Asianet Suvarna News Asianet Suvarna News

ಸ್ಥಳೀಯ ಸಂಸ್ಥೆ ಎಲೆಕ್ಷನ್‌: ಮತ್ತೆ ಕಾಂಗ್ರೆಸ್‌ ಮೇಲುಗೈ!

ಸ್ಥಳೀಯ ಸಂಸ್ಥೆ ಎಲೆಕ್ಷನ್‌: ಮತ್ತೆ ಕಾಂಗ್ರೆಸ್‌ ಮೇಲುಗೈ| 4 ನಗರಸಭೆ ಸೇರಿ 6 ಸಂಸ್ಥೆಗೆ ಚುನಾವಣೆ| ಆದರೆ, ಸ್ಥಾನ ಇಳಿಕೆ ಬಿಜೆಪಿ ಸೀಟು ಗಳಿಕೆ ಹೆಚ್ಚಳ| ಹೊಸಕೋಟೆಯಲ್ಲಿ ಪ್ರಭಾವ ತೋರಿದ ಎಂಟಿಬಿ: ಶರತ್‌ಗೆ ತಿರುಗೇಟು| ಒಟ್ಟಾರೆ 6 ಸ್ಥಳೀಯ ಸಂಸ್ಥೆಗಳ 167 ವಾರ್ಡ್‌ಗೆ ನಡೆದ ಚುನಾವಣೆ| ಕಾಂಗ್ರೆಸ್‌ಗೆ ಗರಿಷ್ಠ 69, ಬಿಜೆಪಿಗೆ 59, ಜೆಡಿಎಸ್‌ಗೆ 15 ಸ್ಥಾನಗಳಲ್ಲಿ ಜಯ

Congress Wins In Local Body and Municipal elections in karnataka
Author
Bangalore, First Published Feb 12, 2020, 7:32 AM IST

 ಬೆಂಗಳೂರು[ಫೆ.12]: ರಾಜ್ಯದ ನಾಲ್ಕು ನಗರಸಭೆ ಸೇರಿದಂತೆ ಆರು ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ ಅಧಿಕ ಸ್ಥಾನಗಳನ್ನು ಗಳಿಸಿದ್ದು, ಆಡಳಿತರೂಢ ಬಿಜೆಪಿ ಎರಡನೇ ಸ್ಥಾನಕ್ಕೆ ಪಡೆದುಕೊಂಡಿದೆ. ಜೆಡಿಎಸ್‌ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.

ಆದರೆ, ಕಳೆದ ಬಾರಿಗೆ ಹೋಲಿಸಿದರೆ ಕಾಂಗ್ರೆಸ್‌ ಈ ಬಾರಿ ತನ್ನ ಸ್ಥಾನಗಳನ್ನು ಕಳೆದುಕೊಂಡಿದೆ. ಬಿಜೆಪಿ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ.

ಹೊಸಕೋಟೆ ನಗರಸಭೆಯಲ್ಲಿ ಬಿಜೆಪಿ ಅಧಿಕ ಸ್ಥಾನಗಳನ್ನು ಗಳಿಸುವ ಮೂಲಕ ಮಾಜಿ ಶಾಸಕ ಎಂ.ಟಿ.ಬಿ.ನಾಗರಾಜ್‌ ತಮ್ಮ ಪ್ರಭಾವವನ್ನು ತೋರಿಸಿದ್ದಾರೆ. ಎದುರಾಳಿ ಹಾಗೂ ಸ್ಥಳೀಯ ಪಕ್ಷೇತರ ಶಾಸಕ ಶರತ್‌ ಬಚ್ಚೇಗೌಡ ಅವರಿಗೆ ತಿರುಗೇಟು ನೀಡಿದ್ದಾರೆ.

ಹೊಸಕೋಟೆಯಲ್ಲಿ ಕೊನೆಗೂ ಸೇಡು ತೀರಿಸಿಕೊಂಡ ಎಂಟಿಬಿ

ಚಿಕ್ಕಬಳ್ಳಾಪುರ ಮತ್ತು ಹುಣಸೂರು ನಗರಸಭೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದು, ನೂತನ ಸಚಿವ ಡಾ.ಕೆ.ಸುಧಾಕರ್‌ ಹಾಗೂ ಮಾಜಿ ಶಾಸಕ ಎಚ್‌.ವಿಶ್ವನಾಥ್‌ ಅಷ್ಟಾಗಿ ಪ್ರಭಾವ ಬೀರಲು ಸಾಧ್ಯವಾಗಿಲ್ಲ.

