ಬೆಂಗಳೂರು(ನ.02): ಕಳೆದೊಂದು ತಿಂಗಳಿಂದ ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪ ಚುನಾವಣಾ ಸಮರಾಂಗಣದ ಬಹಿರಂಗ ಪ್ರಚಾರದ ಭರಾಟೆಗೆ ಭಾನುವಾರ ಸಂಜೆ ಅಂತಿಮ ತೆರೆ ಬಿದ್ದಿದೆ. ಇದರ ಬೆನ್ನಲ್ಲೆ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದ ಆಡಳಿತ ಹಾಗೂ ವಿರೋಧ ಪಕ್ಷಗಳ ಘಟಾನುಘಟಿ ನಾಯಕರುಗಳು ಹೊರ ನಡೆದಿದ್ದಾರೆ.

ಇನ್ನೂ ಉಪ ಚುನಾವಣೆಗೆ ಮತದಾನಕ್ಕೆ ಒಂದೇ ದಿನ ಬಾಕಿ ಉಳಿದಿದ್ದು, ಸೋಮವಾರ ಮನೆ-ಮನೆಗೆ ತೆರಳಿ ಮತಪ್ರಭುವಿಗೆ ಅಭ್ಯರ್ಥಿಗಳು ವಿನಂತಿಸಲಿದ್ದಾರೆ. ರಾಜ್ಯದಲ್ಲಿ ನಡೆದಿರುವ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಆಡಳಿತರೂಢ ಬಿಜೆಪಿ ಹಾಗೂ ವಿರೋಧ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗಳಿಗೆ ಪ್ರತಿಷ್ಠೆಯಾಗಿದೆ.

ಬಹಿರಂಗ ಪ್ರಚಾರದ ಅವಧಿ ಮುಕ್ತಾಯವಾದ ಬಳಿಕ ಯಾವುದೇ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಕಾರ್ಯಕರ್ತರು ಸೇರಿದಂತೆ ಯಾರೊಬ್ಬರು ಬಹಿರಂಗ ಪ್ರಚಾರ ಕೈಗೊಳ್ಳುತ್ತಿಲ್ಲ ಹಾಗೂ ಮತದಾರರಲ್ಲದವರು ಕ್ಷೇತ್ರದಲ್ಲಿ ಉಳಿಯುವಂತಿಲ್ಲ ಎಂದು ಚುನಾವಣಾ ಆಯೋಗ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಬಹಿರಂಗ ಪ್ರಚಾರದ ಕೊನೆ ದಿನ ಭಾನುವಾರ ಎರಡು ಕ್ಷೇತ್ರಗಳಲ್ಲಿ ಭರ್ಜರಿ ಮತಬೇಟೆ ನಡೆಯಿತು. ಶಿರಾದಲ್ಲಿ ಜೆಡಿಎಸ್‌ ಸಮಾವೇಶ ನಡೆಸಿ ಶಕ್ತಿ ಪ್ರದರ್ಶಿಸಿದರೆ, ಬಿಜೆಪಿ ಬೈಕ್‌ ರಾರ‍ಯಲಿ ಮೂಲಕ ಬಲ ತೋರಿಸಿತು. ಇನ್ನು ಕಾಂಗ್ರೆಸ್‌ ಸಹ ಕಾರ್ಯಕರ್ತರ ಸಭೆ ನಡೆಸಿ ಎದುರಾಳಿಗಳಿಗೆ ಪರಾಕ್ರಮ ದರ್ಶನ ಮಾಡಿಸಿತು. ಆರ್‌.ಆರ್‌.ನಗರದಲ್ಲಿ ಸಹ ರೋಡ್‌ ಶೋಗಳ ಭರಾಟೆ ಜೋರಿತ್ತು.

