ಎಚ್‌ಡಿಕೆ ಐಟಿ ಇಲಾಖೆ ಪ್ರತಿನಿಧಿಯಾ: ಡಿ.ಕೆ.ಶಿವಕುಮಾರ್ ಕಿಡಿ
‘ಗುತ್ತಿಗೆದಾರರೊಬ್ಬರ ಮೇಲಿನ ಐಟಿ ದಾಳಿ ವಿಚಾರವಾಗಿ ನನ್ನ ಹೆಸರು ತಳುಕು ಹಾಕಿರುವ ಕುಮಾರಸ್ವಾಮಿ ಆದಾಯ ತೆರಿಗೆ ಇಲಾಖೆ ಪ್ರತಿನಿಧಿಯೇನೂ ಅಲ್ಲ. ಅವರ ಆರೋಪಗಳು ಸಂಪೂರ್ಣ ಸುಳ್ಳು’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.

ಬೆಂಗಳೂರು (ಅ.15): ‘ಗುತ್ತಿಗೆದಾರರೊಬ್ಬರ ಮೇಲಿನ ಐಟಿ ದಾಳಿ ವಿಚಾರವಾಗಿ ನನ್ನ ಹೆಸರು ತಳುಕು ಹಾಕಿರುವ ಕುಮಾರಸ್ವಾಮಿ ಆದಾಯ ತೆರಿಗೆ ಇಲಾಖೆ ಪ್ರತಿನಿಧಿಯೇನೂ ಅಲ್ಲ. ಅವರ ಆರೋಪಗಳು ಸಂಪೂರ್ಣ ಸುಳ್ಳು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ. ಇದೇ ವೇಳೆ ನಾನು ತಿಹಾರ್ ಜೈಲಿಗೆ ಹೋಗುತ್ತೇನೆ ಎಂದೂ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಆ ಮೂಲಕ ತಾವು ಹಿಂದೆ ಏನು ಮಾಡಿದ್ದರು, ಏನು ಮಾಡಲು ಹೊರಟಿದ್ದೇನೆ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ತಿರುಗೇಟು ನೀಡಿದರು.
ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾರು ಏನು ಆರೋಪ ಮಾಡುತ್ತಾರೋ ಮಾಡಲಿ. ಆದಾಯ ಇಲಾಖೆ ಅಧಿಕಾರಿಗಳ ದಾಳಿ, ತನಿಖೆ ಮುಗಿದ ನಂತರ ತಮ್ಮ ಹೇಳಿಕೆಯನ್ನು ಪ್ರಕಟಿಸಲಿ. ಆನಂತರ ನಾನು ಪ್ರತಿಕ್ರಿಯೆ ನೀಡುತ್ತೇನೆ. ನನ್ನ ವಿರುದ್ಧ ಆರೋಪ ಮಾಡುತ್ತಿರುವ ಕುಮಾರಸ್ವಾಮಿ ಆಗಲಿ, ಬಿಜೆಪಿ ನಾಯಕರಾಗಲಿ ಆದಾಯ ಇಲಾಖೆ ಪ್ರತಿನಿಧಿಗಳೇನೂ ಅಲ್ಲ’ ಎಂದು ಹೇಳಿದರು.
ಪ್ರಧಾನಿಯೊಂದಿಗೆ ಮಾತನಾಡುವ ಶಕ್ತಿ ಕುಮಾರಸ್ವಾಮಿಗೆ ಮಾತ್ರ ಇರೋದು: ಜಿ.ಟಿ.ದೇವೆಗೌಡ
ಇನ್ನು ಮುಂದೆ ರಾಜ್ಯದಲ್ಲಿ ನಡೆಯಲಿರುವ ಐಟಿ ದಾಳಿಗಳು ಕುಮಾರಸ್ವಾಮಿ ಹಾಗೂ ಬಿಜೆಪಿ ಪ್ರೇರಿತ ದಾಳಿಯಾಗಲಿವೆಯೇ ಎಂದು ಕೇಳಿದಾಗ, ‘ಈ ವಿಚಾರವಾಗಿ ನಾನು ಈಗ ಏನನ್ನೂ ಹೇಳುವುದಿಲ್ಲ. ಈ ಹಿಂದೆ ಯಡಿಯೂರಪ್ಪ ಅವರ ಕಾಲದಲ್ಲಿ ಏನಾಯ್ತು? ಆಗ ಅವರಿಗೆ ಏನು ಸಿಕ್ಕಿದೆ? ಎಲ್ಲವೂ ದಾಖಲೆಗಳಲ್ಲಿ ಇವೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಖಲೆ ಬಿಡುಗಡೆ ಮಾಡಿದ ನಂತರ ಮಾತನಾಡೋಣ’ ಎಂದರು.
