Karnataka assembly election: 130 ಸ್ಥಾನದಲ್ಲಿ ಕಾಂಗ್ರೆಸ್ ಗೆಲುವು: ಸಲೀಂ ಅಹ್ಮದ್
ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 130 ಕ್ಷೇತ್ರಗಳಲ್ಲಿ ಗೆದ್ದು ಬಹುಮತದ ಸರ್ಕಾರ ರಚನೆ ಮಾಡಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದರು.
ಧಾರವಾಡ (ನ.25) : ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 130 ಕ್ಷೇತ್ರಗಳಲ್ಲಿ ಗೆದ್ದು ಬಹುಮತದ ಸರ್ಕಾರ ರಚನೆ ಮಾಡಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದರು. ಇಲ್ಲಿನ ರಪಾಠಿ ಕಲ್ಯಾಣ ಮಂಟಪದಲ್ಲಿ ಧಾರವಾಡ ಜಿಲ್ಲಾ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರದ ಕಾರ್ಯ ವೈಖರಿ ಜನರಿಗೆ ಬೇಸರ ತರಿಸಿದ್ದು, 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಗೆದ್ದು ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಶೇ. 40 ಕಮಿಶನ್ ಸರ್ಕಾರ ಎಂಬ ಕುಖ್ಯಾತಿ ಗಳಿಸಿದೆ. ಧರ್ಮ ಧರ್ಮಗಳ ಮಧ್ಯೆ, ಜಾತಿ-ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿ ಜನರನ್ನು ವಂಚಿಸಿ ಅಧಿಕಾರ ನಡೆಸುತ್ತಿದೆ. ಬಡವರಿಗೆ ಅಭಿವೃದ್ಧಿ ಕೆಲಸಗಳನ್ನು ಮಾಡುವುದಾಗಿ ನೀಡಿದ್ದ ಭರವಸೆ ಈಡೇರಿಲ್ಲ. ಎಲ್ಲವನ್ನು ಮತದಾರರು ಸ್ಮರಣೆಯಲ್ಲಿಟ್ಟುಕೊಂಡಿರುತ್ತಾರೆ ಎಂಬುದನ್ನು ಬಿಜೆಪಿ ಮುಖಂಡರು ತಿಳಿಯಬೇಕು ಎಂದರು.
Karnataka Politics: ಬಿಜೆಪಿಯಿಂದ ಖೊಟ್ಟಿಮತದಾರರ ಸೃಷ್ಟಿ-ಸಲೀಂ ಅಹ್ಮದ್
ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಅಪಾದನೆ ಮಾಡುತ್ತಲೇ ಬಂದಿದೆ. ಆದರೆ, ಪ್ರಧಾನಿ ಹುದ್ದೆ ಬಿಟ್ಟುಕೊಟ್ಟಸೋನಿಯಾ ಗಾಂಧಿ ಅವರ ಮಾರ್ಗದರ್ಶನದಲ್ಲಿ ರಾಹುಲ್ ಅವರು ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಪಕ್ಷಕ್ಕಾಗಿ ದುಡಿದ ಹಿರಿಯರಿಗೆ ನೀಡಿದ್ದು ತ್ಯಾಗವಲ್ಲವೇ ಎಂದು ಪ್ರಶ್ನಿಸಿದರು.
ರಾಹುಲ್‌ಗಾಂಧಿ ಅವರ ನೇತೃತ್ವದಲ್ಲಿ ದೇಶದುದ್ದಕ್ಕೂ ಭಾರತ ಜೋಡೋ ಪಾದಯಾತ್ರೆ ನಡೆಯುತ್ತಿದೆ. ಕರ್ನಾಟಕದಲ್ಲಿ 511 ಕಿಮೀ ಪಾದಯಾತ್ರೆ ಮಾಡಿದ್ದೇವೆ. ಜನ ಸಾಗರವೇ ಸೇರಿದ್ದು, ಇದರಲ್ಲಿ ಸರ್ವ ಜನಾಂಗದ ಜನರು ಕಾಂಗ್ರೆಸ್ ಯಾತ್ರೆಗೆ ಬೆಂಬಲ ನೀಡಿದ್ದಾರೆ. ಕೋಮುವಾದಿ ಶಕ್ತಿಗಳ ವಿರುದ್ಧ ದೇಶ ಒಡೆಯುವ ಬಿಜೆಪಿಗೆ ಈ ಪಾದಯಾತ್ರೆ ಉತ್ತರವಾಗಿದೆ ಎಂದರು.
