ಜನರ ಬಳಿ ಕುಮಾರಸ್ವಾಮಿ ಹೇಗೆ ಮುಖ ತೋರಿಸ್ತಾರೆ?: ಡಿ.ಕೆ. ಶಿವಕುಮಾರ್
ಈಗಿನ ರಾಜಕೀಯ ನೋಡಿ ಬಹಳ ನೋವಾಗುತ್ತಿದೆ. ರಾಜಕಾರಣದಲ್ಲಿ ಯಾರು ಯಾರನ್ನು ನಂಬಬೇಕು ಎಂದು ಬಹಳ ವ್ಯಥೆಯಾಗುತ್ತಿದೆ. ನಾವು ಕುಮಾರಣ್ಣ ಅವರನ್ನು 5 ವರ್ಷ ಮುಖ್ಯಮಂತ್ರಿ ಮಾಡಬೇಕು ಎಂದು ಮೈತ್ರಿ ಸರ್ಕಾರ ಮಾಡಿದೆವು. ಆ ಸರ್ಕಾರ ಬೀಳಿಸಿದವರ ಜೊತೆ ಈಗ ಕುಮಾರಸ್ವಾಮಿ ಸ್ನೇಹ ಬೆಳೆಸುತ್ತಿದ್ದಾರೆ. ಅವರ ವಕ್ತಾರರಾಗಿದ್ದಾರೆ ಎಂದರೆ ಉಳಿದದ್ದನ್ನು ನಿರ್ಧರಿಸಲು ಜನರಿಗೆ ಬಿಡುತ್ತೇನೆ ಎಂದು ಹೇಳಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಬೆಂಗಳೂರು(ಮಾ.10): ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಸರ್ಕಾರವನ್ನು ಬೀಳಿಸಿದ ಬಿ.ಎಸ್. ಯಡಿಯೂರಪ್ಪ, ಯೋಗೇಶ್ವರ್ ಹಾಗೂ ಮುನಿರತ್ನ ಅವರನ್ನು ತಬ್ಬಾಡುತ್ತಿದ್ದಾರೆ. ಕುಮಾರಸ್ವಾಮಿ ಅವರು ಜನರ ಮುಂದೆ ಹೋಗಿ ಹೇಗೆ ಮುಖ ತೋರಿಸುತ್ತಾರೆ? ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿನ ರಾಜಕೀಯ ನೋಡಿ ಬಹಳ ನೋವಾಗುತ್ತಿದೆ. ರಾಜಕಾರಣದಲ್ಲಿ ಯಾರು ಯಾರನ್ನು ನಂಬಬೇಕು ಎಂದು ಬಹಳ ವ್ಯಥೆಯಾಗುತ್ತಿದೆ. ನಾವು ಕುಮಾರಣ್ಣ ಅವರನ್ನು 5 ವರ್ಷ ಮುಖ್ಯಮಂತ್ರಿ ಮಾಡಬೇಕು ಎಂದು ಮೈತ್ರಿ ಸರ್ಕಾರ ಮಾಡಿದೆವು. ಆ ಸರ್ಕಾರ ಬೀಳಿಸಿದವರ ಜೊತೆ ಈಗ ಕುಮಾರಸ್ವಾಮಿ ಸ್ನೇಹ ಬೆಳೆಸುತ್ತಿದ್ದಾರೆ. ಅವರ ವಕ್ತಾರರಾಗಿದ್ದಾರೆ ಎಂದರೆ ಉಳಿದದ್ದನ್ನು ನಿರ್ಧರಿಸಲು ಜನರಿಗೆ ಬಿಡುತ್ತೇನೆ ಎಂದು ಹೇಳಿದರು.
ಜೆಡಿಎಸ್ ಎಲ್ಲಿದೆ? ಬಿಜೆಪಿ ಸ್ಪೋಕ್ಸ್ ಪರ್ಸನ್ ಆದ ಕುಮಾರಸ್ವಾಮಿ: ಡಿ.ಕೆ.ಶಿವಕುಮಾರ್
ನಿಮಗಿರುವ ನೋವು ಅವರಿಗಿಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿ, ‘ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವನ್ನು ನಮ್ಮ ಸರ್ಕಾರ ಎಂದೇ ನಾವು ಹೇಳುತ್ತಿದ್ದೇವೆ. ಅವರಿಗೆ ಆ ನೋವು ಇಲ್ಲದಿದ್ದರೆ ಬೇಡ. ಆದರೆ ರಾಜಕೀಯ ಸಿದ್ಧಾಂತ ಮುಖ್ಯ ಅಲ್ಲವೇ? ಕುಮಾರಸ್ವಾಮಿ ಅವರು ಇದನ್ನು ಹೇಗೆ ಅರಗಿಸಿಕೊಳ್ಳುತ್ತಾರೆ? ಜನರ ಮುಂದೆ ಹೋಗಿ ಹೇಗೆ ಮುಖ ತೋರಿಸುತ್ತಾರೆ’ ಎಂದು ಕಿಡಿಕಾರಿದರು.
ಬಿಜೆಪಿಯು ಮೈಸೂರಿನಲ್ಲಿ ಹಾಲಿ ಸಂಸದರ ಜೊತೆಗೆ ಯದುವೀರ್ ಅವರ ಹೆಸರನ್ನು ಶಿಫಾರಸ್ಸು ಮಾಡಿದೆ ಎಂಬ ಬಗ್ಗೆ ಕೇಳಿದಾಗ, ‘ಅವರು ಯಾರ ಹೆಸರನ್ನಾದರೂ ಶಿಫಾರಸ್ಸು ಮಾಡಲಿ. ನಮ್ಮ ಪಕ್ಷದ ನೀತಿ, ಸಿದ್ಧಾಂತದ ಮೇಲೆ ನಾವು ಚುನಾವಣೆ ಎದುರಿಸುತ್ತೇವೆ. ನಾವು ಅವರ ಪಕ್ಷದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ನಮ್ಮ ಕಾರ್ಯಕ್ರಮದ ಬಗ್ಗೆ ಆಲೋಚಿಸುತ್ತೇವೆ. ಜನರ ಮಧ್ಯೆ ಇರುವ ಅಭ್ಯರ್ಥಿಗಳನ್ನು ನಾವು ಕಣಕ್ಕಿಳಿಸುತ್ತೇವೆ’ ಎಂದು ತಿಳಿಸಿದರು.