ಸಿದ್ದು, ಡಿಕೆಶಿ ಬಸ್ ಯಾತ್ರೆ ಭರ್ಜರಿ ಆರಂಭ: ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್
ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭರ್ಜರಿ ಮತಬೇಟೆಗೆ ಮುಂದಾಗಿರುವ ಕಾಂಗ್ರೆಸ್, ತನ್ನ ಮಹತ್ವಾಕಾಂಕ್ಷೆಯ ‘ಪ್ರಜಾಧ್ವನಿ ಬಸ್ ಯಾತ್ರೆ’ಗೆ ಬೆಳಗಾವಿಯಲ್ಲಿ ಬುಧವಾರ ಅದ್ಧೂರಿಯಾಗಿ ಚಾಲನೆ ನೀಡಿತು.
ಬೆಳಗಾವಿ (ಜ.12): ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭರ್ಜರಿ ಮತಬೇಟೆಗೆ ಮುಂದಾಗಿರುವ ಕಾಂಗ್ರೆಸ್, ತನ್ನ ಮಹತ್ವಾಕಾಂಕ್ಷೆಯ ‘ಪ್ರಜಾಧ್ವನಿ ಬಸ್ ಯಾತ್ರೆ’ಗೆ ಬೆಳಗಾವಿಯಲ್ಲಿ ಬುಧವಾರ ಅದ್ಧೂರಿಯಾಗಿ ಚಾಲನೆ ನೀಡಿತು. ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮುಂಬರುವ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ತನ್ನು ಉಚಿತವಾಗಿ ನೀಡಲಾಗುವುದು ಎಂದು ಘೋಷಿಸಿದರು. ತನ್ಮೂಲಕ, ದೆಹಲಿಯ ಆಪ್ ಮಾದರಿಯಲ್ಲಿ ರಾಜ್ಯದಲ್ಲಿಯೂ ಉಚಿತ ವಿದ್ಯುತ್ ನೀಡುವುದಾಗಿ ಕಾಂಗ್ರೆಸ್ ಘೋಷಿಸಿದಂತಾಗಿದೆ.
ಯಾತ್ರೆ ವೇಳೆ 5 ಭರವಸೆಗಳನ್ನು ನೀಡಲುದ್ದೇಶಿಸಿರುವ ಕಾಂಗ್ರೆಸ್ ಆ ಪೈಕಿ ಮೊದಲ ಭರವಸೆಯನ್ನು ಪ್ರಕಟಿಸಿ ಮುಂದಿನ ಚುನಾವಣೆಗೆ ರಣಕಹಳೆ ಮೊಳಗಿಸಿತು. ಜೊತೆಗೆ, ಉಳಿದ ನಾಲ್ಕು ಭರವಸೆಗಳನ್ನು ಯಾತ್ರೆ ವೇಳೆ ಹಂತ, ಹಂತವಾಗಿ ಘೋಷಿಸುವ ವಾಗ್ದಾನ ನೀಡಿತು. ಬೆಂಗಳೂರು ನಂತರ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರ ಹೊಂದಿರುವ ಬೆಳಗಾವಿ ಜಿಲ್ಲೆಯ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್, ಅಲ್ಲಿಂದಲೇ ಬಸ್ ಯಾತ್ರೆಗೆ ಚಾಲನೆ ನೀಡಿರುವುದು ಗಮನಾರ್ಹ.
