ಬಿಜೆಪಿ ಸೇರಲು ಮುಂದಾಗಿದ್ದ ಹೆಚ್ ಎಂ ರೇವಣ್ಣ- ಡಿಕೆಶಿ ಭೇಟಿ, ಕಾಂಗ್ರೆಸ್ ಟಿಕೆಟ್ ನೀಡುವ ಭರವಸೆ
ಟಿಕೆಟ್ ಕೈ ತಪ್ಪಿದ ಬೆನ್ನಲ್ಲೆ ಅಸಮಧಾನಗೊಂಡಿರೋ ಹೆಚ್ಎಂ ರೇವಣ್ಣ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಕಾಂಗ್ರೆಸ್ ನಿಂದ ಟಿಕೆಟ್ ಸಿಗುವ ಭರವಸೆ ಸಿಕ್ಕಿದೆ.
ಬೆಂಗಳೂರು (ಏ.8): ಟಿಕೆಟ್ ಕೈ ತಪ್ಪಿದ ಬೆನ್ನಲ್ಲೆ ಅಸಮಧಾನಗೊಂಡಿರೋ ಹೆಚ್ಎಂ ರೇವಣ್ಣ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಡಿಕೆಶಿ ಭೇಟಿ ಬಳಿಕ ಮಾತನಾಡಿದ ರೇವಣ್ಣ, ಟಿಕೆಟ್ ಕೊಡ್ತೀವಿ ಅಂತ ಹೇಳಿದ್ದಾರೆ. ಟಿಕೆಟ್ ವಿಚಾರದಲ್ಲಿ ನನ್ನ ಕಡೆಯಿಂದಲೂ ತಪ್ಪಿದೆ. ಡೀಲೀಮಿಟೇಷನ್ ನಿಂದ ನಾನು ಮಾಗಡಿ ಬಿಟ್ಟು ಬಂದೆ. ಹೆಬ್ಬಾಳಕ್ಕೆ ಬಂದೆ 4 ಸಾವಿರದಲ್ಲಿ ಸೋತೆ. ಆಮೇಲೆ ಎಂಎಲ್ಸಿ ಮಾಡಿದ್ರು. ಆಮೇಲೆ ಚನ್ನಪಟ್ಟಣ ಕೊಟ್ರು, ಆದ್ರೆ ಅದು ದೊಡ್ಡ ಕತೆ ಬಿಡಿ. ರೇವಣ್ಣ ನವರ ತಾಕತ್ತು ಗೊತ್ತು ಅದಕ್ಕೆ ಪ್ರಬಲ ಕ್ಷೇತ್ರವನ್ನ ಕೊಡ್ತಿದ್ರು. ನಾನು ವಿದ್ಯಾರ್ಥಿದೆಸೆಯಿಂದಲೂ ದೇವರಾಜ್ ಅರಸು ಕಾಲದಿಂದಲೂ ಕಾಂಗ್ರೆಸ್ ನಲ್ಲಿದ್ದೇನೆ. ನಾವು ಕಾಂಗ್ರೆಸ್ ಕಟ್ಟಿರೋರು. ಟಿಕೆಟ್ ಕೊಡ್ತಾರೆ ಅನ್ನೋ ಭರವಸೆ ಇದೆ ಎಂದಿದ್ದಾರೆ.
ಬಿಜೆಪಿ ಸೇರಲು ಮುಂದಾಗಿದ್ರಾ ರೇವಣ್ಣ!