ಪ್ರತಿಷ್ಠೆಯ ಕಣವಾದ ಉಪ ಚುನಾವಣೆಯಲ್ಲಿ ಗೆಲ್ಲುವಿಗೆ ಮೂರು ಪಕ್ಷಗಳು ಟೊಂಕ ಕಟ್ಟಿವೆ. ಒಂದು ತಿಂಗಳಿಂದ ಹಳ್ಳಿ-ಹಳ್ಳಿ ಸುತ್ತಿದ್ದಾರೆ. ಗಲ್ಲಿ ಗಲ್ಲಿಯಲ್ಲಿ ಮತ ಕೇಳಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್‌.ಅಶ್ವತ್‌್ಥ ನಾರಾಯಣ್‌, ಸಚಿವರಾದ ಆರ್‌.ಅಶೋಕ್‌, ಡಾ.ಕೆ.ಸುಧಾಕರ್‌, ಶ್ರೀರಾಮುಲು ಹಾಗೂ ಎಸ್‌.ಟಿ.ಸೋಮಶೇಖರ್‌ ಸೇರಿದಂತೆ ಇಡೀ ಸಚಿವ ಸಂಪುಟವೇ ಪ್ರಚಾರ ನಡೆಸಿದೆ. ಅಲ್ಲದೆ, ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಹ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಶಿರಾ ಹಾಗೂ ಆರ್‌.ಆರ್‌.ನಗರದಲ್ಲಿ ಆಡಳಿತಾರೂಢ ಬಿಜೆಪಿಯ ಶಾಸಕರು ಹಾಗೂ ಸಂಸದ ಮತಬೇಟೆಯಲ್ಲಿ ಮುಂಚೂಣೆಯಲ್ಲಿದ್ದರು. ಶಿರಾದಲ್ಲೇ ಮುಖ್ಯಮಂತ್ರಿ ಪುತ್ರ ವಿಜಯೇಂದ್ರ ಬೀಡುಬಿಟ್ಟು ಮತ ಶಿಕಾರಿ ನಡೆಸಿದ್ದಾರೆ.

ಎರಡು ಸಮರಾಂಗಣದಲ್ಲಿ ಕಾಂಗ್ರೆಸ್‌ ವೀರಾವೇಶದ ಹೋರಾಟ ನಡೆಸಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿನೇಶ್‌ ಗೂಂಡುರಾವ್‌, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಹಿರಿಯ ನಾಯಕರಾದ ಕೆ.ಎನ್‌.ರಾಜಣ್ಣ, ಎಂ.ಬಿ.ಪಾಟೀಲ್‌ ಸೇರಿದಂತೆ ಹಲವು ನಾಯಕರು ಪ್ರಚಾರ ನಡೆಸಿದ್ದರು. ಆರ್‌.ಆರ್‌.ನಗರ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಸಂಸದ ಡಿ.ಕೆ.ಸುರೇಶ್‌ ಭರ್ಜರಿ ಪ್ರಚಾರ ನಡೆಸಿದ್ದಾರೆ. ಮತ ಸೆಳೆಯುವ ನಾಯಕ ಕೊರತೆ ನಡುವೆಯೂ ಇದ್ದ ಶಕ್ತಿಯಲ್ಲೇ ಚುನಾವಣೆ ಗೆಲುವಿಗೆ ಜೆಡಿಎಸ್‌ ಸಹ ಹೋರಾಟ ನಡೆಸಿದೆ.

ಇಳಿ ವಯಸ್ಸಿನಲ್ಲೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಹಾಸನ ಸಂಸದ ಪ್ರಜ್ವಲ್‌ ರೇವಣ್ಣ, ನಿಖಲ್‌ ಕುಮಾರಸ್ವಾಮಿ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಸೇರಿದಂತೆ ಇತರರು ಪ್ರಚಾರದಲ್ಲಿ ಸಕ್ರಿಯವಾಗಿದ್ದರು. ಉಪ ಚುನಾವಣೆ ಪ್ರಚಾರ ಕಣದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ನಟಿ ಅಮೂಲ್ಯ ಪಾಲ್ಗೊಂಡು ತಾರಾ ಮೆರೆಗು ತಂದಿದ್ದರು. ರಾಜಕೀಯ ಮುಖಂಡರ ಮಾತಿನ ಸಮರ, ಕಾರ್ಯಕರ್ತರ ಉತ್ಸಾಹದಿಂದ ಕಳೆ ಕಟ್ಟಿದ್ದ ಬಹಿರಂಗ ಪ್ರಚಾರಕ್ಕೆ ಚುನಾವಣಾ ಆಯೋಗ ಶುಭಂ ಹೇಳಿದೆ. ಮಂಗಳವಾರ ಮತದಾನ ನಡೆಯಲಿದ್ದು, ಸೋಮವಾರ ಕೊನೆ ಕ್ಷಣದಲ್ಲಿ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ತಮ್ಮೆಲ್ಲ ಸಾಮರ್ಥ್ಯ ಪಣಕ್ಕಿಡಲಿದ್ದಾರೆ.