Asianet Suvarna News Asianet Suvarna News

ನಂದೀಶ್‌ ಪ್ರಕರಣ: ಸಿಎಂ ಬೊಮ್ಮಾಯಿ ರಾಜೀನಾಮೆಗೆ ಕಾಂಗ್ರೆಸ್‌ ಆಗ್ರಹ

ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರಗಳಿಗೆ ಒಂದರಿಂದೊಂದು ಸಾಕ್ಷ್ಯಗಳು ಸಿಗುತ್ತಲೇ ಇದ್ದು, ಇದರ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್‌ ಆಗ್ರಹಿಸಿದೆ. 

Congress Slams On CM Basavaraj Bommai Over Inspector Nandish death case gvd
Author
First Published Oct 31, 2022, 2:30 AM IST

ಬೆಂಗಳೂರು (ಅ.31): ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರಗಳಿಗೆ ಒಂದರಿಂದೊಂದು ಸಾಕ್ಷ್ಯಗಳು ಸಿಗುತ್ತಲೇ ಇದ್ದು, ಇದರ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್‌ ಆಗ್ರಹಿಸಿದೆ. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಪ್ರತಿಯೊಂದು ಹುದ್ದೆಯ ನೇಮಕಾತಿ, ವರ್ಗಾವಣೆ, ಬಡ್ತಿ, ಯಾವುದೇ ಕಾಮಗಾರಿಯ ಟೆಂಡರ್‌ನಿಂದ ಬಿಲ್‌ ಮೊತ್ತ ಪಾವತಿವರೆಗೂ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುತ್ತಿದೆ. 

ಈಗ ಪೊಲೀಸ್‌ ಇಲಾಖೆಯ ವರ್ಗಾವಣೆಯಲ್ಲಿ ನಡೆಯುತ್ತಿರುವ ಅಕ್ರಮಕ್ಕೆ ಸ್ವತಃ ಸಚಿವ ಎಂ.ಟಿ.ಬಿ. ನಾಗರಾಜ್‌ ಅವರ ಹೇಳಿಕೆಯೇ ಸಾಕ್ಷಿ. ಅಮಾನತುಗೊಂಡಿದ್ದ ಪೊಲೀಸ್‌ ಸಿಬ್ಬಂದಿ ನಂದೀಶ್‌ ಹೃದಯಾಘಾತದಿಂದ ಸಾವನ್ನಪ್ಪಿದಾಗ ಅಂತಿಮ ದರ್ಶನಕ್ಕೆ ತೆರಳಿದ್ದ ಸಚಿವರು ‘70-80 ಲಕ್ಷ ಕೊಟ್ಟು ಕೆ.ಆರ್‌.ಪುರಂ ಪೊಲೀಸ್‌ ಠಾಣೆಗೆ ವರ್ಗಾವಣೆ ಪಡೆದು ಬಂದರೆ ಹೃದಯಾಘಾತ ಆಗದೆ ಇರುತ್ತದಾ? ಎಂದು ಕೆಲ ಸಿಬ್ಬಂದಿ ಜತೆ ಮಾತನಾಡುವಾಗ ಹೇಳಿದ್ದಾರೆ. ಇದಕ್ಕಿಂತ ಸಾಕ್ಷಿ ಇನ್ನೇನು ಬೇಕು?’ ಎಂದು ಪ್ರಶ್ನಿಸಿದರು.

ಇನ್‌ಸ್ಪೆಕ್ಟರ್‌ ನಂದೀಶ್‌ ಅನಾರೋಗ್ಯದಿಂದ ಸಾವು: ಸಚಿವ ಆರಗ ಜ್ಞಾನೇಂದ್ರ

ಪ್ರತಿ ಭ್ರಷ್ಟಾಚಾರದ ಆರೋಪಕ್ಕೂ ಸಾಕ್ಷ್ಯ ಕೇಳುವ ಮುಖ್ಯಮಂತ್ರಿಗಳೇ ಸಚಿವ ಎಂಟಿಬಿ ನಾಗರಾಜ್‌ ಹೇಳಿಕೆ ಸುಳ್ಳಾ? ಪಿಎಸ್‌ಐ ನೇಮಕಾತಿಯಲ್ಲಿ ಉನ್ನತ ಅಧಿಕಾರಿ ಅಮೃತ್‌ ಪೌಲ್‌ ಜೈಲು ಸೇರಿರೋದು ಯಾಕೆ? ಗುತ್ತಿಗೆದಾರರು ಪ್ರಧಾನಿ ಮೋದಿ ಅವರಿಗೆ ನಿಮ್ಮ ಸರ್ಕಾರದ ವಿರುದ್ಧ ಪತ್ರ ಬರೆದಿದ್ದು ಯಾಕೆ? ಸಚಿವ ಸ್ಥಾನಕ್ಕೆ ಈಶ್ವರಪ್ಪ ಸುಮ್ಮನೆ ರಾಜೀನಾಮೆ ಕೊಟ್ರಾ? ಈಗ ಬಸವರಾಜ್‌ ಅಮರಗೋಳ ಎಂಬ ಗುತ್ತಿಗೆದಾರ ಪರ್ಸೆಂಟೇಟ್‌ ಕೊಡಲಾಗದೆ ದಯಾಮರಣ ಕೋರಿ ರಾಷ್ಟ್ರಪತಿ ಅವರಿಗೆ ಪತ್ರ ಬರೆದಿರೋದು ಯಾಕೆ? ಇದಕ್ಕಿಂತ ಇನ್ನೇನು ಸಾಕ್ಷ್ಯಗಳು ಬೇಕು. ನೈತಿಕ ಹೊಣೆ ಹೊತ್ತು ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅವರು ಹಾಗೂ ಗೃಹ ಸಚಿವ ಸ್ಥಾನಕ್ಕೆ ಆರಗ ಜ್ಞಾನೇಂದ್ರ ಅವರು ರಾಜೀನಾಮೆ ನೀಡಬೇಕು ಎಂದು ಇಬ್ಬರೂ ನಾಯಕರು ಆಗ್ರಹಿಸಿದರು.