ಕುರುಬ ಸಮುದಾಯದ ಹಿರಿಯ ಕಾಂಗ್ರೆಸ್ ನಾಯಕ ಎಚ್ ಎಂ ರೇವಣ್ಣ ಅವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕರುಗಳ ವಿರುದ್ಧ ಹೆಚ್ ಎಂ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮ ಪರಮಾಪ್ತ ಸಿದ್ದರಾಮಯ್ಯ ವಿರುದ್ಧವೇ ರೇವಣ್ಣ ಅಸಮಾಧಾನಗೊಂಡಿದ್ದರು. ಆದರೆ ರೇವಣ್ಣ ಅವರನ್ನು ಲೆಕ್ಕಕ್ಕೆ ಕಾಂಗ್ರೆಸ್ ನಾಯಕರು ಪರಿಗಣಿಸಿರಲಿಲ್ಲ ಎನ್ನಲಾಗಿತ್ತು. ಇದರಿಂದ ಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಚಿಂತನೆ ನಡೆಸಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಹೆಚ್ ಎಮ್ ರೇವಣ್ಣ ಮನೆಗೆ ಕಾಂಗ್ರೆಸ್ ಕಾರ್ಯಕರ್ತರು ಮನೆಗೆ ಆಗಮಿಸಿ ಪಕ್ಷ ತೊರೆಯದಂತೆ ಮನವಿ ಮಾಡಿದ್ದರು.
ಈ ಎಲ್ಲಾ ಬೆಳವಣಿಗೆಯ ಬಳಿಕ ಮಾತನಾಡಿದ್ದ ಹೆಚ್ ಎಮ್ ರೇವಣ್ಣ, ರಾಜಕೀಯ ಜೀವನ ಪ್ರಾರಂಭ ಆಗಿದ್ದೆ ನನ್ನ ವಿದ್ಯಾರ್ಥಿ ಜೀವನದಿಂದ. ಅವತ್ತಿನಿಂದ ಇವತ್ತಿನವರೆಗೂ ನಾನು ಕಾಂಗ್ರೆಸ್ ನೀಡಿದ ಎಲ್ಲ ಕೆಲಸಗಳನ್ನು ಮಾಡ್ತಾ ಬಂದಿದ್ದೇನೆ. ಹೇಗೆ ನಡೆಸಿ ಕೊಳ್ತಾರೆ ಕಾಂಗ್ರೆಸ್ ನವರು ಅನ್ನೋದನ್ನು ನೋಡೋಣ. ನಾನು ಕಾಂಗ್ರೆಸಿಗಾ, ನನ್ನ ರಕ್ತ ಕಾಂಗ್ರೆಸ್ . ನನಗೆ ನೋವಾಗಿದೆ, ಇಲ್ಲ ಅಂತ ನಾನು ಹೇಳೋದಿಲ್ಲ ಎಂದು ಭಾವುಕರಾಗಿ ನುಡಿದಿದ್ದರು.
ಸಿಎಂ ಭೇಟಿ ಮಾಡಿಲ್ಲ ಎಂದ ರೇವಣ್ಣ
ನೋವಾಗಿದೆ ಅಂತ ನಾನು ಅಲ್ಲೆಲ್ಲೋ ಬಿಜೆಪಿಗೆ ಹೋಗ್ತೀನಿ ಅಂತ ಅನ್ನೊದೆಲ್ಲ ಸತ್ಯಕ್ಕೆ ದೂರವಾದ ಮಾತು. ನಾನು ನಿನ್ನೆ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿದ್ದೆ ಅಲ್ಲಿ ಹೋದೆ ಇಲ್ಲಿ ಹೋದೆ ಅಂತೆಲ್ಲ ಹೇಳ್ತಾ ಇದ್ದಾರೆ ಅದೆಲ್ಲ ಸತ್ಯಕ್ಕೆ ದೂರವಾದ ಮಾತು. ಸಿಎಂ ನನ್ನೊಟ್ಟಿಗೆ ಮಾತನಾಡಿಲ್ಲ, ಆದ್ರೆ ನಮ್ಮವರು ನಮ್ಮ ಕಾಂಗ್ರೆಸ್ ನವರು ನಮ್ಮೊಂದಿಗೆ ಮಾತನಾಡಿದ್ದಾರೆ. ನನಗೆ ಯಾರ ಮೇಲೂ ಅಸಮಾಧಾನ ಇಲ್ಲ. ನನಗೆ ನನ್ನ ಮೇಲೆಯೇ ಅಸಮಾಧಾನ, ನಾನು ಇಷ್ಟು ದಿನ ಮೌನವಾಗಿದ್ದೆ ತಪ್ಪು ಅನಿಸುತ್ತೆ ಎಂದಿದ್ದರು.
