ಗೃಹ ಆರೋಗ್ಯ ಯೋಜನೆ ಮೂಲಕ ಅಸಾಂಕ್ರಾಮಿಕ ರೋಗ ಪತ್ತೆ ಮತ್ತು ಹೃದಯಾಘಾತ ಕಾರಣವಾದ ಅಂಶಗಳ ಪತ್ತೆಗೆ 30 ವರ್ಷ ಮೇಲ್ಪಟ್ಟವರಿಗೆ ತಪಾಸಣೆ ಮಾಡಲು ಕ್ರಮ ವಹಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ವಿಧಾನ ಪರಿಷತ್ (ಆ.19): ಸಂಭವನೀಯ ಹೃದಯಾಘಾತ ಪತ್ತೆಹಚ್ಚಲು ರಾಜ್ಯದ ಎಲ್ಲ ತಾಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಟೆಲಿ ಇಸಿಜಿ ವ್ಯವಸ್ಥೆ. ಗೃಹ ಆರೋಗ್ಯ ಯೋಜನೆ ಮೂಲಕ ಅಸಾಂಕ್ರಾಮಿಕ ರೋಗ ಪತ್ತೆ ಮತ್ತು ಹೃದಯಾಘಾತ ಕಾರಣವಾದ ಅಂಶಗಳ ಪತ್ತೆಗೆ 30 ವರ್ಷ ಮೇಲ್ಪಟ್ಟವರಿಗೆ ತಪಾಸಣೆ ಮಾಡಲು ಕ್ರಮ ವಹಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಬಿಜೆಪಿಯ ಡಾ. ಧನಂಜಯ್ ಸರ್ಜಿ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಅತ್ಯಾಧುನಿಕವಾದ ಕ್ಯಾತ್‌ಲ್ಯಾಬ್ ವ್ಯವಸ್ಥೆಯನ್ನು ಮಂಗಳೂರು, ಬೆಂಗಳೂರಿನ ಸಿ.ವಿ.ರಾಮನ್ ನಗರ ಹಾಗೂ ಹೊಸಪೇಟೆಯಲ್ಲಿ ಕಲ್ಪಿಸಲು ಉದ್ದೇಶಿಸಲಾಗಿದೆ.
ಡಾ.ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ರಾಜ್ಯದ ಎಲ್ಲ ಜಿಲ್ಲಾ, ತಾಲೂಕು ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕ್ಷೇತ್ರಗಳಿಗೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. ತೀವ್ರ ಹೃದಯಾಘಾತ ಸಂಭವಿಸಿದಾಗ ಕೊರೊನರಿ ಸ್ಟಂಟ್ ಮತ್ತು ಕಾರ್ಡಿಯಾಕ್ ಬೈಪಾಸ್ ಸರ್ಜರಿಗಳಿಗೆ ಸೂಪರ್ ಸ್ಪೆಷಾಲಿಟಿ ತಜ್ಞರ ಅವಶ್ಯಕತೆ ಇರುವುದರಿಂದ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ (ಎಬಿಎಕೆ) ಯೋಜನೆಯಡಿ ನೋಂದಣಿ ಹೊಂದಿರುವ ತೃತೀಯ ಹಂತದ ಆಸ್ಪತ್ರೆಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗುವುದು ಎಂದರು.
ತಲೆಬುರುಡೆ ತನಿಖೆ ವಿಚಾರ ಸದನದಲ್ಲಿ ಗೃಹ ಸಚಿವರ ಉತ್ತರ: ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತುಹಾಕಲಾಗಿದೆ ಎಂಬ ಅನಾಮಿಕ ದೂರುದಾರನ ಆರೋಪಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಪಾರದರ್ಶಕವಾಗಿ, ನಿಷ್ಪಕ್ಷಪಾತವಾಗಿ ಯಾವುದೇ ಒತ್ತಡಕ್ಕೆ ಮಣಿಯದೆ ನಿಜಾಂಶವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ತನಿಖೆಯ ಕುರಿತಂತೆ ಸೋಮವಾರ ಗೃಹ ಸಚಿವರು ವಿಧಾನಸಭಾ ಅಧಿವೇಶನದಲ್ಲಿ ಸದನದಲ್ಲಿ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಈ ವಿಚಾರದಲ್ಲಿ ಗೃಹ ಸಚಿವರು ಮಾತ್ರವಲ್ಲ ಮುಖ್ಯಮಂತ್ರಿಗಳೂ ಉತ್ತರ ನೀಡಬಹುದು. ಇದರಲ್ಲಿ ಮುಚ್ಚಿ ಹಾಕುವಂತದ್ದು ಏನೂ ಇಲ್ಲ. ದರ್ಶನ್, ಪ್ರಜ್ವಲ್ ರೇವಣ್ಣ ಪ್ರಕರಣಗಳೇ ಇರಲಿ, ನಿಜಾಂಶ ಹೊರಬೇಕು. ತಪ್ಪಾಗಿದ್ದರೆ ಶಿಕ್ಷೆಯಾಗಬೇಕು. ಅಮಾಯಕರಿಗೆ ತೊಂದರೆ ಆಗಬಾರದು ಎಂದವರು ಹೇಳಿದರು.ರಾಷ್ಟ್ರೀಯ ವಾಹಿನಿಗೆ ಸಂದರ್ಶನ ನೀಡುವ ಮೂಲಕ ದೂರುದಾರ ತನ್ನ ಗುರುತು ಪತ್ತೆಗೆ ಕಾರಣವಾಗುತ್ತಿದ್ದಾನೆ ಎಂಬ ಸುದ್ದಿಗಾರರ ಪ್ರಶ್ನೆಗೆ, ದೂರುದಾರ ಏನು ಹೇಳಿಕೆ ನೀಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಆದರೆ ಕಾನೂನು ಪ್ರಕಾರ ಯಾವ ಕ್ರಮ ಆಗಬೇಕು ಎಂಬ ಬಗ್ಗೆ ಪೊಲೀಸ್ ಇಲಾಖೆ ತೀರ್ಮಾನಿಸಲಿದೆ.
ಈ ವಿಚಾರ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಆರೋಪ, ಪ್ರತ್ಯೋರೋಪಗಳಿಗೆ ಮಾಧ್ಯಮದಲ್ಲೂ ವ್ಯಾಪಕ ಪ್ರಚಾರ ದೊರಕಿದೆ. ಆರೋಪಗಳೆಲ್ಲವೂ ಗಂಭೀರವಾದ ಸಂಗತಿಗಳು. ಹಾಗಾಗಿ ಇದೀಗ ಉತ್ತಮ ಅಧಿಕಾರಿಗಳ ತನಿಖೆಯಿಂದ ಯಾರಿಗೂ ಅನುಮಾನ ಇರದು ಎಂದು ಸಚಿವರು ಹೇಳಿದರು. ಯಾರ್‍ಯಾರು ಏನೇನೋ ಹೇಳಿಕೆ ನೀಡುವುದಕ್ಕೆ ನಾವು ಪ್ರತಿಕ್ರಿಯೆ ನೀಡಲು ಆಗದು. ನಿಜಾಂಶ ಏನಿದೆ, ಸಾಕ್ಷ್ಯ ಏನಿದೆ ಅದರ ಪ್ರಕಾರ ಸರ್ಕಾರ ಹಾಗೂ ಪೊಲೀಸ್ ಇಲಾಖೆ ನಡೆದುಕೊಳ್ಳಲಿದೆ ಎಂದರು.