ರಾಜಕೀಯ ಉದ್ದೇಶ ಇಲ್ಲದೇ ಐಟಿ ದಾಳಿ ನಡೆಯಲ್ಲ: ‘ರಾಜಕೀಯ ಉದ್ದೇಶವಿಲ್ಲದೆ ದೇಶದಲ್ಲಿ ಆದಾಯ ತೆರಿಗೆ ಇಲಾಖೆಯಿಂದ (ಐಟಿ) ದಾಳಿ ನಡೆಯುವುದಿಲ್ಲ. ಇನ್ನು ಪಂಚರಾಜ್ಯ ಚುನಾವಣೆಗೆ ರಾಜ್ಯದಿಂದ ಹಣ ಕಳುಹಿಸಲಾಗುತ್ತಿದೆ ಎಂಬ ಹಾದಿ ಬೀದಿಯಲ್ಲಿ ಹೋಗುವವರ ಆರೋಪಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತ್ತೆ ಬೆಂಗಳೂರಿನಲ್ಲಿ ಐಟಿ ದಾಳಿ ಆರಂಭವಾಗಿದೆ. ಇದರ ಹಿಂದೆ ರಾಜಕೀಯ ಉದ್ದೇಶ ಇದೆಯೇ ಎಂಬ ಪ್ರಶ್ನೆಗೆ, ‘ರಾಜಕೀಯ ಇಲ್ಲದೆ ಯಾವುದೇ ಐಟಿ ದಾಳಿಯೂ ನಡೆಯುವುದಿಲ್ಲ’ ಎಂದರು.
ಸಣ್ಣ ನೀರಾವರಿ ಇಲಾಖೆಯಲ್ಲಿ 17 ಕೋಟಿ ಭ್ರಷ್ಟಾಚಾರ: ಜನಾರ್ದನ ರೆಡ್ಡಿ ಹೇಳಿದ್ದೇನು?
ಕೆಂಪಣ್ಣ ಆಂತಕ ಪಡಬೇಕಿಲ್ಲ: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ನಮ್ಮ ಪರಿಸ್ಥಿತಿ ರೈತರಿಗಿಂತ ಶೋಚನೀಯವಾಗಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ‘ಬಿಲ್ ಪಾವತಿ ವಿಚಾರದಲ್ಲಿ ಕೆಂಪಣ್ಣ ಆತಂಕ ಪಡುವ ಅಗತ್ಯವಿಲ್ಲ. ಏನಾದರೂ ಇದ್ದರೆ ಬಂದು ನಮ್ಮ ಬಳಿ ಮಾತನಾಡಲಿ. ನಾವು ನ್ಯಾಯ ಒದಗಿಸುತ್ತೇವೆ ಎಂದರು. ಕೆಂಪಣ್ಣ ಮನವಿ ಮೇರೆಗೆ ನಾವು ತನಿಖೆ ಪಕ್ಕಕ್ಕಿಟ್ಟು, ಆದ್ಯತೆ ಮೇರೆಗೆ ಕಾಮಗಾರಿಗಳ ಶೇ.60-70 ರಷ್ಟು ಹಣ ಬಿಡುಗಡೆ ಮಾಡಿದ್ದೇವೆ. ಬಿಲ್ ಪಾವತಿ ಸಮಯದಲ್ಲಿ ಜಿಎಸ್‌ಟಿ ಕೂಡ ಪಾವತಿ ಮಾಡಬೇಕು. ಹೀಗಾಗಿ ತನಿಖೆ ವರದಿ ಬರುವ ಮುನ್ನವೇ ನಾವು ಸುಮಾರು ಮುಕ್ಕಾಲು ಭಾಗ ಹಣ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದರು.