*  ಖಾಸಗಿ ಕಂಪನಿಗೆ ವರ್ಗಾವಣೆ ಮಾಡುವಾಗ ಮೂಲ ಷೇರುದಾರರ ಅನುಮತಿ ಇದೆಯಾ? *  ವರ್ಗಾವಣೆ ಸಮಯದಲ್ಲಿ ಎಜೆಎಲ್‌ ಕಂಪನಿಯ ಸಾಲ ಎಷ್ಟಿತ್ತು? *  ಯಂಗ್‌ ಇಂಡಿಯಾದಲ್ಲಿರುವ ಪಾಲುದಾರರು ಎಷ್ಟು?

ಬೆಂಗಳೂರು(ಜೂ.17): ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ನಡೆಸುತ್ತಿರುವ ವಿಚಾರಣೆಯನ್ನು ವಿರೋಧಿಸಿ ನಡೆಸುತ್ತಿರುವ ಹೋರಾಟವನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕಾಂಗ್ರೆಸ್‌ ನಾಯಕರ ಮುಂದೆ ಪಂಚ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಖಾಸಗಿ ಕಂಪನಿಗೆ ವರ್ಗಾವಣೆ ಮಾಡುವಾಗ ಮೂಲ ಷೇರುದಾರರ ಅನುಮತಿ ಇದೆಯಾ? ವರ್ಗಾವಣೆ ಸಮಯದಲ್ಲಿ ಎಜೆಎಲ್‌ ಕಂಪನಿಯ ಸಾಲ ಎಷ್ಟಿತ್ತು? ಎರಡು ಸಾವಿರ ಕೋಟಿ ರು. ಮೌಲ್ಯದ ಆಸ್ತಿಯನ್ನು ಕೇವಲ 50 ಲಕ್ಷ ರು.ಗೆ ವರ್ಗಾವಣೆ ಮಾಡಿರುವುದು ಅಕ್ರಮ ಅಲ್ಲವೇ? ಯಂಗ್‌ ಇಂಡಿಯಾ ಕಂಪನಿ ಈಗ ಯಾವ ವಹಿವಾಟು ನಡೆಸುತ್ತಿದೆ? ಯಂಗ್‌ ಇಂಡಿಯಾದಲ್ಲಿರುವ ಪಾಲುದಾರರು ಎಷ್ಟು? ಈ ಪಂಚ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ ಎಂದು ಭಾವಿಸಿದ್ದೇನೆ ಎಂದು ಹೇಳಿದರು.

ನನ್ನ ಜಾಗದಲ್ಲಿ ಸಿಟಿ ರವಿ ಇದ್ದಿದ್ದರೆ ಅರೆಸ್ಟ್ ಆಗಿ ಪೊಲೀಸರ ನೆಕ್ಕುತ್ತಿದ್ರು ಹೇಳಿಕೆಗೆ ತಿರುಗೇಟು

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಕುಟುಂಬ ಕಾನೂನಿಗೆ ಅತೀತರೇ? ಆ ರೀತಿ ಕಾನೂನಿಗೆ ಅತೀತರಾಗಿದ್ದರೆ ಸಂವಿಧಾನದ ಯಾವ ಸೆಕ್ಷನ್‌ ಅಡಿಯಲ್ಲಿ ಪ್ರಾತಿನಿಧ್ಯ ನೀಡಲಾಗಿದೆ? ರಾಹುಲ್‌ ಗಾಂಧಿಯನ್ನು ಟಾರ್ಗೆಟ್‌ ಮಾಡಿದ್ದು, ಬಿಜೆಪಿಯವರು ಭಯಭೀತರಾಗಿದ್ದಾರೆ ಎಂಬ ಕಾರಣಕ್ಕೆ ಎಂಬುದು ರಾಜ್ಯ ಕಾಂಗ್ರೆಸ್‌ ನಾಯಕರ ಆರೋಪ. ಆದರೆ, ರಾಹುಲ್‌ ಗಾಂಧಿಯನ್ನು ಟಾರ್ಗೆಟ್‌ ಮಾಡುವ ಅವಶ್ಯಕತೆ ಏನಿದೆ? ನಿಮ್ಮ ನಾಯಕರು ಕಾಲಿಟ್ಟಕಡೆಯಲ್ಲೆಲ್ಲಾ ಕಾಂಗ್ರೆಸ್‌ ಸೋತಿದೆ. ಉತ್ತರ ಪ್ರದೇಶದ ಚುನಾವಣೆಯಲ್ಲಿ 399 ಕ್ಷೇತ್ರದಲ್ಲಿ ಸ್ಪರ್ಧಿಸಿ, 387 ಸ್ಥಾನದಲ್ಲಿ ಠೇವಣಿ ಕಳೆದುಕೊಂಡಿದೆ. ವಿಚಾರಣೆಗೆ ತಡೆ ನೀಡುವಂತೆ ಸುಪ್ರೀಂಕೋಟ್‌ ಮೊರೆ ಹೋಗಲಾಗಿದ್ದು, ನ್ಯಾಯಾಲಯವು ತಡೆಯಾಜ್ಞೆ ನಿರಾಕರಿಸಿದೆ. ಹೀಗಿರುವಾಗ ಟಾರ್ಗೆಟ್‌ ಮಾಡಲು ಹೇಗೆ ಸಾಧ್ಯ ಎಂದು ಕಿಡಿಕಾರಿದರು.