ಬೆಂಗಳೂರು (ಫೆ.22):  ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲು ಅವಕಾಶ ಹುಡುಕಿಕೊಂಡು ಹೋಗುವ ಅಗತ್ಯವಿಲ್ಲ. ರಾಷ್ಟ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳ ವೈಫಲ್ಯ ಹಾಗೂ ಜನವಿರೋಧಿ ಆಡಳಿತವು ನಮ್ಮ ಮನೆ ಬಾಗಿಲಿಗೆ ಅವಕಾಶ ತರುತ್ತಿದೆ. ಇದನ್ನು ನಾವು ಹೇಗೆ ಸದ್ಬಳಕೆ ಮಾಡಿಕೊಳ್ಳುತ್ತೇವೆ ಎಂಬುದರ ಮೇಲೆ ನಾಡಿನ ಭವಿಷ್ಯ ನಿಂತಿದೆ. ಬಿಜೆಪಿ ಕಪಿಮುಷ್ಟಿಯಿಂದ ಕರುನಾಡನ್ನು ರಕ್ಷಿಸಲು ಕಾಂಗ್ರೆಸ್ಸಿಗರೆಲ್ಲರೂ ಒಗ್ಗೂಡಿ ಹೋರಾಟ ನಡೆಸಬೇಕು.

ಹೀಗೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕರೆ ನೀಡಿದ್ದಾರೆ.

ಬೆಂಗಳೂರಿನ ಚೌಡಯ್ಯ ಮೆಮೋರಿಯಲ್‌ ಹಾಲ್‌ನಲ್ಲಿ ಭಾನುವಾರ ನಡೆದ ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರಾದ ಧ್ರುವನಾರಾಯಣ ಮತ್ತು ರಾಮಲಿಂಗಾರೆಡ್ಡಿ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಪಕ್ಷದ ಸಂಘಟನೆಯಲ್ಲಿ ಹಲವು ಮಹತ್ವದ ಬದಲಾವಣೆ ತರಲಾಗುವುದು ಎಂದರು.

ಕೇಂದ್ರ ಹಾಗೂ ರಾಜ್ಯದ ಆಡಳಿತದಲ್ಲಿ ಬಡವರು ಜೀವನ ನಡೆಸಲಾಗದ ಸ್ಥಿತಿ ಬಂದಿದೆ. ಸರ್ಕಾರದ ಹಂತದಲ್ಲಿ ಏನೇನು ಗಬ್ಬು ನಡೆಯುತ್ತಿದೆ ಎಂಬುದನ್ನು ಯಾರೂ ಬಿಡಿಸಿ ಹೇಳುವ ಅಗತ್ಯವಿಲ್ಲ. ಕೊರೋನಾ ಅವಧಿಯಲ್ಲಿ ಜನವಿರೋಧಿ ಕ್ರಮ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಭ್ರಷ್ಟಾಚಾರ, ಜನವಿರೋಧಿ ಕಾನೂನುಗಳಿಂದ ಜನ ರೋಸಿ ಹೋಗಿದ್ದಾರೆ. ಬಡತನ ಹೆಚ್ಚಾಗಿದ್ದು, ಸರ್ಕಾರದ ವಿರುದ್ಧ ಜನಾಕ್ರೋಶ ಸೃಷ್ಟಿಯಾಗಿದೆ. ಈ ಮೂಲಕ ನಮ್ಮ ಪಕ್ಷದ ಬಾಗಿಲಿಗೆ ಅವಕಾಶ ಹುಡುಕಿಕೊಂಡು ಬಂದಿದೆ. ಇದಕ್ಕೆ ಪೂರಕವಾಗಿ ಹೋರಾಟ ನಡೆಸಬೇಕು ಎಂದು ಹೇಳಿದರು.

