ಬೆಂಗಳೂರು, (ಫೆ.01):  ವಿಧಾನಪರಿಷತ್ ನಲ್ಲಿ ಕಾಂಗ್ರೆಸ್‌ ಎಮ್‌ಎಲ್‌ಸಿ ಪ್ರಕಾಶ್ ರಾಥೋಡ್ ಅಶ್ಲೀಲ ಚಿತ್ರ ವೀಕ್ಷಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಮಿತಿಗೆ ಸೂಚಿಸಲಾಗಿದೆ.

ವಿಧಾನ ಪರಿಷತ್ತಿನ ಸದಸ್ಯರೊಬ್ಬರು ಸದನದ ಒಳಗೆ ಜ.29ರಂದು ಕಲಾಪ ನಡೆಯುತ್ತಿರುವಾಗ ಅಶ್ಲೀಲ ಚಿತ್ರ ವೀಕ್ಷಿಸಿದ್ದಾರೆಂಬ ಕುರಿತು ಮಾಧ್ಯಮಗಳಲ್ಲಿ ಬಂದಿರುವ ವರದಿ ಬಗ್ಗೆ ತನಿಖೆ ನಡೆಸಲು ವಿಧಾನಪರಿಷತ್‌ ನೀತಿ ನಿರೂಪಣಾ ಸಮಿತಿಗೆ ಒಪ್ಪಿಸಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಆದೇಶಿಸಿದ್ದಾರೆ.

Video: ಕಲಾಪದಲ್ಲೇ ಕೂತು ಸೆಕ್ಸ್ ವಿಡಿಯೋ ನೋಡಿದ ಕಾಂಗ್ರೆಸ್​ ಎಂಎಲ್​ಸಿ

ಸೋಮವಾರ ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರಕಟಣೆ ಹೊರಡಿಸಿದ ಸಭಾಪತಿಗಳು, 2020- 21ನೇ ಸಾಲಿನ ವಿಧಾನಪರಿಷತ್ತಿನ ನೀತಿ ನಿರೂಪಣಾ ಸಮಿತಿಗೆ ಬಿ.ಕೆ. ಹರಿಪ್ರಸಾದ್‌, ಡಾ.ತೇಜಸ್ವಿನಿಗೌಡ, ಕೆ.ಟಿ. ಶ್ರೀಕಂಠೇಗೌಡ, ಎಸ್‌.ವಿ. ಸಂಕನೂರ, ಎನ್‌. ಅಪ್ಪಾಜಿಗೌಡ, ಪಿ.ಆರ್‌.ರಮೇಶ್‌ ಸದಸ್ಯರಾಗಿದ್ದು, ಉಪ ಸಭಾಪತಿ ಎಂ.ಕೆ. ಪ್ರಾಣೇಶ್‌ ಅವರು ಸಮಿತಿ ಅಧ್ಯಕ್ಷರಾಗಿರುತ್ತಾರೆ ಎಂದು ತಿಳಿಸಿದರು.

ಮಾಧ್ಯಮ ವರದಿ ಆಧರಿಸಿ ತನಿಖೆಯನ್ನು ನೀತಿ ನಿರೂಪಣಾ ಸಮಿತಿಗೆ ಒಪ್ಪಿಸಲಾಗಿದೆ. ಈ ವಿಷಯವಾಗಿ ವಿಚಾರಣೆ ಇಲ್ಲವೆ, ತನಿಖೆ ನಡೆದಾಗ ಮಾಧ್ಯಮಗಳು ಕೂಡ ಸಹಕರಿಸಬೇಕು ಎಂದು ಸಭಾಪತಿಗಳು ಸೂಚಿಸಿದರು.