ಬರ ಪರಿಹಾರ: ಕೇಂದ್ರದ ವಿರುದ್ಧ ಇಂದು ಕಾಂಗ್ರೆಸ್ ಪ್ರತಿಭಟನೆ: ಡಿ.ಕೆ.ಶಿವಕುಮಾರ್
ಕೇಂದ್ರವು ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಕೊಟ್ಟಂತಾಗಿದೆ ಎಂದು ಆರೋಪಿಸಿ ಹಾಗೂ ಹೆಚ್ಚುವರಿ ಬರ ಪರಿಹಾರಕ್ಕಾಗಿ ಆಗ್ರಹಿಸಿ ಕಾಂಗ್ರೆಸ್ ನಾಯಕರು ಭಾನುವಾರ ವಿಧಾನಸೌಧ ಆವರಣದ ಮಹಾತ್ಮ ಗಾಂಧೀಜಿ ಪ್ರತಿಮೆ ಬಳಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಬೆಂಗಳೂರು (ಏ.28): ರಾಜ್ಯ ಸರ್ಕಾರವು ಎನ್‌ಡಿಆರ್‌ಎಫ್ ಮಾನದಂಡದ ಪ್ರಕಾರ ಕೇಳಿರುವ ಬರ ಪರಿಹಾರದಲ್ಲಿ ಶೇ.20ರಷ್ಟನ್ನೂ ಕೇಂದ್ರ ಸರ್ಕಾರ ನೀಡಿಲ್ಲ. ಹೀಗಾಗಿ ಕೇಂದ್ರವು ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಕೊಟ್ಟಂತಾಗಿದೆ ಎಂದು ಆರೋಪಿಸಿ ಹಾಗೂ ಹೆಚ್ಚುವರಿ ಬರ ಪರಿಹಾರಕ್ಕಾಗಿ ಆಗ್ರಹಿಸಿ ಕಾಂಗ್ರೆಸ್ ನಾಯಕರು ಭಾನುವಾರ ವಿಧಾನಸೌಧ ಆವರಣದ ಮಹಾತ್ಮ ಗಾಂಧೀಜಿ ಪ್ರತಿಮೆ ಬಳಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರವು ರಾಜ್ಯಕ್ಕೆ ತೀವ್ರ ಅನ್ಯಾಯ ಮಾಡಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಚಲಾಯಿಸಿರುವ ಕಾರಣಕ್ಕೆ ಕನ್ನಡಿಗರ ಮೇಲೆ ದ್ವೇಷ ಸಾಧಿಸಲು ಮುಂದಾಗಿದೆ. ಹೀಗಾಗಿ ಈ ಅನ್ಯಾಯದ ವಿರುದ್ಧ ವಿಧಾನಸೌಧದ ಗಾಂಧೀಜಿ ಪ್ರತಿಮೆ ಬಳಿ ಭಾನುವಾರ ಪ್ರತಿಭಟನೆ ನಡೆಸಲಾಗುವುದು ಎಂದರು.
ಮತದಾರರಿಗೆ ಹಣ ಕೊಡುವವರೇ ರಣಹೇಡಿಗಳು: ಡಿಕೆಶಿಗೆ ಎಚ್‌ಡಿಕೆ ತಿರುಗೇಟು
ಕೇಂದ್ರ ಸರ್ಕಾರದ ಬಳಿ ರಾಜ್ಯ ಸರ್ಕಾರವು 18,174 ಕೋಟಿ ರು. ಪರಿಹಾರ ಕೇಳಿತ್ತು. ಆದರೆ ಕೇಂದ್ರವು 3,498 ಕೋಟಿ ರು. ಮಾತ್ರ ನೀಡಿದೆ. ಹೀಗಾಗಿ ಕಾಂಗ್ರೆಸ್‌ನ ಎಲ್ಲಾ ನಾಯಕರೂ ಸೇರಿ ಕೇಂದ್ರದ ರೈತ ಹಾಗೂ ಕರ್ನಾಟಕ ವಿರೋಧಿ ಧೋರಣೆ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ. ಜತೆಗೆ ನಮ್ಮ ರಾಜ್ಯಕ್ಕೆ ಬರಬೇಕಾದ ಪರಿಹಾರ ಮೊತ್ತ ಪಡೆಯಲು ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.
ನಾವು ಭಿಕ್ಷೆ ಕೇಳುತ್ತಿಲ್ಲ: ನಾವು ಕೇಂದ್ರದ ಬಳಿ ಭಿಕ್ಷೆ ಕೇಳುತ್ತಿಲ್ಲ. ಇದು ನಮ್ಮ ಹಕ್ಕು, ಅದನ್ನು ಕೇಳುತ್ತಿದ್ದೇವೆ. ಇದನ್ನು ನೀಡುವುದು ಕೇಂದ್ರದ ಕರ್ತವ್ಯ. ಈಗಲೂ ಸುಪ್ರೀಂ ಕೋರ್ಟ್‌ನಲ್ಲಿ ನಾವು ಪ್ರಕರಣ ದಾಖಲಿಸಿ ಹೋರಾಟ ಮಾಡಿದ್ದಕ್ಕೆ ಅಲ್ಪ ಪರಿಹಾರವನ್ನಾದರೂ ನೀಡಿದ್ದಾರೆ. ಹೀಗಾಗಿ ನ್ಯಾಯಾಲಯ ಹಾಗೂ ಜನರ ಮುಂದೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.
ರಣಹೇಡಿಯ ರೀತಿ ಮಂಡ್ಯ ಕ್ಷೇತ್ರಕ್ಕೆ ಓಡಿದ ಕುಮಾರಸ್ವಾಮಿ: ಡಿ.ಕೆ.ಶಿವಕುಮಾರ್ ವಂಗ್ಯ
ಮೋದಿ ಕರ್ನಾಟಕ ವಿರೋಧಿ: ಕೇಂದ್ರ ಬಿಡುಗಡೆ ಮಾಡಿರುವ ಅಲ್ಪ ಪ್ರಮಾಣದ ಪರಿಹಾರದ ಮೂಲಕ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು 6.5 ಕೋಟಿ ಕನ್ನಡಿಗರು ಹಾಗೂ ವಿಶೇಷವಾಗಿ ರೈತ ಬಂಧುಗಳ ಶತ್ರುಗಳು ಎಂಬುದು ಸಾಬೀತಾಗಿದೆ. 2023ರಲ್ಲಿ ಬಿಜೆಪಿಯನ್ನು ಹೀನಾಯವಾಗಿ ಸೋಲಿರುವ ಕಾರಣಕ್ಕೆ ಕನ್ನಡಿಗರ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ಬಿಜೆಪಿಗೆ ಈಗ ಮತ್ತೆ ಕನ್ನಡಿಗರು ಮತಗಳ ಮೂಲಕ ಶಿಕ್ಷೆ ನೀಡಲಿದ್ದಾರೆ ಎಂದು ಶಿವಕುಮಾರ್ ಹೇಳಿದರು.