ಸಿದ್ದರಾಮಯ್ಯ ಸೋಲಿಗೆ ವ್ಯೂಹ ರಚಿಸುತ್ತೇವೆ: ಸಚಿವ ಸುಧಾಕರ್
ಯಾತ್ರೆ ಅಂಗವಾಗಿ ಬೆಳಗ್ಗೆ ಕಾಂಗ್ರೆಸ್ ನಾಯಕರು ಟಿಳಕವಾಡಿಯ ವೀರಸೌಧದಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಗೌರವ ಸಮರ್ಪಿಸಿ, ಚರಕ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ, ವಂದೇಮಾತರಂ ಗೀತೆಯನ್ನು ಪ್ರಸ್ತುತಪಡಿಸಲಾಯಿತು. ಬಳಿಕ, ಬಸ್ ಯಾತ್ರೆಗೆ ಚಾಲನೆ ನೀಡಲಾಯಿತು. ನಂತರ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮೊದಲಾದ ನಾಯಕರು ಬೆಳಗಾವಿ-ಖಾನಾಪುರ ರಸ್ತೆಯಲ್ಲಿ ಕೈಯಲ್ಲಿ ಪೊರಕೆ ಹಿಡಿದು, ಕಾಂಗ್ರೆಸ್ ಕಚೇರಿ ಆವರಣದಲ್ಲಿರುವ ಬಾವಿಯಿಂದ ತಂದ ನೀರು ಬಳಸಿ, ರಸ್ತೆಯನ್ನು ತೊಳೆದರು.
ಜನರ ಬದುಕಲ್ಲಿ ಬೆಳಕು ತರುತ್ತೇವೆ: ಈ ವೇಳೆ ಮಾತನಾಡಿದ ಡಿಕೆಶಿ, ಸಮಸ್ಯೆಗಳು ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರ ಬದುಕಿನಲ್ಲಿ ಮತ್ತೆ ಬೆಳಕು ತರಲು ನಾವು ಬದ್ಧರಾಗಿದ್ದೇವೆ. ನಿಮ್ಮ ಮನೆಯಲ್ಲಿ ಕತ್ತಲು ಕಳೆದು ಬೆಳಕು ನೀಡಲು ಕಾಂಗ್ರೆಸ್‌ನ ಎಲ್ಲ ನಾಯಕರು ಸೇರಿ ಚರ್ಚೆ ಮಾಡಿ ಈ ಯಾತ್ರೆಯಲ್ಲಿ ಐದು ಭರವಸೆ ನೀಡುತ್ತಿದ್ದೇವೆ. ಅದರ ಪೈಕಿ ಮೊದಲ ಖಚಿತ ಭರವಸೆ, ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ ನೀಡುವುದು. ನಾಡಿನ ಜನರ ಭವಿಷ್ಯಕ್ಕಾಗಿ ನಾವು ಅನೇಕ ಯೋಜನೆ ಹಮ್ಮಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಉಳಿದ ಭರವಸೆಗಳನ್ನು ಘೋಷಿಸಲಾಗುವುದು ಎಂದರು.
ಹಿಂದೆ ಗಾಂಧೀಜಿಯವರು ಬೆಳಗಾವಿಯಿಂದಲೇ ಕಾಂಗ್ರೆಸ್ ನಾಯಕತ್ವ ವಹಿಸಿ, ಬ್ರಿಟಿಷರನ್ನು ದೇಶದಿಂದ ತೊಲಗಿಸಿದ್ದರು. ನಾವು, ಈ ಕೆಟ್ಟಸರ್ಕಾರದ ಕೊಳೆಯನ್ನು ಕಿತ್ತು ಹಾಕಬೇಕೆಂದು ಬೆಳಗಾವಿಯಿಂದ ಪ್ರಜಾಧ್ವನಿ ಯಾತ್ರೆ ಆರಂಭಿಸಿದ್ದೇವೆ. ಪ್ರಜೆಗಳ ಧ್ವನಿಯನ್ನು ಎತ್ತಿ ಹಿಡಿಯಲು ಪ್ರಜಾಧ್ವನಿ ಯಾತ್ರೆ ನಡೆಯುತ್ತಿದೆ. ಕಾಂಗ್ರೆಸ್ ಬಾವಿಯ ಜಲವನ್ನು ಬಳಸಿ ರಾಜ್ಯದಲ್ಲಿನ ಕೊಳೆಯನ್ನು ತೊಳೆಯಲು, ಕೆಟ್ಟಆಡಳಿತವನ್ನು ತೊಳೆಯಲು ಪ್ರಾರಂಭಿಸಿದ್ದೇವೆ ಎಂದರು.
