Asianet Suvarna News Asianet Suvarna News

'ಮುಂದಿನ 6 ತಿಂಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವ ಭವಿಷ್ಯ'

ಮುಂದಿನ 6 ತಿಂಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರುವ ಬಗ್ಗೆ ಭವಿಷ್ಯ ನುಡಿಯಲಾಗಿದೆ. ಬಿ ಎಸ್ ಯಡಿಯೂರಪ್ಪ ಸರ್ಕಾರ ಪತನವಾಗುವ ಬಗ್ಗೆ ಮಾತನಾಡಲಾಗಿದೆ 

Congress Should win in local body election Says Surjewala snr
Author
Bengaluru, First Published Dec 7, 2020, 9:17 AM IST

ಬೆಂಗಳೂರು (ಡಿ.07):  ಗ್ರಾಮ ಪಂಚಾಯ್ತಿ ಚುನಾವಣೆ ಹಾಗೂ ಮುಂದಿನ 90 ದಿನಗಳಲ್ಲಿ ನಡೆಯಲಿರುವ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದರೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ತಾನಾಗಿಯೇ ಪತನವಾಗಲಿದೆ. ಮುಂದಿನ ಆರು ತಿಂಗಳಲ್ಲಿ ಕಾಂಗ್ರೆಸ್‌ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ಹೀಗಾಗಿ ಶತಾಯಗತಾಯ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ ಕರೆ ನೀಡಿದ್ದಾರೆ.

ಗ್ರಾಮ ಪಂಚಾಯ್ತಿ ಚುನಾವಣೆಗಳ ದಿನಾಂಕ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ಕಾಂಗ್ರೆಸ್‌ ಮುಖಂಡರೊಂದಿಗೆ ಸಭೆಯಲ್ಲಿ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯಲ್ಲಿ ರಾಜ್ಯ ಸರ್ಕಾರ ಹಾಗೂ ಬಿಜೆಪಿ ಹೈಕಮಾಂಡ್‌ ನಡುವೆ ತಿಕ್ಕಾಟ ಏರ್ಪಟ್ಟಿದೆ. ನಾಯಕತ್ವ ಬದಲಾವಣೆಗೆ ಬಿಜೆಪಿ ಹೈಕಮಾಂಡ್‌ ಕಾಯುತ್ತಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಸೋತರೆ ಭಿನ್ನಮತ ಸ್ಫೋಟಗೊಂಡು ಸರ್ಕಾರ ತಾನಾಗಿಯೇ ಪತನಗೊಳ್ಳಲಿದೆ. ಇದಕ್ಕೆ ಗ್ರಾಮ ಪಂಚಾಯ್ತಿ ಚುನಾವಣೆ ಮೊದಲ ಹೆಜ್ಜೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಜನಬೆಂಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದು ಕಡಿಮೆ ಅವಧಿಯಲ್ಲಿ ಹೆಚ್ಚು ಲೂಟಿ ಹೊಡೆಯಲು ನಿಂತಿದೆ. ಯಡಿಯೂರಪ್ಪ ಸರ್ಕಾರದ ಬಗ್ಗೆ ಬಿಜೆಪಿ ಹೈಕಮಾಂಡ್‌ಗೂ ಅಸಮಾಧಾನ ಶುರುವಾಗಿದೆ. ಮುಂದಿನ 90 ದಿನಗಳಲ್ಲಿ ಗ್ರಾಮ ಪಂಚಾಯ್ತಿ ಸೇರಿದಂತೆ ತಾಲೂಕು, ಜಿಲ್ಲಾ ಪಂಚಾಯ್ತಿ, ಬಿಬಿಎಂಪಿ ಚುನಾವಣೆಗಳು ನಡೆಯಲಿವೆ. ಇವುಗಳಲ್ಲಿ ಕಾಂಗ್ರೆಸ್‌ ಜಯಗಳಿಸಿದರೆ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡು ಸರ್ಕಾರ ತಾನಾಗಿಯೇ ಪತನಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೋರ್ ಕಮಿಟಿ ಸಭೆಯಲ್ಲಿ ಸಿಎಂಗೆ ಹಲವು ಖಡಕ್ ಸೂಚನೆ ಕೊಟ್ಟ ಉಸ್ತುವಾರಿ..! ..

