ಚಿತ್ರದುರ್ಗದಲ್ಲಿ ಎಸ್ಸಿ, ಎಸ್ಟಿ ಬೃಹತ್‌ ಸಮಾವೇಶ, ಬಿಜೆಪಿ ಸಂವಿಧಾನ ಬದಲಿಸುತ್ತೆ: ಎಲೆಕ್ಷನ್‌ ಕಹಳೆ, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ‘ಐಕ್ಯತಾ ಸಮಾವೇಶ’. ರಾಜ್ಯದ ವಿವಿಧೆಡೆಯಿಂದ 2 ಲಕ್ಷಕ್ಕೂ ಹೆಚ್ಚು ಜನರು ಭಾಗಿ. 

ಚಿತ್ರದುರ್ಗ(ಜ.09): ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ದಲಿತ ಮತಬೇಟೆಗೆ ಮುಂದಾಗಿರುವ ಕಾಂಗ್ರೆಸ್‌, ಕೋಟೆನಾಡು ಚಿತ್ರದುರ್ಗದಲ್ಲಿ ಭಾನುವಾರ ‘ಐಕ್ಯತಾ ಸಮಾವೇಶ’ದ ಹೆಸರಲ್ಲಿ ಬೃಹತ್‌ ಎಸ್ಸಿ, ಎಸ್ಟಿಸಮಾವೇಶ ಆಯೋಜಿಸುವ ಮೂಲಕ ಬಿಜೆಪಿ ವಿರುದ್ಧದ ಹೋರಾಟಕ್ಕೆ ರಣಕಹಳೆ ಮೊಳಗಿಸಿತು. ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕರು ಬಿಜೆಪಿ ಹಾಗೂ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಆಡಳಿತಾರೂಢ ಬಿಜೆಪಿಗೆ ಸ್ಪಷ್ಟಸಂದೇಶ ರವಾನಿಸಿದರು. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಎರಡು ಲಕ್ಷಕ್ಕೂ ಅಧಿಕ ಸಂಖ್ಯೆಯ ಜನರ ಮುಂದೆ ‘ಬಿಜೆಪಿ ಸಂವಿಧಾನ ಬದಲಾಯಿಸುತ್ತದೆ, ಎಚ್ಚೆತ್ತುಕೊಳ್ಳದಿದ್ದರೆ ಪರಿಶಿಷ್ಟರು ಭವಿಷ್ಯದಲ್ಲಿ ಸಂಕಷ್ಟದ ಹಾದಿ ತುಳಿಯಬೇಕಾಗುತ್ತದೆ’ ಎಂದು ಬಿಂಬಿಸುವ ಯತ್ನ ನಡೆಸಿದರು.

‘ಪರಿಶಿಷ್ಟರ ನಡುವೆ ಬಿಜೆಪಿ ಒಡಕು ಮೂಡಿಸುವ ಯತ್ನ ಮಾಡುತ್ತಿದೆ. ಅಲ್ಪಸಂಖ್ಯಾತರ ಮೇಲೆ ಇತರರನ್ನು ಎತ್ತಿ ಕಟ್ಟುತ್ತಿದೆ’ ಎಂಬ ಅಜೆಂಡಾವನ್ನೇ ಮುಂದಿಟ್ಟುಕೊಂಡು ಕೈ ನಾಯಕರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಡಾ.ಪರಮೇಶ್ವರ್‌ ಸೇರಿದಂತೆ ಪ್ರಮುಖ ನಾಯಕರ ಮಾತುಗಳು ಸಂವಿಧಾನ ಬದಲಾವಣೆ ವಿಷಯದ ಕಡೆ ಕೇಂದ್ರೀಕೃತಗೊಂಡಿದ್ದವು.

Karnataka Assembly election: ಕಾಂಗ್ರೆಸ್‌ನಿಂದ ಪ್ರತ್ಯೇಕ ಮಹಿಳಾ ಪ್ರಣಾಳಿಕೆ ಸಿದ್ಧ: ಡಿ.ಕೆ. ಶಿವಕುಮಾರ್

ಸಮಾವೇಶಕ್ಕೆ ಖರ್ಗೆ ಚಾಲನೆ:

ಬೆಳಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ಐಕ್ಯತಾ ಸಮಾವೇಶ, ಸುಮಾರು ಎರಡೂವರೆ ಗಂಟೆ ತಡವಾಗಿ ಆರಂಭವಾಯಿತು. ಮಧ್ಯಾಹ್ನ 1.45ಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ದೀಪ ಬೆಳಗಿ, ಡೊಳ್ಳು ಬಾರಿಸುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು. ಈ ವೇಳೆ, ಎಡ ಮತ್ತು ಬಲ ಸಮುದಾಯದ ಸಾಂಸ್ಕೃತಿಕ ಪರಿಕರಗಳಾದ ತಮಟೆ ಮತ್ತು ಕಹಳೆ ಶಬ್ದಗಳು ಮೊಳಗಿದವು.

ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಎಸ್ಸಿ, ಎಸ್ಟಿಸಮುದಾಯವನ್ನು ಛಿದ್ರ, ಛಿದ್ರ ಮಾಡಲಾಗುತ್ತಿದೆ. ನಿಮ್ಮಲ್ಲಿನ ಶಕ್ತಿ ಹಾಗೂ ಒಗ್ಗಟ್ಟು ಮುರಿಯಲು ಪ್ರಧಾನಿ ಮೋದಿ ಮುಂದಾಗಿದ್ದಾರೆ. ಸಂವಿಧಾನ ಸಂಕಷ್ಟದಲ್ಲಿದೆ. ಸಂವಿಧಾನ ಉಳಿದರೆ ಪ್ರಜಾತಂತ್ರ, ಮೀಸಲಾತಿ ಎಲ್ಲವೂ ಇರುತ್ತದೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದರು.

ಸಿದ್ದರಾಮಯ್ಯ ಮಾತನಾಡಿ, ಹಿಂದೆ ಜಾತಿವಾರು ಸಮಾವೇಶಗಳನ್ನು ಮಾಡಿ ಶಕ್ತಿ ಪ್ರದರ್ಶನ ಮಾಡಲಾಗುತ್ತಿತ್ತು. ಇದೀಗ ಎಲ್ಲ ಶೋಷಿತ ಸಮುದಾಯಗಳನ್ನು ಒಟ್ಟಾಗಿ ಸೇರಿಸಿ ಐಕ್ಯತಾ ಸಮಾವೇಶ ಸಂಘಟಿಸಲಾಗಿದೆ. ಸಂವಿಧಾನಕ್ಕೆ ಎದುರಾಗಿರುವ ಸಂಕಷ್ಟನಿವಾರಣೆಗೆ ಜನತೆ ಒಗ್ಗೂಡಿ ಹೋರಾಡುವ ಅಗತ್ಯವಿದೆ. ನಾಗಮೋಹನ ದಾಸ ವರದಿ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಜನವರಿ 30ರೊಳಗಾಗಿ ಸಂವಿಧಾನದ 9ನೇ ಷೆಡ್ಯೂಲ್‌ಗೆ ಸೇರ್ಪಡೆ ಮಾಡದಿದ್ದರೆ ರಾಜ್ಯವ್ಯಾಪಿ ಹೋರಾಟ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

CONGRESS SC ST CONVENTION: ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವ, ಬದ್ಧತೆ ಇಲ್ಲ: ಸಿದ್ದರಾಮಯ್ಯ

ಡಿ.ಕೆ.ಶಿವಕುಮಾರ್‌ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆಯವರ ಮುಖಂಡತ್ವದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡಿ. ರಾಜ್ಯ ಹಾಗೂ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ದನಿಗೂಡಿಸಿ ಎಂದು ಕರೆ ನೀಡಿದರು.

ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಜಿ.ಪರಮೇಶ್ವರ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಅಡಕವಾಗಬಹುದಾದ ದಶ ಘೋಷಣೆಗಳ ಪ್ರಸ್ತಾಪ ಮಾಡಿದರು. ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ, ಎಸ್ಸಿ, ಎಸ್ಟಿಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ. ಸಂವಿಧಾನ ರಕ್ಷಣೆ ಮಾಡುವ ಕೆಲಸ ನಡೆಯುತ್ತಿಲ್ಲ. ಸಂವಿಧಾನ ಮುಟ್ಟಿದರೆ ದೇಶಾದ್ಯಂತ ಆಂದೋಲವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಐಸಿಸಿ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೆವಾಲ, ಬಿ.ಕೆ.ಹರಿಪ್ರಸಾದ್‌ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖ ನಾಯಕರು ಸಮಾವೇಶದಲ್ಲಿ ಮಾತನಾಡಿದರು.