ಹೊಸಕೋಟೆ, ಚಿಕ್ಕಬಳ್ಳಾಪುರ, ಹುಣಸೂರು, ಸಿರಗುಪ್ಪ ನಗರಸಭೆ, ತೆಕ್ಕಲಕೋಟೆ ಪಟ್ಟಣ ಪಂಚಾಯತ್‌ ಮತ್ತು ಸಿಂದಗಿ ಪುರಸಭೆಯ ಒಟ್ಟು 167 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 69, ಬಿಜೆಪಿ 59, ಜೆಡಿಎಸ್‌ 15, ಭಾಪ್ರಪ 7, ಎಸ್‌ಡಿಪಿಐ 3 ಮತ್ತು ಪಕ್ಷೇತರರು 14 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಹೊಸಪೇಟೆ ನಗರಸಭೆಯಲ್ಲಿ ಬಿಜೆಪಿ 22 ಸ್ಥಾನಗಳನ್ನು ಪಡೆದು ಅಧಿಕಾರಕ್ಕೇರಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಯಾವುದೇ ಸ್ಥಾನಗಳನ್ನು ಗಳಿಸಿಲ್ಲ. ಭಾಪ್ರಪ 7, ಎಸ್‌ಡಿಪಿಐ 1, ಪಕ್ಷೇತರ 1 ಸ್ಥಾನ ಪಡೆದುಕೊಂಡಿವೆ. ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಕಾಂಗ್ರೆಸ್‌ 16 ಸ್ಥಾನಗಳನ್ನು ಪಡೆದು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಬಿಜೆಪಿ 9, ಜೆಡಿಎಸ್‌ 2, ಪಕ್ಷೇತರರು 4 ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ.

ಮೈಸೂರು ಜಿಲ್ಲೆಯ ಹುಣಸೂರು ನಗರಸಭೆಯಲ್ಲಿ ಕಾಂಗ್ರೆಸ್‌ 14, ಬಿಜೆಪಿ 3, ಜೆಡಿಎಸ್‌ 7, ಎಸ್‌ಡಿಪಿಐ 2 ಮತ್ತು ಪಕ್ಷೇತರರು 5 ಸ್ಥಾನಗಳನ್ನು ಪಡೆದು ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ನಗರಸಭೆಯಲ್ಲಿ ಕಾಂಗ್ರೆಸ್‌ 19 ಸ್ಥಾನಗಳನ್ನು ಪಡೆದು ಅಧಿಕಾರ ಹಿಡಿದಿದೆ. ಬಿಜೆಪಿ 11, ಪಕ್ಷೇತರರು 1 ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ. ತೆಕ್ಕಲಕೋಟೆ ಪಟ್ಟಣ ಪಂಚಾಯತ್‌ನಲ್ಲಿ 11 ಸ್ಥಾನ ಪಡೆದು ಬಿಜೆಪಿ ಅಧಿಕಾರ ಪಡೆದಿದೆ. ಕಾಂಗ್ರೆಸ್‌ 11 ಸ್ಥಾನಗಳನ್ನು ಪಡೆದುಕೊಂಡಿದೆ. ವಿಜಯಪುರ ಜಿಲ್ಲೆ ಸಿಂದಗಿ ಪುರಸಭೆಯಲ್ಲಿ ಕಾಂಗ್ರೆಸ್‌ 11, ಬಿಜೆಪಿ 3, ಜೆಡಿಎಸ್‌ 6, ಪಕ್ಷೇತರರು 3 ಸ್ಥಾನದಲ್ಲಿ ಗೆಲುವು ಸಾಧಿಸಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಮೈಸೂರು: ಪಿಎಸಿಸಿಎಸ್‌ ಚುನಾವಣೆಯಲ್ಲಿ JDS ಮೇಲುಗೈ

ಉಪಚುನಾವಣೆಯಲ್ಲಿ ಗೆದ್ದಿದ್ದು ಯಾರು?

ಮೈಸೂರು ಮಹಾನಗರ ಪಾಲಿಕೆ, ಖಾನಾಪುರ ಪಟ್ಟಣ ಪಂಚಾಯತ್‌, ಹಿರೇಕೆರೂರ ಪಟ್ಟಣ ಪಂಚಾಯತ್‌ನ ಒಂದೊಂದು ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅವಿರೋಧವಾಗಿ ಆಯ್ಕೆಯಾಗಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹೆಬ್ಬಾಳ ಜಿಲ್ಲಾ ಪಂಚಾಯತ್‌ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ತಾಲೂಕು ಪಂಚಾಯತ್‌ ಉಪಚುನಾವಣೆಯಲ್ಲಿ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಮತ್ತಿಕೆರೆ ಕ್ಷೇತ್ರ, ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಅಲಕಾಪುರ ಕ್ಷೇತ್ರದಲ್ಲಿ ಅವಿರೋಧ ಆಯ್ಕೆಯಾಗಿದೆ.

ಇನ್ನುಳಿದಂತೆ ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ, ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಲಕ್ಕೂರು ಕ್ಷೇತ್ರದಲ್ಲಿ ಕಾಂಗ್ರೆಸ್‌, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕರಬೂರು ಕ್ಷೇತ್ರದಲ್ಲಿ ಭಾಪ್ರಪ ಗೆಲುವು ಸಾಧಿಸಿದೆ. ಗೌರಿಬಿದನೂರಿನ ಶ್ಯಾಂಪುರ ಕ್ಷೇತ್ರದಲ್ಲಿ ಬಿಜೆಪಿ, ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಟಕೋಳ ಕ್ಷೇತ್ರದಲ್ಲಿ ಬಿಜೆಪಿ, ಹಾವೇರಿ ಜಿಲ್ಲೆ ಹಾನಗಲ್‌ ತಾಲೂಕಿನ ತಿಳವಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಕರೂರು ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಿದೆ.

ಕೊನೇ ಮತ ಮೊಮ್ಮಗಳಿಗೆ ಒತ್ತಿ ಮೃತಪಟ್ಟ ಶತಾಯುಷಿ!

Follow Us:
Download App:
  • android
  • ios