* ಮಂಗಳೂರಿನ ಲೇಡಿಹಿಲ್ ವೃತ್ತದ ಹೆಸರು ಕೊನೆಗೂ ಅಧಿಕೃತವಾಗಿ ಬದಲಾಗಿದೆ* ಮಂಗಳೂರಿನ ವೃತ್ತಕ್ಕೆ ನಾರಾಯಣ ಗುರು ಹೆಸರು* ವಿರೋಧಿಸಿದ್ದ ಕಾಂಗ್ರೆಸ್ ಮೌನ!

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು, (ಏ.14):
ಹೆಸರಿನ ವಿಚಾರದಲ್ಲಿ ಭಾರೀ ವಿವಾದ ಸೃಷ್ಟಿಸಿದ್ದ ಮಂಗಳೂರಿನ ಲೇಡಿಹಿಲ್ ವೃತ್ತದ ಹೆಸರು ಕೊನೆಗೂ ಅಧಿಕೃತವಾಗಿ ಬದಲಾಗಿದೆ. ರಾಜ್ಯ ಸರ್ಕಾರದ ಅಧಿಕೃತ ಆದೇಶದ ಮೂಲಕ ಲೇಡಿಹಿಲ್ ವೃತ್ತದ ಹೆಸರನ್ನು ಇಂದು ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ಬದಲಿಸಲಾಗಿದ್ದು, ಮಂಗಳೂರು ಮಹಾನಗರ ಪಾಲಿಕೆ ಮೂಲಕ ನೂತನ ವೃತ್ತದ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದಿದೆ.

ದ.ಕ‌ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ನಿರ್ಮಾಣಕ್ಕೆ ಶಿಲನ್ಯಾಸ ನೆರವೇರಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಸೇರಿ ಬಿಜೆಪಿ ಪ್ರಮುಖರು ಹಾಗೂ ಬಿಲ್ಲವ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಹಾಜರಿದ್ದರು.‌ ತಿಂಗಳ ಹಿಂದೆ ಲೇಡಿಹಿಲ್ ವೃತ್ತಕ್ಕೆ ನಾರಾಯಣ ಗುರು ಹೆಸರು ಮರು ನಾಮಕರಣ ವಿವಾದ ಕರಾವಳಿಯಲ್ಲಿ ಭಾರೀ ಸದ್ದು ಮಾಡಿತ್ತು. ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಭಾರೀ ಗುದ್ದಾಟಕ್ಕೂ ಈ ವೃತ್ತದ ಮರುನಾಮಕರಣ ವಿವಾದ ಕಾರಣವಾಗಿತ್ತು. ಇದೀಗ ಕೊನೆಗೂ ರಾಜ್ಯ ಸರ್ಕಾರವೇ ಹೆಸರು ಬದಲಾವಣೆಗೆ ಒಪ್ಪಿಗೆ ಸೂಚಿಸಿ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಇಂದು ಹೆಸರು ಬದಲಿಸಿ ಶಿಲನ್ಯಾಸ ನೆರವೇರಿಸಲಾಗಿದೆ.

Interview: ಮೋದಿ ನಾರಾಯಣ ಗುರುಗಳ ಅಭಿಮಾನಿ, ಅವಮಾನ ಮಾಡಿದವರು ಕಮ್ಯುನಿಸ್ಟರು: ಶಿವಗಿರಿ ಸ್ವಾಮೀಜಿ

ಲೇಡಿಹಿಲ್ ಹೆಸರು ಬದಲಾವಣೆ ವಿರೋಧಿಸಿದ್ದ ಕ್ರೈಸ್ತ ಸಂಘಟನೆಗಳು!
ಲೇಡಿಹಿಲ್ ಸರ್ಕಲ್‌ಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು ಇಡಬೇಕೆಂಬ ಒತ್ತಾಯ ಕೆಲ ತಿಂಗಳ ಹಿಂದೆ ಜೋರಾಗಿತ್ತು. ಮಂಗಳೂರಿನ ಲೈಟ್‌‌ಹೌಸ್ ಹಿಲ್ ರಸ್ತೆಗೆ ಮುಲ್ಕಿ ಸುಂದರಾಮ್ ಶೆಟ್ಟಿ ಹೆಸರು ನಾಮಕರಣಗೊಂಡ ಬೆನ್ನಲ್ಲೇ ಲೇಡಿಹಿಲ್ ಸರ್ಕಲ್‌ಗೆ ನಾರಾಯಣ ಗುರುಗಳ ಹೆಸರು ಇಡಬೇಕೆಂದು ಹಿಂದೂಪರ ಸಂಘಟನೆಗಳು ಆಗ್ರಹಿಸಿದ್ದವು. ಅಲ್ಲದೇ ಈ ಬಗ್ಗೆ ಬಿರುವೆರ್ ಕುಡ್ಲ ಸಂಘಟನೆ ಮಂಗಳೂರು ದಕ್ಷಿಣಶಾಸಕ ವೇದವ್ಯಾಸ್ ಕಾಮತ್ ಅವರಿಗೂ ಮನವಿಯನ್ನು ಸಲ್ಲಿಸಿತ್ತು. ಆದ್ರೆ ಈ ಹೆಸರು ಬದಲಾವಣೆಯ ಒತ್ತಾಯಕ್ಕೆ ಕೆಥೋಲಿಕ್ ಸಭಾ ವಿರೋಧ ವ್ಯಕ್ತಪಡಿಸಿತ್ತು. 

