ರಾಜಕೀಯ ಎಂದರೆ ಅಧಿಕಾರ ಹಂಚಿ ಸಹಕಾರ ನೀಡುವುದು. ಹೀಗಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಧಿಕಾರವನ್ನು ಹಂಚಲಾಗುವುದು. ಈ ಕಾರಣಕ್ಕಾಗಿ ಎಲ್ಲರೂ ಸಮಾಧಾನವಾಗಿ ಇರಬೇಕು ಎಂದ ಡಿ.ಕೆ.ಶಿವಕುಮಾರ್‌. 

ಬೆಂಗಳೂರು(ಏ.09): ‘ಕಾಂಗ್ರೆಸ್‌ ಟಿಕೆಟ್‌ ಸಿಗದವರು ತಾಳ್ಮೆ ವಹಿಸಿ ಸಹಕಾರ ನೀಡಿದರೆ ನಮ್ಮ ಸರ್ಕಾರವು ಮುಂದೆ ಸೂಕ್ತ ಹುದ್ದೆ ನೀಡಲಿದೆ. ಪಕ್ಷ ಅಧಿಕಾರಕ್ಕೆ ಬಂದರೆ ನಿಗಮ-ಮಂಡಳಿ ಸೇರಿದಂತೆ ಹಲವು ಹುದ್ದೆಗಳು ತೆರೆದುಕೊಳ್ಳಲಿವೆ. ಹೀಗಾಗಿ ಎಲ್ಲರೂ ಸಮಾಧಾನವಾಗಿ ಇರಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಂದೇಶ ನೀಡಿದ್ದಾರೆ. ‘ರಾಜಕೀಯ ಎಂದರೆ ಅಧಿಕಾರ ಹಂಚಿ ಸಹಕಾರ ನೀಡುವುದು. ಹೀಗಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಧಿಕಾರವನ್ನು ಹಂಚಲಾಗುವುದು. ಈ ಕಾರಣಕ್ಕಾಗಿ ಎಲ್ಲರೂ ಸಮಾಧಾನವಾಗಿ ಇರಬೇಕು’ ಎಂದರು.

ಟಿಕೆಟ್‌ ವಂಚಿತರು ಹಾಗೂ ಬೆಂಬಲಿಗರ ಆಕ್ರೋಶ, ಬಂಡಾಯ ಕೂಗಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಟಿಕೆಟ್‌ ತಪ್ಪಿದವರಿಗೆ ಆಕ್ರೋಶ, ಸಿಟ್ಟು ಸಹಜ. ಆದರೆ ಟಿಕೆಟ್‌ ಸಿಗದವರಿಗೆ ನಮ್ಮ ಸರ್ಕಾರ ಸೂಕ್ತ ಹುದ್ದೆ ನೀಡಲಿದೆ. ತಾಳ್ಮೆಯಿಂದ ಇದ್ದರೆ ಹುದ್ದೆ ಸಿಗುತ್ತದೆ. ಈ ಕುರಿತು ನಾವು ಎಲ್ಲರ ಜತೆ ಮಾತನಾಡುತ್ತಿದ್ದೇವೆ. ರಾಜಕಾರಣದಲ್ಲಿ ಆಸೆ ಸಹಜ. ಚುನಾವಣೆಯಲ್ಲಿ ಎಲ್ಲರಿಗೂ ಅವಕಾಶ ನೀಡಲು ಸಾಧ್ಯವಿಲ್ಲ. ಮುಂದೆ ಎಲ್ಲರಿಗೂ ಒಳ್ಳೆಯದಾಗಲಿದೆ’ ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಸಿದ್ಧ: ಡಿಕೆಶಿ

‘ಅವರ ಆಕ್ರೋಶದಲ್ಲಿ ತಪ್ಪೇನೂ ಇಲ್ಲ. ಐದಾರು ವರ್ಷಗಳಿಂದ ದುಡಿದಿರುತ್ತಾರೆ. ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್‌ ಕೊಟ್ಟಾಗ ಅಸಮಾಧಾನ ಸಹಜ. ಬಿಜೆಪಿಯಲ್ಲಿ ಅಭ್ಯರ್ಥಿ ಪಟ್ಟಿಪ್ರಕಟವಾಗುವ ಮುನ್ನವೇ ಭಿನ್ನಮತವನ್ನು ನೀವು ಕಾಣುತ್ತಿದ್ದೀರಿ. ಬೆಳಗಾವಿ ಹಾಗೂ ಇತರೆ ಭಾಗಗಳಲ್ಲಿ ನೋಡುತ್ತಿದ್ದೀರಿ. ನಮ್ಮ ಪಕ್ಷದಲ್ಲಿ ಗೆಲುವಿನ ಸಾಮರ್ಥ್ಯ ಬಹಳ ಮುಖ್ಯ. ಆ ದೃಷ್ಟಿಯಿಂದ ನಾವು ಕೆಲವು ತೀರ್ಮಾನ ಕೈಗೊಂಡಿರುತ್ತೇವೆ. ಬಿಜೆಪಿಯಲ್ಲೂ ಹಾಲಿ ಶಾಸಕರಿದ್ದರು. ಅವರೆಲ್ಲರೂ ಕಾಂಗ್ರೆಸ್‌ ಸೇರುತ್ತಿದ್ದಾರೆ. ಬಂದವರಿಗೆಲ್ಲಾ ಅವಕಾಶ ನೀಡುತ್ತಿಲ್ಲ. ಗೆಲ್ಲುವ ಸಾಮರ್ಥ್ಯದ ಮೇಲೆಯೇ ಅವಕಾಶ ನೀಡಲಾಗುತ್ತಿದೆ’ ಎಂದರು.

ಎಚ್‌. ವಿಶ್ವನಾಥ್‌, ಶಿವಲಿಂಗೇಗೌಡ ನಾಳೆ ಕಾಂಗ್ರೆಸ್‌ಗೆ

ಸೋಮವಾರ ಎಚ್‌. ವಿಶ್ವನಾಥ್‌ ಅವರು ಕಾಂಗ್ರೆಸ್‌ ಸೇರಲಿದ್ದಾರೆ. ಇನ್ನು ಶಿವಲಿಂಗೇಗೌಡ ಅವರೂ ಸಹ ಕಾಂಗ್ರೆಸ್‌ ಸೇರಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.