ಸಿದ್ದರಾಮಯ್ಯ 75ನೇ ವರ್ಷಕ್ಕೆ ಪಾದಾರ್ಪಣೆ: ಆ.3ರಂದು ಅದ್ಧೂರಿ ಸಿದ್ದರಾಮೋತ್ಸವ!
* ಸಿದ್ದರಾಮಯ್ಯ 75ನೇ ವರ್ಷ ಪ್ರಯುಕ್ತ ದಾವಣಗೆರೆಯಲ್ಲಿ ಬೃಹತ್ ಕಾರ‍್ಯಕ್ರಮ
* ಆ.3ರಂದು ಅದ್ಧೂರಿ ಸಿದ್ದರಾಮೋತ್ಸವ, 6 ಲಕ್ಷ ಜನ ಸೇರುವ ನಿರೀಕ್ಷೆ
* ರಾಹುಲ್ ಗಾಂಧಿಯಿಂದ ಚಾಲನೆ, ಗಣ್ಯರು ಭಾಗಿ
ಬೆಂಗಳೂರು(ಜು,.06): ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 75ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಆ.3 ರಂದು ದಾವಣಗೆರೆಯಲ್ಲಿ ಆಯೋಜಿಸಲಿರುವ ಬೃಹತ್ ಸಮಾವೇಶಕ್ಕೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷರೂ ಆಗಿರುವ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅಧಿಕೃತವಾಗಿ ಪ್ರಕಟಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಧ್ವನಿಯಾಗಿ ಸಿದ್ದರಾಮಯ್ಯ ಕಾರ್ಯ ನಿರ್ವಹಿಸಿದ್ದು, ನಿಷ್ಕಳಂಕ ರಾಜಕಾರಣಿಯಾಗಿದ್ದಾರೆ. ಅಭಿಮಾನಿಗಳು, ಹೋರಾಟಗಾರರು ಸೇರಿಕೊಂಡು ಈ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಸೇರಿದಂತೆ ರಾಷ್ಟ್ರೀಯ ಮುಖಂಡರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ 5 ರಿಂದ 6 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.
ರಾಷ್ಟ್ರದ ವಿಶೇಷ ವ್ಯಕ್ತಿ:
ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಮಾತನಾಡಿ, ಸಿದ್ದರಾಮಯ್ಯ ಅವರು ರಾಷ್ಟ್ರದ ವಿಶೇಷ ವ್ಯಕ್ತಿಯಾಗಿದ್ದಾರೆ. ನಾಡು ಕಂಡ ಜನಪರ ರಾಜಕಾರಣಿಗಳಾದ ನಿಜಲಿಂಗಪ್ಪ, ದೇವರಾಜ ಅರಸು ಅವರ ಒಡನಾಟ ಹೊಂದಿದ್ದವರು ಸಿದ್ದರಾಮಯ್ಯ. ಜೆಪಿ ಚಳವಳಿ ಮೂಲಕ ಹೋರಾಟ ಆರಂಭಿಸಿದರು. ಹಲವು ಏಳು-ಬೀಳು ನಡುವೆಯೂ ಸಮಗ್ರ ದೃಷ್ಟಿಕೋನ ಇಟ್ಟುಕೊಂಡವರು. ಇದೇ ಕಾರಣಕ್ಕೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಬಣ್ಣಿಸಿದರು.
ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ಕಾರ್ಯಕ್ರಮ ಆಯೋಜಿಸುವುದು ಸಿದ್ದರಾಮಯ್ಯ ಅವರಿಗೆ ಇಷ್ಟವಿರಲಿಲ್ಲ. ಆದರೆ ನಾವೆಲ್ಲಾ ಅಭಿಮಾನಿಗಳು ಒಪ್ಪಿಸಿದ್ದೇವೆ. ಸಿದ್ದರಾಮಯ್ಯ ನಡೆದುಬಂದ ದಾರಿ ಮುಂದಿನ ಪೀಳಿಗೆಗೆ ಮಾದರಿಯಾಗಿದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಿ ಗೊಮದಲ ಸೃಷ್ಟಿಸಬಾರದು ಎಂದು ಹೇಳಿದರು.
ಮಾಜಿ ಸಚಿವರಾದ ಬಿ.ಎಲ್.ಶಂಕರ್, ಎಚ್.ಆಂಜನೇಯ, ಎಚ್.ಸಿ.ಮಹದೇವಪ್ಪ, ಜಯಮಾಲಾ, ಶಾಸಕ ಬೈರತಿ ಸುರೇಶ್ ಹಾಜರಿದ್ದರು.
ವ್ಯಕ್ತಿ ಪೂಜೆಯಲ್ಲ, ಸಾಧನೆಗೆ ಸನ್ಮಾನ: ಆರ್‌ವಿ
ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮ ವ್ಯಕ್ತಿ ಪೂಜೆಯಲ್ಲ, ಸಾಧನೆಗೆ ಸಲ್ಲಿಸುತ್ತಿರುವ ಗೌರವ. ಹೀಗಂತ ಸಮಿತಿ ಗೌರವಾಧ್ಯಕ್ಷ ದೇಶಪಾಂಡೆ ಹೇಳಿದರು. 5 ವರ್ಷ ಉತ್ತಮ ಆಡಳಿತ ನೀಡಿದ ಜನಪ್ರಿಯ ನಾಯಕರಾಗಿದ್ದು, ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ 160 ಕ್ಕೂ ಅಧಿಕ ಭರವಸೆ ಈಡೇರಿಸಿದ್ದಾರೆ. ಆದ್ದರಿಂದ ಎಲ್ಲರ ಸಹಕಾರದಿಂದ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಇದಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದು ದೇಶಪಾಂಡೆ ಸ್ಪಷ್ಟಪಡಿಸಿದರು.