಯಮಂತ್ರಿ ಸ್ಥಾನವನ್ನು ವಹಿಸಿಕೊಳ್ಳುವಂತೆ ಮನವೊಲಿಸಿದ್ದಾರೆ ಎಂದು ಹೇಳಲಾಗಿದೆ.

"ನಾನು ಸರ್ಕಾರದಲ್ಲಿ ಯಾವುದೇ ಹುದ್ದೆಯನ್ನು ಹೊಂದುವುದಿಲ್ಲ" ಎಂದು ಫಡ್ನವಿಸ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಈ ಹಿಂದೆ ಎರಡು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ದೇವೇಂದ್ರ ಫಡ್ನವಿಸ್‌ಗೆ ಉದ್ಧವ್‌ ಠಾಕ್ರೆ ಸರ್ಕಾರವನ್ನು ಉರುಳಿಸುವುದು ಅವರ ದೊಡ್ಡ ಯೋಜನೆಯಾಗಿತ್ತು. ಬುಧವಾರ ರಾತ್ರಿ ಉದ್ಧವ್‌ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದರೊಂದಿಗೆ ಈ ಯೋಜನೆ ಈಡೇರಿತ್ತು. ಆ ಬಳಿಕ ದೇವೇಂದ್ರ ಫಡ್ನವಿಸ್‌ ಅವರೇ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುತ್ತಾರೆ ಎಂದು ಎಲ್ಲಡೆ ಹೇಳಲಾಗಿತ್ತು. ಶುಕ್ರವಾರ ಅವರು ಪ್ರಮಾಣವಚನ ಸ್ವೀಕರಿಸುತ್ತಾರೆ ಎಂದು ಹೇಳಲಾಗಿತ್ತು. 

ಒಂದೇ ದಿನ ಮೂರು ಅಚ್ಚರಿ ನೀಡಿದ ಮಹಾರಾಷ್ಟ್ರ: ಮಹಾರಾಷ್ಟ್ರ ರಾಜಕಾರಣದಲ್ಲಿ ಒಂದೇ ದಿನ ಮೂರು ಅಚ್ಚರಿಯ ಬೆಳವಣಿಗೆಗಳು ನಡೆದವು.

ನಂ.1: ದಿನದ ಆರಂಭದಲ್ಲಿ ಶುಕ್ರವಾರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಹೇಳಲಾಗಿತ್ತು. ಮಧ್ಯಾಹ್ನದ ವೇಳೆಗೆ ಇದು ಬದಲಾಗಿ, ಗುರುವಾರ ಸಂಜೆ 7 ಗಂಟೆಗೆ ಪ್ರಮಾಣವಚನ ಸಮಾರಂಭ ನಡೆಯಲಿದೆ ಎಂದು ಘೋಷಣೆಯಾಗಿತ್ತು.

ನಂ.2: ದೇವೇಂದ್ರ ಫಡ್ನವಿಸ್‌ ಸಂಜೆ 7 ಗಂಟೆಗೆ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂದುಕೊಳ್ಳುವ ವೇಳೆಗಾಗಲೇ ಸುದ್ದಿಗೋಷ್ಠಿ ನಡೆಸಿದ ದೇವೇಂದ್ರ ಫಡ್ನವಿಸ್‌, ಏಕನಾಥ್‌ ಶಿಂಧೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಘೋಷಿಸಿದ್ದಲ್ಲದೆ, ಸರ್ಕಾರದಲ್ಲಿ ತಾನು ಯಾವುದೇ ಪಾತ್ರದಲ್ಲಿ ಇರುವುದಿಲ್ಲ ಎಂದು ತಿಳಿಸಿದ್ದರು.

ನಂ. 3: ಇನ್ನೇನು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಅರ್ಧಗಂಟೆ ಇರುವಾಗ ದೇವೇಂದ್ರ ಫಡ್ನವಿಸ್‌ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಎಂದು ಘೋಷಣೆಯಾಗಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಹಾಗೂ ಅಮಿತ್‌ ಶಾ ಮನವಿಯ ಮೇರೆಗೆ ದೇವೇಂದ್ರ ಫಡ್ನವಿಸ್‌ ಡಿಸಿಎಂ ಪದವಿಗೇರಲು ಒಪ್ಪಿಕೊಂಡಿದ್ದಾರೆ.