ಮಂಡ್ಯ[ಫೆ.28]: 1996ರಲ್ಲಿ ಕರ್ನಾಟಕದಲ್ಲಿ 16 ಸ್ಥಾನ ಗೆದ್ದಾಗ ದೇವೇಗೌಡರು ಪ್ರಧಾನಿಯಾಗಿದ್ದರು. ಇಂದು ಅದೇ ರೀತಿಯ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ದೇಶದ ರಾಜಧಾನಿಯಲ್ಲಿ ಕನ್ನಡದ ದನಿ ಏಳಲಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳುವ ಮೂಲಕ ಪರೋಕ್ಷವಾಗಿ ಎಚ್‌.ಡಿ.ದೇವೇಗೌಡರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದ್ದಾರೆ.

ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಗೆ ಚಾಲನೆ ನೀಡಿ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಗೆ 20 ರಿಂದ 22 ಸ್ಥಾನ ಬಂದರೆ ದೆಹಲಿಯಲ್ಲಿ ಕನ್ನಡಿಗರ ಧ್ವನಿ ಗಟ್ಟಿಯಾಗಲಿದೆ ಎಂದು ತಿಳಿಸಿದರು.

ಸರ್ಕಾರ ಬೀಳಿಸಲು ಸಾಧ್ಯವಿಲ್ಲ:

ಕಾಂಗ್ರೆಸ್‌ -ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಳೆದ 9 ತಿಂಗಳಿನಿಂದ ಒಂದು ವರ್ಗ ಸರ್ಕಾರವನ್ನು ಬೀಳಿಸಲು ಹೊರಟಿದೆ. ಆದರೆ, ಇನ್ನು ಐದು ವರ್ಷ ಯಾರೂ ಸರ್ಕಾರ ಬೀಳಿಸಲು ಸಾಧ್ಯವಿಲ್ಲ ಎಂದರು.