ವ್ಯಕ್ತಿ ಪೂಜೆ ಬೇಡ, ಪಕ್ಷ ಪೂಜೆ ಮಾಡಿ:

ನನ್ನ ಕೆಲ ಬೆಂಬಲಿಗರು ಮುಂದಿನ ಮುಖ್ಯಮಂತ್ರಿ ನೀವೇ ಆಗಬೇಕು ಎಂದು ಹೇಳುತ್ತಾರೆ. ಅವರಿಗೆ ನಾನು ಬುದ್ಧಿ ಹೇಳುತ್ತೇನೆ. ಈಗ ವ್ಯಕ್ತಿ ಪೂಜೆ ಬೇಕಿಲ್ಲ. ಪಕ್ಷದ ಪೂಜೆ ಮಾಡಬೇಕು. ಕಾಂಗ್ರೆಸ್‌ ಶಕ್ತಿಶಾಲಿಯಾದರೆ ಮಾತ್ರ ರಾಜ್ಯದ ಜನತೆಯನ್ನು ಉಳಿಸಲು ಸಾಧ್ಯ. ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಒಗ್ಗೂಡಿ ಹೋರಾಟ ನಡೆಸಬೇಕು ಎಂದರು.

ಎಬಿವಿಪಿ ರೀತಿ ಹೋರಾಟ-ಧ್ರುವ:

ಮಾಜಿ ಸಂಸದ ಹಾಗೂ ನೂತನ ಕಾರ್ಯಾಧ್ಯಕ್ಷ ಧ್ರುವನಾರಾಯಣ ಮತನಾಡಿ, ಎನ್‌ಎಸ್‌ಯುಐ ಹಾಗೂ ಯುವ ಕಾಂಗ್ರೆಸ್‌ನವರಿಗೆ ತರಬೇತಿ ನೀಡಬೇಕಿದೆ. ಎಬಿವಿಪಿಯಂತೆ ಎನ್‌ಎಸ್‌ಯುಐ ಘಟಕವೂ ನಿರಂತರವಾಗಿ ಕೆಲಸ ಮಾಡಬೇಕು. ಇತ್ತೀಚೆಗೆ ವಿಧಾನಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಗುರುಕುಲ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು ಎಂದು ಹೇಳಿಕೆ ನೀಡಿದ್ದರು. ಮೆಕಾಲೆ ಶಿಕ್ಷಣ ವ್ಯವಸ್ಥೆಯಿಂದ ಎಲ್ಲರಿಗೂ ಶಿಕ್ಷಣ ಸಿಗುತ್ತಿದೆ. ಹೀಗಿರುವಾಗ ಕೆಲವೇ ವರ್ಗಗಳಿಗೆ ಸೀಮಿತವಾಗುವ ಶಿಕ್ಷಣ ತರುವ ಹೇಳಿಕೆ ನೀಡಿದ್ದಾರೆ. ಇನ್ನು ಕೇಂದ್ರ ಬಜೆಟ್‌ನಲ್ಲೂ ತಾರತಮ್ಯ ಆಗಿದೆ. ಇಂತಹ ವಿಷಯಗಳ ಬಗ್ಗೆ ಎಲ್ಲರೂ ಒಟ್ಟಾಗಿ ಹೋರಾಡಬೇಕು ಎಂದರು.

ಬಿಜೆಪಿಯ ಸುಳ್ಳು ಅನಾವರಣ: ನೂತನ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಬಿಜೆಪಿ ಸುಳ್ಳುಗಳನ್ನು ಹೇಳುವುದನ್ನೇ ಸಾಧನೆ ಮಾಡಿಕೊಂಡಿದೆ. ದೇಶಕ್ಕೆ ಅವರು ಹೇಳಿರುವ ಸುಳ್ಳುಗಳು ಜನರಿಗೆ ಮನವರಿಕೆಯಾಗುತ್ತಿವೆ. ಮುಂದಿನ ಅವಧಿಗೆ ಅವರನ್ನು ಅಧಿಕಾರದಿಂದ ಕಿತ್ತೊಗೆಯಲು ಕಾಯುತ್ತಿದ್ದಾರೆ. ಇದಕ್ಕೆ ಪೂರಕವಾಗಿ ನಾವೆಲ್ಲರೂ ಕೆಲಸ ಮಾಡಬೇಕು ಎಂದರು. ವಿಧಾನಪರಿಷತ್‌ ವಿಪಕ್ಷ ನಾಯಕ ಎಸ್‌.ಆರ್‌. ಪಾಟೀಲ್‌, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್‌, ಈಶ್ವರ್‌ ಖಂಡ್ರೆ, ಎಐಸಿಸಿ ತಮಿಳುನಾಡು ಉಸ್ತುವಾರಿ ದಿನೇಶ್‌ ಗುಂಡೂರಾವ್‌ ಸೇರಿ ಹಲವರು ಹಾಜರಿದ್ದರು.

