*   ತಮ್ಮ ಹೇಳಿಕೆಗಳಿಂದ ಪಕ್ಷದ ಘನತೆ, ಗೌರವಗಳಿಗೆ ಕುಂದುಂಟಾಗಿದೆ*  ನಿಮ್ಮ ಈ ನಡವಳಿಕೆಯು ಪಕ್ಷದ ಶಿಸ್ತು ಉಲ್ಲಂಘನೆ *  ಸಿದ್ದು ಹಾಗೂ ಡಿಕೆಶಿ ಕಚ್ಚಾಟದಿಂದ ಪಕ್ಷ ಹಾಳಾಗುತ್ತಿವೆ ಅಂತ ಹೇಳಿದ್ದ ಲಕ್ಷ್ಮೀನಾರಾಯಣ

ಬೆಂಗಳೂರು(ಜು.02):  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಂದಲೇ ಕಾಂಗ್ರೆಸ್‌ ಪಕ್ಷ ಸರ್ವನಾಶ ಆಗುತ್ತಿದೆ ಎಂದು ಬಹಿರಂಗ ಆರೋಪ ಮಾಡಿದ್ದ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ಅವರಿಗೆ ಕೆಪಿಸಿಸಿ ಶಿಸ್ತುಪಾಲನಾ ಸಮಿತಿ ನೋಟಿಸ್‌ ಜಾರಿ ಮಾಡಿದೆ. 

ವಿಧಾನಪರಿಷತ್‌ ಸದಸ್ಯ ಸ್ಥಾನ ತಪ್ಪಿದ್ದಕ್ಕೆ ವಿಧಾನ ಪರಿಷತ್‌ ಮಾಜಿ ಸದಸ್ಯರೂ ಆದ ಲಕ್ಷ್ಮೀನಾರಾಯಣ ಅವರು, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಕಚ್ಚಾಟದಿಂದ ಪಕ್ಷ ಹಾಳಾಗುತ್ತಿವೆ. ಇವರ ಬದಲು ಡಾ.ಜಿ. ಪರಮೇಶ್ವರ್‌ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡಬೇಕು ಎಂದು ಹೇಳಿದ್ದರು. 

ಲಕ್ಷ್ಮೀನಾರಾಯಣ, ಸೀತಾರಾಂಗೆ ಕಾಂಗ್ರೆಸ್‌ ನೋಟಿಸ್‌: ರೆಹಮಾನ್‌ ಖಾನ್‌

ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಶಿಸ್ತುಪಾಲನಾ ಸಮಿತಿಯು ನೋಟಿಸ್‌ ಜಾತಿ ಮಾಡಿದೆ. ವಾರದೊಳಗೆ ಲಿಖಿತ ವಿವರಣೆ ನೀಡಬೇಕು ಎಂದು ಸಮಿತಿ ಸಂಚಾಲಕ ನಿವೇದಿತ್‌ ಆಳ್ವ ನೋಟಿಸ್‌ನಲ್ಲಿ ತಿಳಿಸಿದ್ದಾರೆ.
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರ ಬಗೆಗಿನ ತಮ್ಮ ಹೇಳಿಕೆಗಳಿಂದ ಪಕ್ಷದ ಘನತೆ, ಗೌರವಗಳಿಗೆ ಕುಂದುಂಟಾಗಿದೆ. ನಿಮ್ಮ ಈ ನಡವಳಿಕೆಯು ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ ಅಂತ ನೋಟಿಸ್‌ನಲ್ಲಿ ತಿಳಿಸಲಾಗಿದೆ.