ಬಳಿಕ ಕಾಂಗ್ರೆಸ್‌ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ಇದಕ್ಕೆ ಗ್ರಾಮ ಪಂಚಾಯ್ತಿಯ ಗೆಲುವು ಮೊದಲ ಹೆಜ್ಜೆಯಾಗಬೇಕು. ಇದರ ಎಲ್ಲಾ ಜವಾಬ್ದಾರಿ ನಿಮ್ಮ ಭುಜಗಳ ಮೇಲಿದೆ. ಪಕ್ಷ ತಾನಾಗಿಯೇ ಅಧಿಕಾರಕ್ಕೆ ಬರಬೇಕಾದರೆ ಅದು ನಿಮ್ಮೆಲ್ಲ ತ್ಯಾಗ ಹಾಗೂ ಪರಿಶ್ರಮ ಮುಖ್ಯ. ಪಕ್ಷ ಅಧಿಕಾರಕ್ಕೆ ತರಲು ನಾವು ನಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಪಕ್ಕಕ್ಕಿಟ್ಟು, ಕೇವಲ ಕಾಂಗ್ರೆಸ್‌ ಪಕ್ಷದ ಹಿತದ ಬಗ್ಗೆ ಗಮನ ಹರಿಸಬೇಕು. ಇದು ಸಾಧ್ಯವಾದರೆ ಆರು ತಿಂಗಳಲ್ಲೇ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದು, ನಮ್ಮ ಕಾರ್ಯಕರ್ತರಿಗೆ ಶಕ್ತಿ ತುಂಬಲು ಸಾಧ್ಯ ಎಂದು ಕರೆ ನೀಡಿದರು.

ಕೆಲಸ ಮಾಡದಿದ್ದರೆ ಅಧಿಕಾರವಿಲ್ಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ಚುನಾವಣೆಗಳ ಜವಾಬ್ದಾರಿ ಕೇವಲ ನಾನು ಅಥವಾ ವಿರೋಧ ಪಕ್ಷದ ನಾಯಕರು ಮಾತ್ರ ತೆಗೆದುಕೊಳ್ಳಲು ಆಗುವುದಿಲ್ಲ. ನೀವೆಲ್ಲರೂ ಈ ಜವಾಬ್ದಾರಿ ಪಡೆಯಬೇಕು. ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಎಲ್ಲರೂ ಕೆಲಸ ಮಾಡಬೇಕು. ನೀವು ಕೆಲಸ ಮಾಡದಿದ್ದರೆ ನಿಮಗೆ ನೀಡಿರುವ ಜವಾಬ್ದಾರಿಗಳಲ್ಲಿ ಮುಂದುವರೆಸಲು ಆಗುವುದಿಲ್ಲ ಎಂದು ಎಚ್ಚರಿಕೆ ಸಂದೇಶ ನೀಡಿದರು.

ಮೂರು ವರ್ಷದ ಮೇಲೆ ಎಲ್ಲರನ್ನು ಬದಲಾಯಿಸಿ ಎಂದು ಎಐಸಿಸಿಯಿಂದ ನಿರ್ದೇಶನ ಬಂದಿದೆ. ಹೀಗಾಗಿ ಮುಂಚೂಣಿ ಘಟಕಗಳು ಪಂಚಾಯ್ತಿ ಮಟ್ಟದಲ್ಲಿ ಇರಬೇಕು. ಬೇರೆ ಪಕ್ಷಗಳಲ್ಲಿ ಸಾಮಾಜಿಕ ಜಾಲತಾಣಗಳ ನಿರ್ವಹಣೆಗೆ ಪಡೆಯೇ ಇದೆ. ಅದೇ ರೀತಿ ನಾವು ಪಡೆ ಕಟ್ಟಲು ಮುಂದಾಗಿದ್ದೇವೆ. ನೀವೆಲ್ಲರೂ ಸಕ್ರಿಯರಾಗಬೇಕು. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಈ ಚುನಾವಣೆಯನ್ನು ಗೆಲ್ಲಲೇಬೇಕು ಎಂದು ಹೇಳಿದರು.

Follow Us:
Download App:
  • android
  • ios