ಕಾರಣ ಲೇಡಿಹಿಲ್ ವೃತ್ತಕ್ಕೆ ಚಾರಿತ್ರಿಕ ಮಹತ್ವವಿದೆ. ದಿ|ಅಪೋಸ್ತಲಿಕ್ ಕಾರ್ಮೆಲ್ ಸಿಸ್ಟರ್ಸ್ ಪ್ರಾನ್ಸ್ ನಿಂದ ಮಂಗಳೂರಿಗೆ 1885 ರಲ್ಲಿ ಅಂದಿನ ಮದರ್ ಜನರಲ್ ಮಾರಿ ದೇನ್ ಆಂಜ್ ಮಂಗಳೂರಿಗೆ ಬಂದಾಗ ಲೇಡಿಹಿಲ್ ಪ್ರದೇಶದಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯಾಬ್ಯಾಸ ಮಾಡಲು ವಿದ್ಯಾಸಂಸ್ಥೆ ತೆರೆಯಬೇಕೆಂದು ಸ್ಥಳೀಯ ಸಾರ್ವಜನಿಕರು ಒತ್ತಾಯಪಡಿಸಿದ ಸಂದರ್ಭದಲ್ಲಿ ಗುಡ್ಡ ಪ್ರದೇಶವಾಗಿದ್ದ ಸ್ಥಳದಲ್ಲಿ ಸಾರ್ವಜನಿಕರ ಒತ್ತಾಯದ ಮೇರೆಗೆ ಸದರಿ ಪ್ರದೇಶದಲ್ಲಿ ಹೆಣ್ಣು ಮಕ್ಕಳಿಗಾಗಿ ಶಾಲೆಯನ್ನು ತೆರೆಯಲಾಯಿತು. ಅದರ ಗೌರವಾರ್ಥವಾಗಿ ಸದರಿ ಸ್ಥಳಕ್ಕೆ ಲೇಡಿಹಿಲ್ ಎಂಬ ಹೆಸರು ಬಂದಿರುವುದು. ಈ ಹೆಸರನ್ನು ನೂರಾರು ವರ್ಷಗಳಿಂದ ಕರೆಯುತ್ತಿದ್ದಾರೆ. ಹೆಣ್ಣು ಮಕ್ಕಳ ವಿಧ್ಯಾಭ್ಯಾಸದ ಪ್ರತೀಕವಾದ, ಸಾಕ್ಷರತೆಯ ಕೇಂದ್ರ ಬಿಂದುವಾದ ಈ ಹೆಸರನ್ನು ಬದಲಾಯಿಸುವುದು ಅವರ ಗೌರವಕ್ಕೆ ಕೊಡುವ ಅಪಚಾರವಾಗಿದೆ. ಹೆಸರು ಬದಲಾವಣೆಯ ವಿಚಾರಕ್ಕೆ ನಮ್ಮ ಸಂಪೂರ್ಣ ವಿರೋಧ ಮತ್ತು ಆಕ್ಷೇಪವಿದೆ ಎಂದಿತ್ತು. ಆದ್ರೆ ಈ ನಡೆ ಹಿಂದೂ ಸಂಘಟನೆಗಳನ್ನ ಕೆರಳಿಸಿದ್ದು, ನಾರಾಯಣ ಗುರುಗಳ ಹೆಸರೇ ಇಡಬೇಕು ಅಂತ ಪಟ್ಟು ಹಿಡಿದಿದ್ದವು.‌

