Asianet Suvarna News Asianet Suvarna News

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ: ಕಾಂಗ್ರೆಸ್‌ನಲ್ಲಿ ಕುತೂಹಲ

ಪಕ್ಷದ ನಂಬಲರ್ಹ ಮೂಲಗಳ ಪ್ರಕಾರ ಕನಿಷ್ಠ ಈ ವರ್ಷಾಂತ್ಯದವರೆಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಅಸಾಧ್ಯ. ಅದರಲ್ಲೂ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿ ಮತ್ತು ಬಿಬಿಎಂಪಿ ಚುನಾವಣೆ ನಡೆಸುವ ದಿಸೆಯಲ್ಲಿ ಚಿಂತಿಸುತ್ತಿರುವ ಕಾಂಗ್ರೆಸ್‌ ನಾಯಕತ್ವ ಈ ಹಂತದಲ್ಲಿ ಅಧ್ಯಕ್ಷರ ಬದಲಾವಣೆಯಂತಹ ಸರ್ಕಸ್‌ಗೆ ಕೈ ಹಾಕುವ ಸಾಧ್ಯತೆಯೇ ಇಲ್ಲ.
 

Curiosity in Congress about KPCC President Change Discussion grg
Author
First Published May 23, 2024, 4:15 AM IST

ಎಸ್.ಗಿರೀಶ್ ಬಾಬು

ಬೆಂಗಳೂರು(ಮೇ.23):  ‘ನಾನು ಇನ್ನೆಷ್ಟು ದಿನ ಕೆಪಿಸಿಸಿ ಅಧ್ಯಕ್ಷನಾಗಿ ಇರುತ್ತೇನೋ ಗೊತ್ತಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೀಡಿದ ಹೇಳಿಕೆ ಹಾಗೂ ಬುಧವಾರ ರಾತ್ರಿ ಸಚಿವರಿಗಾಗಿ ಆಯೋಜಿಸಿದ್ದ ಔತಣ ಕೂಟ‍ವು ಕಾಂಗ್ರೆಸ್‌ ವಲಯದಲ್ಲಿ ಹಲವು ಸ್ವಾರಸ್ಯಕರ ಚರ್ಚೆಗಳಿಗೆ ಆಸ್ಪದ ನೀಡಿದೆ. ಆದರೆ, ಪಕ್ಷದ ನಂಬಲರ್ಹ ಮೂಲಗಳ ಪ್ರಕಾರ ಕನಿಷ್ಠ ಈ ವರ್ಷಾಂತ್ಯದವರೆಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಅಸಾಧ್ಯ. ಅದರಲ್ಲೂ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿ ಮತ್ತು ಬಿಬಿಎಂಪಿ ಚುನಾವಣೆ ನಡೆಸುವ ದಿಸೆಯಲ್ಲಿ ಚಿಂತಿಸುತ್ತಿರುವ ಕಾಂಗ್ರೆಸ್‌ ನಾಯಕತ್ವ ಈ ಹಂತದಲ್ಲಿ ಅಧ್ಯಕ್ಷರ ಬದಲಾವಣೆಯಂತಹ ಸರ್ಕಸ್‌ಗೆ ಕೈ ಹಾಕುವ ಸಾಧ್ಯತೆಯೇ ಇಲ್ಲ.

ಹೀಗಿದ್ದರೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್‌ ಅವರೇ ಇಂತಹದೊಂದು ಹೇಳಿಕೆ ನೀಡಿದ್ದು ಏಕೆ ಎಂಬ ಬಗ್ಗೆ ಪಕ್ಷದ ವಲಯದಲ್ಲಂತೂ ಹಲವು ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಶಿವಕುಮಾರ್‌ ಅವರ ಆಪ್ತ ಮೂಲಗಳ ಪ್ರಕಾರ, ಬೆಂಗಳೂರು ನಗರಾಭಿವೃದ್ದಿ ಹಾಗೂ ಜಲಸಂಪನ್ಮೂಲ ಖಾತೆಯಂತಹ ಪ್ರಮುಖ ಖಾತೆಗಳನ್ನು ನಿರ್ವಹಿಸುತ್ತಿರುವ ಶಿವಕುಮಾರ್‌ ಅವರಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. ಅಲ್ಲದೆ, ಕಾಂಗ್ರೆಸ್‌ ಹೈಕಮಾಂಡ್‌, ಲೋಕಸಭಾ ಚುನಾವಣೆ ಪೂರ್ಣಗೊಳ್ಳುವವರೆಗೂ ನೀವೇ ಕೆಪಿಸಿಸಿ ಅಧ್ಯಕ್ಷ ಹುದ್ದೆ ನಿರ್ವಹಿಸಿ ಎಂಬ ಸೂಚನೆಯನ್ನು ಚುನಾವಣೆ ಪೂರ್ವದಲ್ಲಿ ಶಿವಕುಮಾರ್‌ ಅವರಿಗೆ ನೀಡಿತ್ತು.

'ನಾನು ರಾಜೀನಾಮೆ ಕೊಡಬೇಕೆಂಬುದು ಪಾಪ ಅವನ ಆಸೆ': ಎಚ್‌ಡಿಕೆ ವಿರುದ್ಧ ಡಿಕೆ ಶಿವಕುಮಾರ ಕಿಡಿ

ಈಗ ಲೋಕಸಭಾ ಚುನಾವಣೆ ಮುಕ್ತಾಯಗೊಂಡಿರುವುದರಿಂದ ಹೈಕಮಾಂಡ್‌ ಸೂಚಿಸಿದ್ದ ಅವಧಿ ಮುಗಿದಿದೆ. ಜತೆಗೆ, ಹುದ್ದೆಗೆ ಬಂದೂ ನಾಲ್ಕು ವರ್ಷವೂ ಆಗಿದೆ. ಈ ಎಲ್ಲ ಕಾರಣಗಳಿಗಾಗಿ ತಾವು ಈ ಹುದ್ದೆಯ ಹೊಣೆಗಾರಿಕೆಯನ್ನು ಬೇರೆಯವರಿಗೆ ಬಿಟ್ಟುಕೊಡಲು ಸಿದ್ಧ ಎಂಬ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸುವ ಏಕ ಮಾತ್ರ ಉದ್ದೇಶದಿಂದ ಶಿವಕುಮಾರ್‌ ಈ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಹೈಕಮಾಂಡ್‌ ಬಯಸಿದರೆ ಹುದ್ದೆ ಬಿಟ್ಟುಕೊಡುವ ಮನಸ್ಸೂ ಅವರಿಗೆ ಇದೆ ಎಂದು ಹೇಳುತ್ತವೆ.

ಆದರೆ, ಕಾಂಗ್ರೆಸ್‌ನ ಇತರ ಬಣಗಳ ನಾಯಕರು ಈ ಹೇಳಿಕೆಯನ್ನು ಇಷ್ಟು ನೇರ ಹಾಗೂ ಸರಳ ಎಂದು ವ್ಯಾಖ್ಯಾನಿಸುತ್ತಿಲ್ಲ. ಬದಲಾಗಿ, ಕೆಪಿಸಿಸಿ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯುವ ಹೇಳಿಕೆ ನೀಡುವ ಮೂಲಕ ಶಿವಕುಮಾರ್ ಸದ್ಯಕ್ಕೆ ನೇಪಥ್ಯಕ್ಕೆ ಸರಿದಿರುವ ಅಧಿಕಾರ ಹಂಚಿಕೆ ಸೂತ್ರದ ವಿಚಾರವನ್ನು ಜೀವಂತವಾಗಿಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದೇ ಬಿಂಬಿಸುತ್ತಿವೆ.

ಕೆಪಿಸಿಸಿ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರೆಯುವುದು ಅನುಮಾನ ಎಂಬ ಹೇಳಿಕೆ ನೀಡಿದ ಸಂದರ್ಭದಲ್ಲೇ, ತಮ್ಮ ಅಧಿಕಾರದ ಅವಧಿಯಲ್ಲೇ ಪಕ್ಷ ರಾಜ್ಯದಲ್ಲಿ ಅಧಿಕಾರ ಹಿಡಿದಿದೆ ಎಂದು ಶಿವಕುಮಾರ್ ಗಟ್ಟಿ ಧ್ವನಿಯಲ್ಲಿ ಹೇಳಿದ್ದನ್ನು ತಮ್ಮ ಈ ವ್ಯಾಖ್ಯಾನಕ್ಕೆ ಪೂರಕವಾಗಿ ಸದರಿ ಮೂಲಗಳು ಉಲ್ಲೇಖಿಸುತ್ತಿವೆ.

