Asianet Suvarna News Asianet Suvarna News

ಸರ್ಕಾರದ ಜನೋತ್ಸವಕ್ಕೆ ಕಾಂಗ್ರೆಸ್‌ ಸಡ್ಡು

ಜನಜಾಗೃತಿ ಅಭಿಯಾನಕ್ಕೆ ನಿರ್ಧಾರ, 40% ಕಮಿಷನ್‌ ಬಗ್ಗೆ ಅಧಿವೇಶನದಲ್ಲೂ ಪ್ರಸ್ತಾಪ: ಸಿಎಲ್‌ಪಿ ತೀರ್ಮಾನ

Congress Public Awareness Campaign Against BJP Governments Janotsva in  Karnataka grg
Author
Bengaluru, First Published Aug 29, 2022, 5:42 AM IST

ಬೆಂಗಳೂರು(ಆ.29):  ರಾಜ್ಯ ಸರ್ಕಾರದ ‘ಜನೋತ್ಸವ’ ಕಾರ್ಯಕ್ರಮಕ್ಕೆ ಪ್ರತಿಯಾಗಿ ಸರ್ಕಾರದ ಜನ ವಿರೋಧಿ ಕ್ರಮಗಳ ವಿರುದ್ಧ ‘ಜನ ಜಾಗೃತಿ ಅಭಿಯಾನ’ ರೂಪಿಸಲು ಹಾಗೂ ಮುಂದಿನ ಅಧಿವೇಶನದಲ್ಲಿ ‘40 ಪರ್ಸೆಂಟ್‌ ಭ್ರಷ್ಟಾಚಾರ’ದ ವಿರುದ್ಧ ಧ್ವನಿ ಎತ್ತುವ ಮೂಲಕ ಸರ್ಕಾರದ ವಿರುದ್ಧ ಮುಗಿಬೀಳಲು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌, ರಾಜ್ಯಸಭೆ ಸದಸ್ಯ ಜೈರಾಮ್‌ ರಮೇಶ್‌ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಿ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

‘ಉತ್ತರ ಕೊಡಿ ಸರ್ಕಾರ’:

ಭ್ರಷ್ಟಾಚಾರ ತಾಂಡವವಾಡುತ್ತಿದ್ದರೂ ಬಸವರಾಜ ಬೊಮ್ಮಾಯಿ ಸರ್ಕಾರ ಒಂದು ವರ್ಷ ಪೂರೈಸಿರುವುದಕ್ಕೆ ‘ಜನೋತ್ಸವ’ ನಡೆಸಲು ಹೊರಟಿರುವುದಕ್ಕೆ ಪ್ರತಿಯಾಗಿ ‘ಜನ ಜಾಗೃತಿ ಅಭಿಯಾನ’ ನಡೆಸುವ ಕುರಿತು ಪ್ರಮುಖವಾಗಿ ಚರ್ಚಿಸಲಾಯಿತು. ಅಭಿಯಾನದಲ್ಲಿ ಸರ್ಕಾರದ ವೈಫಲ್ಯ, ಅಕ್ರಮಗಳ ಕುರಿತು ‘ಉತ್ತರ ಕೊಡಿ ಸರ್ಕಾರ’ ಹೆಸರಿನಲ್ಲಿ ಸರಣಿ ಪ್ರಶ್ನೆ ಮಾಡಬೇಕು. ಈ ಬಗ್ಗೆ ಸೋಮವಾರ ಬೆಳಗ್ಗೆ ಸುರ್ಜೆವಾಲಾ ನೇತೃತ್ವದಲ್ಲೇ ಸುದ್ದಿಗೋಷ್ಠಿ ನಡೆಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲು ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.