ನಾರಾಯಣ ಗುರು ಹೆಸರಿಡಲು ಆಕ್ಷೇಪ ಸಲ್ಲಿಸಿದ್ದ ಕಾಂಗ್ರೆಸ್!
ಈ ನಡುವೆ ಹಿಂದೂಸಂಘಟನೆ ಕಾರ್ಯಕರ್ತರು ನಾರಾಯಣ ಗುರುಗಳ ಹೆಸರಿನ ಫಲಕ ಹಾಕಿ ಜೈ ಅಂದಿದ್ದರು. ಇನ್ನು ಕೆಲ ಖಾಸಗಿ ಬಸ್ಸುಗಳಲ್ಲೂ ನಾರಾಯಣ ಗುರು ವೃತ್ತ ಅಂತ ಹೆಸರು ಹಾಕಲಾಗಿತ್ತು. ಇದಾದ ಬೆನ್ನಲ್ಲೇ ಈ ವಿವಾದ ಪಾಲಿಕೆ ಅಂಗಳಕ್ಕೆ ಬಂದಿದ್ದು, ನಾರಾಯಣ ಗುರು ಹೆಸರಿಡಲು ಅನೇಕ ಸದಸ್ಯರು ಕೂಡ ಧ್ವನಿ ಎತ್ತಿದ್ದರು. ಆದರೆ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಲಿಖಿತ ಆಕ್ಷೇಪ ಸಲ್ಲಿಸಿದ ಕಾರಣ ಈ ವಿವಾದ ಮತ್ತಷ್ಟು ಜಟಿಲವಾಗಿತ್ತು. ಹೀಗಾಗಿ ಈ ವಿಚಾರ ನೇರ ರಾಜ್ಯ ಸರ್ಕಾರದ ಅಂಗಳಕ್ಕೆ ತಲುಪಿದೆ. ಈ ನಡುವೆ ಕರಾವಳಿಯ ಬಹುಸಂಖ್ಯಾತ ಬಿಲ್ಲವ ಸಮುದಾಯದ ಲೆಕ್ಕಾಚಾರ ಅರಿತ ಜಿಲ್ಲೆಯ ಬಿಜೆಪಿ ನಾಯಕರ ‌ಮುಖೇನ ಕೊನೆಗೂ ಅಧಿಕೃತವಾಗಿ ಲೇಡಿಹಿಲ್ ಸರ್ಕಲ್ ಗೆ ನಾರಾಯಣ ಗುರು ವೃತ್ತ ಹೆಸರಿಡಲು ಸರ್ಕಾರ ಒಪ್ಪಿಗೆ ನೀಡಿ ಆದೇಶ ಹೊರಡಿಸಿದೆ. 

ಕೇರಳ ಟ್ಯಾಬ್ಲೋ ವಿವಾದ: ತಣ್ಣಗಾದ ಕಾಂಗ್ರೆಸ್!
ಲೇಡಿಹಿಲ್ ವೃತ್ತದ ಹೆಸರು ಬದಲಾವಣೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದರೂ ಸದ್ಯ ಮಾತ್ರ ಕಾಂಗ್ರೆಸ್ ಮೌನಕ್ಕೆ ಶರಣಾಗಿದೆ‌. ಈ ವಿವಾದದ ಬಳಿಕ ಕೇರಳದ ನಾರಾಯಣ ಗುರು ಟ್ಯಾಬ್ಲೋ ವಿವಾದ ದೇಶದಲ್ಲಿ ಭಾರೀ ಸುದ್ದಿ ಮಾಡಿತ್ತು. ಈ ವಿಚಾರದಲ್ಲಿ ನಾರಾಯಣ ಗುರುಗಳಿಗೆ ಕೇಂದ್ರದ ಬಿಜೆಪಿ ಸರ್ಕಾರದ ಅವಮಾನ ಮಾಡಿದೆ ಅಂತ ಮಂಗಳೂರಿನಲ್ಲೂ ಕಾಂಗ್ರೆಸ್ ಪಾದಯಾತ್ರೆ ಮೂಲಕ ಹೋರಾಟ ಮಾಡಿತ್ತು. ಈ ಮೂಲಕ ನಾರಾಯಣ ಗುರುಗಳ ಪರ ಕಾಂಗ್ರೆಸ್ ನಿಂತಿತ್ತು. ಹೀಗಾಗಿ ಇದನ್ನೇ ಬಳಸಿಕೊಂಡ ಜಿಲ್ಲೆಯ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ಮೂಲಕ ಆದೇಶ ಮಾಡಿಸಿ ಲೇಡಿಹಿಲ್ ಹೆಸರು ಬದಲಿಸಿದ್ದಾರೆ. ಆದ್ರೆ ಕೇರಳದ ವಿಚಾರದಲ್ಲಿ ನಾರಾಯಣ ಗುರುಗಳ ಪರ ಹೋರಾಟ ಮಾಡಿದ್ದ ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ವೃತ್ತಕ್ಕೆ ನಾರಾಯಣ ಗುರುಗಳ ಹೆಸರಿಡೋದಕ್ಕೆ ಸದ್ಯ ವಿರೋಧ ವ್ಯಕ್ತಪಡಿಸೋದಕ್ಕೆ ಆಗ್ತಿಲ್ಲ. ಹೀಗಾಗಿ ಬಹುಸಂಖ್ಯಾತ ಬಿಲ್ಲವ ಓಟ್ ಬ್ಯಾಂಕ್ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಮೌನಕ್ಕೆ ಶರಣಾದಂತೆ ಕಾಣುತ್ತಿದೆ. ಅತ್ತ ಬಿಜೆಪಿ ಕೂಡ ನಾರಾಯಣ ಗುರು ಸರ್ಕಲ್ ಮೂಲಕ ಬಿಲ್ಲವ ಓಟ್ ಬ್ಯಾಂಕ್ ಗಟ್ಟಿ ಮಾಡಿದಂತೆ ಕಾಣುತ್ತಿದೆ.