ತುಮಕೂರು ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಧಾನ, ಜಿ.ಪರಮೇಶ್ವರ್ ವಿಶ್ವಾಸ ಘಾತುಕ
ಪರಮಾಪ್ತ ಸಿದ್ದರಾಮಯ್ಯ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದ ರೇವಣ್ಣ
ಸಿದ್ದರಾಮಯ್ಯ ಅವರನ್ನ ನೀವೇ ಕೇಳಿ ಯಾಕೆ ಈ ರೀತಿ ಏಕೆ ಆಯ್ತು ಅಂತ ಎಂದ ರೇವಣ್ಣ , ಸಿದ್ದರಾಮಯ್ಯ ಅವರ ಎಲ್ಲ ಹೋರಾಟಗಳಲ್ಲಿಯೂ ನಾನು ಅವರ ಪರ ಇದ್ದೀನಿ, ಅವರೇ ಇದಕ್ಕೆ ಉತ್ತರಿಸಬೇಕು. ಮಾಗಡಿ ಬಿಟ್ಟು ಬಂದು ನಾನು ತಪ್ಪು ಮಾಡಿದೆ ಅನಿಸುತ್ತೆ. ಅಲ್ಲಿಂದ ಬಂದ ನಂತರ ನನ್ನ ಫುಟ್ ಬಾಲ್ ಆಡಿದ ಹಾಗೆ ಆಡಿಸುತ್ತಿದ್ದಾರೆ. ನಿನ್ನೆವರೆಗೂ ಬಿಜೆಪಿಯಲಿದ್ದು, ಇವತ್ತು ಕಾಂಗ್ರೆಸ್ ಗೆ ಬರ್ತಿವಿ ಅಂದ್ರೆ ಬನ್ನಿ ಅಂತ ಕರೆದು ಟಿಕೆಟ್ ಕೊಡ್ತಾರೆ. ಆದ್ರೆ ಪಕ್ಷಕ್ಕಾಗಿ ದುಡಿದವರಿಗೆ ಈ ರೀತಿ ನಡೆಸಿಕೊಳ್ತಾರೆ ಎಂದಿದ್ದರು. ಈ ಬಗ್ಗೆ ಖರ್ಗೆ ಅವರೊಂದಿಗೆ ಮಾತನಾಡಿದ್ದೀರಾ ಅನ್ನುವ ಪ್ರಶ್ನೆಗೆ ಜಾಸ್ತಿ ಬೇಡ ಎಲ್ಲರೊಂದಿಗೆ ಮಾತನಾಡಿದ್ದೇನೆ. ಆದ್ರೆ ಅವರೆಲ್ಲ ಏನು ಹೇಳಿದ್ರು ಅಂತ ಹೇಳಲು ಸಾಧ್ಯವಿಲ್ಲ ಎಂದಿದ್ದರು.
ರಾಜಕಾರಣ ಅಂದ್ರೆ ಫುಟ್ಬಾಲ್ ಅಲ್ಲ, ಚೆಸ್ ಗೇಮ್, ಬಿಜೆಪಿ ಪಟ್ಟಿ ಬರಲಿ ಬಳಿಕ ಮಾತಾಡ್ತೇನೆ: ಡಿಕೆಶಿ
ಇನ್ನು ಏಪ್ರಿಲ್ 13 ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಅಲ್ಲದೆ, ನಾಮಪತ್ರ ಸಲ್ಲಿಕೆ ಆರಂಭವೂ ಏಪ್ರಿಲ್ 13 ರಂದೇ ಆರಂಭವಾಗಲಿದೆ. ಇನ್ನು, ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.