ಜನೋತ್ಸವದಲ್ಲಿ ಸರ್ಕಾರದ ಯೋಜನೆಗಳ ಅನಾವರಣ: ಸದಾನಂದಗೌಡ

ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಕೇಳುವ ಜತೆಗೆ ಜಿಲ್ಲಾವಾರು ಸುದ್ದಿಗೋಷ್ಠಿ ಹಾಗೂ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕು. ಪಿಎಸ್‌ಐ ನೇಮಕಾತಿ ಹಗರಣ, 40 ಪರ್ಸೆಂಟ್‌ ಕಮಿಷನ್‌, ಸಹಾಯಕ ಪ್ರಾಧ್ಯಾಪಕರ ನೇಮಕ ಹಗರಣ, ಕೇಂದ್ರದ ಜಿಎಸ್‌ಟಿ ಬಾಕಿ, ನೆರೆ ಪರಿಹಾರ ವಿಳಂಬ, ರಾಜ್ಯದಲ್ಲಿನ ಕೋಮುಗಲಭೆ, ಮಜ್ಜಿಗೆ, ಮೊಸರಿನಂತಹ ಅಗತ್ಯ ವಸ್ತುಗಳ ಮೇಲೂ ಜಿಎಸ್‌ಟಿ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳಬೇಕು ಎಂದು ತೀರ್ಮಾನಿಸಲಾಯಿತು ಎಂದು ತಿಳಿದುಬಂದಿದೆ.

40 ಪರ್ಸೆಂಟ್‌ ಭ್ರಷ್ಟಾಚಾರ ಚರ್ಚೆ:

ಇನ್ನು ಸರ್ಕಾರದ ವಿರುದ್ಧ ಕಾಂಗ್ರೆಸ್‌ಗೆ ಸಿಕ್ಕಿರುವ ಪ್ರಬಲ ಅಸ್ತ್ರ 40 ಪರ್ಸೆಂಟ್‌ ಭ್ರಷ್ಟಾಚಾರ. ಇದನ್ನು ಸಮರ್ಥವಾಗಿ ಬಳಸಿಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು. ಈಗಾಗಲೇ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಭೇಟಿಯಾಗಿ ದಾಖಲೆ ಬಿಡುಗಡೆ ಮಾಡಲು ತಾವು ಸಿದ್ಧರಿದ್ದು, ನೀವು ಸದನದಲ್ಲಿ ಚರ್ಚೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಪ್ರಮುಖ ವಿಚಾರವಾಗಿ ಕೈಗೆತ್ತಿಕೊಂಡು ಚರ್ಚೆ ಮಾಡಬೇಕು.
ಪ್ರಸ್ತುತ ಬಿಬಿಎಂಪಿಯಲ್ಲಿ ಕೇಳಿ ಬರುತ್ತಿರುವ 50 ಪರ್ಸೆಂಟ್‌ ಭ್ರಷ್ಟಾಚಾರ, ಶಿಕ್ಷಣ ಇಲಾಖೆಯಲ್ಲಿ ಕೇಳಿ ಬರುತ್ತಿರುವ ಭ್ರಷ್ಟಾಚಾರ, ಶಾಲೆಗಳ ಒಕ್ಕೂಟಗಳು ಪ್ರಧಾನಮಂತ್ರಿಗಳಿಗೆ ಪತ್ರ ಬರೆಯುತ್ತಿರುವುದು ಸೇರಿದಂತೆ ಎಲ್ಲ ರೀತಿಯ ಭ್ರಷ್ಟಾಚಾರದ ವಿಚಾರಗಳನ್ನೂ ಸದನದಲ್ಲಿ ಪ್ರಸ್ತಾಪಿಸುವ ಮೂಲಕ ರಾಜ್ಯದಲ್ಲಿರುವುದು ಭ್ರಷ್ಟಸರ್ಕಾರ ಎಂಬ ಸಂದೇಶವನ್ನು ಜನರಿಗೆ ರವಾನಿಸಬೇಕು ಎಂದು ಚರ್ಚಿಸಿರುವುದಾಗಿ ಮೂಲಗಳು ಮಾಹಿತಿ ನೀಡಿವೆ.
 

Follow Us:
Download App:
  • android
  • ios