ಸಿದ್ದರಾಮಯ್ಯ ಮಾತನಾಡಿ, 1924ರಲ್ಲಿ ಮಹಾತ್ಮ ಗಾಂಧಿ ಅವರು ಮೊದಲ ಬಾರಿಗೆ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು. ಆ ಅಧಿವೇಶನ ಬೆಳಗಾವಿಯಲ್ಲಿ ನಡೆಯಿತು. ಆ ಸ್ಥಳವೇ ಈಗ ವೀರಸೌಧವಾಗಿದೆ. ಈ ವೀರಸೌಧದಿಂದ ನಾವು ಯಾತ್ರೆ ಆರಂಭಿಸಿದ್ದೇವೆ. ಈ ಯಾತ್ರೆಯ ಮೂಲಕ ಬಿಜೆಪಿ ಸರ್ಕಾರದ ಆರೋಪ ಪಟ್ಟಿಯನ್ನು ಜನರ ಮುಂದಿಡುತ್ತೇವೆ. ಬಿಜೆಪಿಯ ಪಾಪದ ಕೊಳೆಯನ್ನು ಬೆಳಗಾವಿಯಿಂದ ಶುಚಿಗೊಳಿಸುವ ಕಾರ್ಯ ಆರಂಭಿಸಿದ್ದೇವೆ ಎಂದರು.
ದೇಶದ ಅತ್ಯಂತ ಭ್ರಷ್ಟಸರ್ಕಾರ ಎಂದರೆ ಕರ್ನಾಟಕದ ಬಸವರಾಜ ಬೊಮ್ಮಾಯಿ ಸರ್ಕಾರ. ಹಿಂದೂಸ್ತಾನದ ದುರ್ಬಲ ಮುಖ್ಯಮಂತ್ರಿ ಬೊಮ್ಮಾಯಿ. ಬೆಳಗಾವಿಯ ಒಂದಿಂಚನ್ನೂ ಮಹಾರಾಷ್ಟ್ರಕ್ಕೆ ಕೊಡಲ್ಲ ಎಂದು ಅಮಿತ್ ಶಾ ಎದುರು ಹೇಳುವ ಧೈರ್ಯ ಅವರಿಗಿಲ್ಲ.
-ರಣದೀಪ್ ಸಿಂಗ್ ಸುರ್ಜೇವಾಲಾ
ಬರದ ನಾಡನ್ನು ಮಲೆನಾಡು ಮಾಡಿದ ಸುಧಾಕರ್: ಸಚಿವ ಸೋಮಣ್ಣ
ಬಿಜೆಪಿಯವರ ಪಾಪದ ಕೊಡ ತುಂಬಿದೆ. ರೈತರ ಆದಾಯ ಡಬಲ್ ಮಾಡುವುದಾಗಿ ಮೋದಿ ಸರ್ಕಾರ ವಚನ ನೀಡಿತ್ತು. ಆದಾಯ ಡಬಲ್ ಆಗಿದೆಯಾ? ಬಿಜೆಪಿ ಸರ್ಕಾರ ಭ್ರಷ್ಟಾಚಾರ, ದುರಾಡಳಿತದಲ್ಲಿ ಮುಳುಗಿದೆ. ದ್ವೇಷದ ರಾಜಕಾರಣ ಮಾಡುತ್ತಿದೆ.
-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ
ರಾಜ್ಯ ಬಿಜೆಪಿ ಸರ್ಕಾರಕ್ಕೆ 40 ಪರ್ಸೆಂಟ್ ಸರ್ಕಾರ ಎಂದು ಹೆಸರು ಬಂದಿದೆ. ಸಮಸ್ಯೆಗಳು ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರ ಬದುಕಿನಲ್ಲಿ ಮತ್ತೆ ಬೆಳಕು ತರಲು ನಾವು ಬದ್ಧರಾಗಿದ್ದೇವೆ. ಕೆಟ್ಟಆಡಳಿತವನ್ನು ತೊಳೆಯಲು ಪ್ರಾರಂಭಿಸಿದ್ದೇವೆ.
-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