'ನಾಲ್ಕು ಓಟು ಹಾಕಿಸೋಕೆ ಆಗೊಲ್ಲ, ಬಂದು ಎಂಎಲ್ಸಿ ಸ್ಥಾನ ಕೇಳ್ತೀರಾ?' ಆಕಾಂಕ್ಷಿಗಳಿಗೆ ಡಿಕೆಶಿ ಎಚ್ಚರಿಕೆ

ಹೀಗಾಗಿ ಹೈಕಮಾಂಡ್‌ ಮಟ್ಟದಲ್ಲಿ ನಡೆದಿತ್ತು ಎನ್ನಲಾಗುವ ತಲಾ ಎರಡೂವರೆ ವರ್ಷದ ಅಧಿಕಾರ ಹಂಚಿಕೆ ಸೂತ್ರದಂತೆ ತಮ್ಮ ಶ್ರಮಕ್ಕೆ ಅರ್ಹ ಕೂಲಿ ದೊರೆಯಬೇಕು ಎಂಬ ವಿಚಾರವನ್ನು ಹೈಕಮಾಂಡ್‌ ಮುಂದಿಡಲು ಈ ಚರ್ಚೆ ಹುಟ್ಟುಹಾಕಲಾಗುತ್ತಿದೆ ಎಂದೇ ಈ ಬೆಳವಣಿಗೆಯನ್ನು ಬಿಂಬಿಸಲಾಗುತ್ತಿದೆ.

ಅಧ್ಯಕ್ಷ ಹುದ್ದೆಗೆ ಯಾರೂ ಸಿದ್ಧರಿಲ್ಲ!:

ಕುತೂಹಲಕಾರಿ ಸಂಗತಿಯೆಂದರೆ, ಶಿವಕುಮಾರ್‌ ಅವರೇನೋ ಕೆಪಿಸಿಸಿ ಅಧ್ಯಕ್ಷ ಗಾದಿ ಬಿಟ್ಟುಕೊಡುವ ಸಂದೇಶ ರವಾನಿಸಿದ್ದರೂ ಈ ಹುದ್ದೆ ಅಲಂಕರಿಸುವ ಇರಾದೆ ರಾಜ್ಯದ ಯಾವ ಪ್ರಮುಖ ನಾಯಕನು ಈವರೆಗೆ ವ್ಯಕ್ತಪಡಿಸುತ್ತಿಲ್ಲ.
ಇನ್ನು ಜಾತಿ ಲೆಕ್ಕಾಚಾರದ ಪ್ರಕಾರ ಒಕ್ಕಲಿಗರಾಗಿರುವ ಶಿವಕುಮಾರ್‌ ಈ ಹುದ್ದೆಯಿಂದ ಬದಲಾದರೆ ಸದರಿ ಹುದ್ದೆ ಲಿಂಗಾಯತರಿಗೆ ದೊರೆಯುವ ಸಾಧ್ಯತೆ ಹುಟ್ಟಿಕೊಳ್ಳುತ್ತದೆ. ಏಕೆಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗಕ್ಕೆ ಸೇರಿದ್ದರೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಒಕ್ಕಲಿಗರು. ಪರಿಶಿಷ್ಟ ಸಮುದಾಯದ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಸದ್ಯಕ್ಕೆ ಲಿಂಗಾಯತರಿಗೆ ಪಕ್ಷದಲ್ಲಿ ಉನ್ನತ ಹುದ್ದೆ ದೊರೆಯಬೇಕಾಗುತ್ತದೆ ಎಂಬ ವಾದವಿದೆ. ಆದರೆ, ಲಿಂಗಾಯತ ಸಮುದಾಯದ ಪಕ್ಷದ ಮುಂಚೂಣಿ ನಾಯಕರಿಗೆ ಸದ್ಯಕ್ಕೆ ಕೆಪಿಸಿಸಿ ಹುದ್ದೆ ಅಲಂಕರಿಸುವ ಯಾವುದೇ ಉಮೇದಿ ಇಲ್ಲ ಎಂದು ಮೂಲಗಳು ತಿಳಿಸಿವೆ.

Latest Videos
Follow Us:
Download App:
  • android
  • ios