ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜಯ: ಸಿದ್ದು ಮತ್ತೆ ಸಿಎಂ ಅಗ್ತಾರೆ, ರೇವಣ್ಣ
ಧಮ್ಮಿದ್ದರೆ ನಮ್ಮ ಗೆಲುವನ್ನು ತಡೆಯಿರಿ ನೋಡೋಣ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸವಾಲು ಹಾಕಿದ ಎಚ್.ಎಂ ರೇವಣ್ಣ
ಬೀದರ್(ಸೆ.14): ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಸಿಗಲಿದ್ದು ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುತ್ತಾರೆ ಎನ್ನುವ ಭಯ ಬಿಜೆಪಿಗೆ ಶುರುವಾಗಿದೆ. ಹೀಗಾಗಿ ಅವರ ವಿರುದ್ಧ ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ಸಚಿವರು ನೀಡುತ್ತಿದ್ದಾರೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಎಚ್.ಎಂ. ರೇವಣ್ಣ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಮಾಜಿ ಸಚಿವ ಎಚ್.ಎಂ ರೇವಣ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಧಮ್ಮಿದ್ದರೆ ನಮ್ಮ ಗೆಲುವನ್ನು ತಡೆಯಿರಿ ನೋಡೋಣ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸವಾಲು ಹಾಕಿದ್ದಾರೆ. ಈ ಸವಾಲು ನಮಗೆ ಹಾಕುವ ಬದಲು ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಮಾಡಿ ತೋರಿಸಲಿ. ಭಾಷಣವೇ ಇವರಿಗೆ ಬಂಡವಾಳವಾಗಿದೆ ಎಂದು ಟೀಕಿಸಿದರು.
KARNATAKA POLITICS: ಬಿಜೆಪಿ-ಕಾಂಗ್ರೆಸ್ ಸಮರ: ಅಭಿವೃದ್ಧಿ ಕಾಮಗಾರಿ ಸ್ಥಗಿತ..!
ಎಲ್ಲೆಡೆ ಆಡಳಿತ ವಿರೋಧಿ ಅಲೆ ಇದೆ. ಇತ್ತೀಚೆಗೆ ದಾವಣೆಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಜನರನ್ನು ನೋಡಿ ಕಮಲಕ್ಕೆ ನಡುಕ ಶುರುವಾಗಿದೆ. ಬಿಜೆಪಿಯ ಭ್ರಷ್ಟಆಡಳಿತದಿಂದ ಜನ ಬೇಸತ್ತು ಹೋಗಿದ್ದಾರೆ. ರಾಜ್ಯ ಸರ್ಕಾರ ಎಲ್ಲ ಕ್ಷೇತ್ರಗಳಲ್ಲಿ ವಿಫಲವಾಗಿದೆ. ಪ್ರತಿಯೊಂದು ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸಿದ್ದರಾಮಯ್ಯ ಸರ್ಕಾರ 10 ಪರ್ಸೆಂಟ್ ಸರ್ಕಾರ ಎಂದು ಪ್ರಧಾನಿ ನರೇಂದ್ರ ಮೋದಿ ಆಧಾರ ರಹಿತವಾಗಿ ಆರೋಪ ಮಾಡಿದ್ದರು. ಆದರೆ, ಇದೀಗ 40 ಪರ್ಸೆಂಟ್ ಸರ್ಕಾರ ಎಂದು ಲಿಖಿತವಾಗಿ ದೂರು ನೀಡಿದರು ಕ್ರಮಕೈಗೊಳ್ಳದೆ ಮೋದಿ ಅವರು ಸುಮ್ಮನೆ ಕುಳಿತಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮಾಜಿ ಸಂಸದ ನರಸಿಂಗರಾವ ಸೂರ್ಯವಂಶಿ, ಮಾಜಿ ಎಂಎಲ್ಸಿ ಕೆ.ಪುಂಡಲೀಕ ರಾವ್, ಎಐಸಿಸಿ ಸದಸ್ಯ ಆನಂದ ದೇವಪ್ಪ, ಪ್ರಮುಖರಾದ ಬಸವರಾಜ ಬುಳ್ಳಾ, ಅಮೃತರಾವ್ ಚಿಮಕೋಡೆ, ಪಂಡಿತರಾವ್ ಚಿದ್ರಿ, ಮುರಳಿಧರರಾವ್ ಎಕಲಾರಕರ್, ಶಂಕರ ದೊಡ್ಡಿ, ಮನ್ನಾನ್ ಸೇಠ್ ಸೇರಿದಂತೆ ಇನ್ನಿತರರು ಇದ್ದರು.