ತನಿಖೆಗೆ ಡಿಕೆಶಿ ಆಗ್ರಹ: ಡಿ.ಕೆ.ಶಿವಕುಮಾರ್‌ ಮಾತನಾಡಿ, ಕೆ.ಆರ್‌.ಪುರ ಠಾಣೆ ಇನ್ಸ್‌ಪೆಕ್ಟರ್‌ ನಂದೀಶ್‌ ಅವರು 70-80 ಲಕ್ಷ ಸಾಲ ಮಾಡಿ ಲಂಚ ನೀಡಿದ್ದಾರೆ. ಈ ಹಣ ಮುಖ್ಯಮಂತ್ರಿಗಳಿಗೆ ಹೋಗಿದಿಯಾ? ಗೃಹ ಸಚಿವರಿಗೆ ಹೋಗಿದೆಯಾ? ಅಥವಾ ಸ್ಥಳೀಯ ಶಾಸಕರಿಗೆ ನೀಡಿದ್ದಾರ ಎಂಬುದು ಗೊತ್ತಾಗಬೇಕು ತಾನೆ? ಹಾಗಾಗಿ ಈ ಸಾವಿನ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಸಾಲ ಮಾಡಿ ಲಂಚ ನೀಡಿದ್ದಾರೆ, ಇನ್ನೊಂದು ಕಡೆ ಕೆಲಸದಿಂದ ಅಮಾನತು ಮಾಡಿದ್ದಾರೆ, ಇದರಿಂದ ಹೃದಯಾಘಾತ ಆಗಿದೆ. ಎಂಟಿಬಿ ನಾಗರಾಜ್‌ ಅವರಿಗೆ ನಂದೀಶ ಅವರು ಚೆನ್ನಾಗಿ ಪರಿಚಯವಿರಬೇಕು ಅನ್ನಿಸುತ್ತೆ, ಇಲ್ಲದಿದ್ದರೆ ಅವರೇಕೆ ಅಂತಿಮ ದರ್ಶನಕ್ಕೆ ಹೋಗುತ್ತಿದ್ದರು? ಎಂಟಿಬಿ ನಾಗರಾಜ್‌ ಅವರ ಬಳಿ ತಾನು 70-80 ಲಕ್ಷ ಕೊಟ್ಟು ಕೆ.ಆರ್‌ ಪುರಂ ಠಾಣೆಗೆ ಬಂದಿದ್ದೀನಿ ಎಂದು ಹೇಳಿರಬಹುದು. ಇದನ್ನು ಎಂಟಿಬಿ ಬಾಯಿ ಬಿಟ್ಟಿದ್ದಾರೆ. ಇದು ಪ್ರಬಲವಾದ ಸಾಕ್ಷಿ ಕೂಡ ಹೌದು. ಈ ಎಲ್ಲದರ ಬಗ್ಗೆ ತನಿಖೆಯಾಗಬೇಕು ಎಂದರು.

ಸಿಎಂಗೆ ತಾಕತ್ತಿದ್ದರೆ ಇನ್‌ಸ್ಪೆಕ್ಟರ್‌ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲಿ: ರಾಮಲಿಂಗಾರೆಡ್ಡಿ

‘ದಯಾಮರಣಕ್ಕೆ ಪತ್ರ, ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿ’: ಬಸವರಾಜ್‌ ಅಮರಗೋಳ ಎಂಬ ಗುತ್ತಿಗೆದಾರ ಪರ್ಸೆಂಟೇಟ್‌ ಕೊಡಲಾಗದೆ ದಯಾಮರಣ ರಾಷ್ಟ್ರಪತಿಗಳಿಗೆ ಪತ್ರ ಬರೆದಿರುವುದು ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿ ಎಂದು ಸಿದ್ದರಾಮಯ್ಯ ಹೇಳಿದರು. ಕೊರೊನಾ ಮೊದಲ ಅಲೆ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಸೇರಿದಂತೆ ಹಲವು ಕಡೆ ಅಮರಗೋಳ ಉಪಕರಣಗಳನ್ನು ನೀಡಿದ್ದಾರೆ. ಇದರಲ್ಲಿ ಶೇ.20ರಷ್ಟುಬಿಲ್‌ ಅನ್ನು ನೀಡಿದ್ದಾರೆ. ಈ ಬಗ್ಗೆ ಅವರು ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ, ಎರಡು ಬಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ, ಇಲಾಖಾ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ಯಾವ ಉಪಯೋಗವೂ ಆಗಿಲ್ಲ. ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು 30ರಿಂದ 40 ಪರ್ಸೆಂಟ್‌ ಲಂಚ ಇದ್ದರೆ ಮಾತ್ರ ಬಿಲ್‌ ಕೊಡಲು ಸಾಧ್ಯ ಎಂದು ಹೇಳಿದ್ದಾರೆ. ಇಂಥವರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತ ಪರಿಸ್ಥಿತಿಗೆ ಸರ್ಕಾರ ತಂದಿದೆ. ನಂತರ ಮುಖ್ಯಮಂತ್ರಿಗಳೇ ಕರೆ ಮಾಡಿ ಈ ದೂರಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳಬೇಡಿ ಎಂದು ಪೊಲೀಸರಿಗೆ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

Follow Us:
Download App:
  • android
  • ios