ಮೀಸಲಾತಿ ಹೋರಾಟದ ಬಗ್ಗೆ ಹೇಳಿಕೆ ನೀಡಬೇಡಿ

ಸರ್ಕಾರದ ವಿರುದ್ಧ ಮಠಾಧೀಶರೆಲ್ಲರೂ ಬೀದಿಗೆ ಇಳಿದಿದ್ದಾರೆ. ಇದು ಎಲ್ಲಿಗೆ ಹೋಗುತ್ತಿದೆ ಎಂಬ ಆತಂಕ ಕಾಡುತ್ತಿದೆ. ಇಂತಹ ವಿಚಾರಗಳ ಬಗ್ಗೆ ಮುಖಂಡರು, ಕಾರ್ಯಕರ್ತರು ಬಹಳ ಹುಷಾರಾಗಿರಬೇಕು. ಯಾರೂ ಹೇಳಿಕೆ ನೀಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಎಲ್ಲಾ ಹಿರಿಯ ನಾಯಕರು ಒಟ್ಟಿಗೆ ಕುಳಿತುಕೊಂಡು ಚರ್ಚಿಸುತ್ತೇವೆ. ನಾವೆಲ್ಲರೂ ಒಂದು ತೀರ್ಮಾನಕ್ಕೆ ಬಂದ ಮೇಲೆ ಪಕ್ಷದ ನಿರ್ಧಾರ ಪ್ರಕಟಿಸುತ್ತೇವೆ ಎಂದು ಹೇಳಿದರು.

100 ಕ್ಷೇತ್ರಗಳಲ್ಲಿ ತಲಾ 2 ಕಿಮೀ ಪಾದಯಾತ್ರೆ

ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಪಕ್ಷ ಪರಾಜಿತಗೊಂಡಿರುವ 100 ಕ್ಷೇತ್ರಗಳಲ್ಲಿ ಈ ವರ್ಷ ಪ್ರಚಾರಾಂದೋಲನ ಹಮ್ಮಿಕೊಳ್ಳಲಿದ್ದೇವೆ. ನಾಯಕರೆಲ್ಲರೂ ಒಟ್ಟಾಗಿ ಹಾಗೂ ಪ್ರತ್ಯೇಕವಾಗಿ ಎರಡೂ ರೀತಿಯಲ್ಲೂ ಪ್ರವಾಸ ಮಾಡುತ್ತೇವೆ. ಪ್ರತಿ ಕ್ಷೇತ್ರದಲ್ಲಿ 2 ಕಿ.ಮೀ. ಪಾದಯಾತ್ರೆ ನಡೆಸಲಾಗುವುದು. ಈಗಾಗಲೇ ಒಂಬತ್ತು ಜಿಲ್ಲೆಗಳಲ್ಲಿ ಪ್ರವಾಸ ನಡೆಸಲಾಗಿದೆ. ಈ ಪ್ರಕ್ರಿಯೆ ಮುಂದುವರೆಯಲಿದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಕ್ಷೇತ್ರಗಳಿಗೆ ಭೇಟಿ ನೀಡಿ ನಾಯಕರನ್ನು ಗುರುತಿಸುವ ಕೆಲಸ ಮಾಡುತ್ತೇವೆ. ಇನ್ನು ಮುಂದೆ ಬೆಂಗಳೂರು ಕಚೇರಿಯಲ್ಲಿ ಕುಳಿತು ಅಭ್ಯರ್ಥಿ ಆಯ್ಕೆ ನಡೆಯುವುದಿಲ್ಲ. ಕ್ಷೇತ್ರಗಳಲ್ಲಿ ಯಾರಿಗೆ ಜನಬೆಂಬಲವಿದೆ ಎಂಬುದನ್ನು ಗಮನಿಸುತ್ತೇವೆ. ಜನಮನ್ನಣೆ ಪಡೆದವರಿಗಷ್ಟೇ ಅವಕಾಶ ನೀಡಲಾಗುವುದು. ನಮಗೆ ಸಂಖ್ಯೆ ಬಹಳ ಮುಖ್ಯ ಎಂದು ಸ್ಪಷ್ಟಪಡಿಸಿದರು.