ರಾಜೀವ ಗಾಂಧಿ ಅವರು ಗ್ರಾಮ ಸ್ವರಾಜ್ ವ್ಯವಸ್ಥೆಯನ್ನು ಹೆಚ್ಚು ಕ್ರಿಯಾಶೀಲ ಮಾಡಲು ಶ್ರಮಿಸಿದ್ದರು. ಆದರೆ ಇಂದು ಬಿಜೆಪಿ ಈ ವ್ಯವಸ್ಥೆಯನ್ನು ಸದೃಢಗೊಳಿಸಲು ಬಿಡುತ್ತಿಲ್ಲ. ಇದೀಗ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗೆ ಚುನಾವಣೆ ನಡೆದರೆ ಸೋಲುವ ಭೀತಿಯಿಂದ ಬಿಜೆಪಿ ಚುನಾವಣೆ ನಡೆಸುತ್ತಿಲ್ಲ ಎಂದು ಸಲೀಂ ಅಹ್ಮದ್ ಆರೋಪಿಸಿದರು.
ಬೂತ್ ಮಟ್ಟದಿಂದ ಕಾಂಗ್ರೆಸ್ ಸಂಘಟಿಸುವ ಹೊಣೆ ಕಾರ್ಯಕರ್ತರದ್ದು. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಅವರ ನೇತೃತ್ವದಲ್ಲಿ ಪಕ್ಷ ಸಂಘಟಿಸಿ ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳನ್ನು ಈ ಬಾರಿ ಕಾಂಗ್ರೆಸ್ ಗೆಲ್ಲಲೇಬೇಕು. ಇದಕ್ಕಾಗಿ ಪಕ್ಷದ ಕಾರ್ಯಕರ್ತರು ಈಗಿನಿಂದಲೇ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಗ್ರಾಪಂ ಸದಸ್ಯರು ನನ್ನನ್ನು ಪ್ರಚಂಡ ಬಹುಮತದಿಂದ ಆಯ್ಕೆ ಮಾಡಿದ್ದಾರೆ. ವಿಧಾನ ಪರಿಷತ್ತಿನಲ್ಲಿದ್ದುಕೊಂಡು ಗ್ರಾಪಂಗಳಿಗೆ ಹೆಚ್ಚಿನ ಅನುದಾನ, ಗ್ರಾಪಂ ಸದಸ್ಯರಿಗೆ ಆರೋಗ್ಯ ಯೋಜನೆ ಸೇರಿದಂತೆ ವಿವಿಧ ಅನುಕೂಲತೆ ಮಾಡಿಕೊಡಲು ಸದಾ ಹೋರಾಟ ಮಾಡುತ್ತೇನೆ ಎಂದು ಸಲೀಂ ಅಹ್ಮದ್ ಹೇಳಿದರು.
ಡಿಸೆಂಬರ್ ಅಂತ್ಯದೊಳಗೆ 150 ಅಭ್ಯರ್ಥಿಗಳ ಅಂತಿಮ: ಸಲೀಂ ಆಹ್ಮದ್
ಶಾಸಕರಾದ ಪ್ರಸಾದ ಅಬ್ಬಯ್ಯ, ಕುಸುಮಾವತಿ ಶಿವಳ್ಳಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ಬಸವರಾಜ ಗುರಿಕಾರ, ವೀರಣ್ಣ ಮತ್ತಿಗಟ್ಟಿ, ಐ.ಜಿ. ಸನದಿ, ಎಂ.ಎಸ್. ಅಕ್ಕಿ, ಅನಿಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರ ಇದ್ದರು.