ಕುಮಾರಸ್ವಾಮಿ ವಿರುದ್ಧ 'ಡೀಲ್' ಬಾಂಬ್ ಸಿಡಿಸಿದ ಜಮೀರ್ ಅಹಮ್ಮದ್
* ಕುಮಾರಸ್ವಾಮಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಜಮೀರ್ ಅಹಮದ್ ಖಾನ್
* ನಿದರ್ಶನಗಳ ಸಹಿತ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿ ಜಮೀರ್
* ಸಿದ್ದರಾಮಯ್ಯ ಅವರನ್ನು 'ಅಲ್ಪಸಂಖ್ಯಾತರ ಟರ್ಮಿನೇಟರ್ ಎಂದಿದ್ದಕ್ಕೆ ಜಮೀರ್ ಆಕ್ರೋಶ
ಬೆಂಗಳೂರು, (ಅ.17): ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah ) ಅವರನ್ನು 'ಅಲ್ಪಸಂಖ್ಯಾತರ ಟರ್ಮಿನೇಟರ್' ಎಂದು ಎಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿಕೆಗೆ ಶಾಸಕ ಜಮೀರ್ ಅಹಮದ್ ಖಾನ್ ಕೆಂಡಾಮಂಡಲರಾಗಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಬೈರತಿ ಸುರೇಶ್ ಮತ್ತು ಎಚ್.ಡಿ ಕುಮಾರಸ್ವಾಮಿ ಅವರ ನಡುವೆ ಡೀಲ್ ನಡೆದಿತ್ತು ಎಂದು ಜಮೀರ್ ಅಹಮದ್ ಖಾಣ್ (Zameer Ahmed Khan ) ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.
ಮುಸ್ಲಿಂ ನಾಯಕರನ್ನ ಮುಗಿಸಿದ್ದೇ ಸಿದ್ದರಾಮಯ್ಯ: ಸಿದ್ದು ವಿರುದ್ಧ HDK ವಾಗ್ದಾಳಿ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು 'ಅಲ್ಪಸಂಖ್ಯಾತರ ಟರ್ಮಿನೇಟರ್' ಎಂದು ಎಚ್.ಡಿ ಕುಮಾರಸ್ವಾಮಿ ಅವರು ಶನಿವಾರ ಟೀಕಿಸಿದ್ದರು. ಈ ಬಗ್ಗೆ ಇಂದು (ಭಾನುವಾರ) ಸರಣಿ ಟ್ವೀಟ್ ಮಾಡಿರುವ ಜಮೀರ್ ಅಹಮದ್, ನಿದರ್ಶನಗಳ ಸಹಿತ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.
ಇಕ್ಬಾಲ್ ಸರಡಗಿ ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ ಅವರಲ್ಲ, ಕುಮಾರಸ್ವಾಮಿ . ಆ ವಿಧಾನಪರಿಷತ್ ಚುನಾವಣೆಯಲ್ಲಿ ಭೈರತಿ ಸುರೇಶ್ ಪಕ್ಷೇತರ ಅಭ್ಯರ್ಥಿಯಾಗಿದ್ದರು. ಜೆಡಿಎಸ್ ಪಕ್ಷದಲ್ಲಿ ಆಗ ಏಳೆಂಟು ಹೆಚ್ಚುವರಿ ಮತಗಳಿದ್ದವು. ಅದನ್ನು ಭೈರತಿ ಸುರೇಶ್ ಅವರಿಗೆ ಮಾರಾಟ ಮಾಡಿದ್ದು ಯಾರೆಂದು ನೆನಪಿದೆಯಾ? ಎಂದು ಮನವರಿಕೆ ಮಾಡಿದ್ದಾರೆ.
'ಯುಬಿ ಸಿಟಿಯ ನನ್ನ ಫ್ಲಾಟ್ ನಲ್ಲಿ ನೀವಿದ್ದಾಗ ಆಗಿನ ಶಾಸಕ ಸುರೇಶ್ ಬಾಬು ಅವರು ಭೈರತಿ ಸುರೇಶ್ ಅವರನ್ನು ಕರೆದುಕೊಂಡು ಬಂದಿಲ್ಲವೇ? ಅಲ್ಲಿ ನಡೆದಿದ್ದ ಡೀಲ್ ಏನು? ಭೈರತಿ ಸುರೇಶ್ ಗೆಲ್ಲಿಸಿದರೆ ಅಲ್ಪಸಂಖ್ಯಾತ ಕೋಮಿಗೆ ಸೇರಿರುವ ಸರಡಗಿ ಸೋಲುತ್ತಾರೆ ಎಂದು ನಿಮಗೆ ಗೊತ್ತಿರಲಿಲ್ಲವೇ ಕುಮಾರಸ್ವಾಮಿ ಅವರೇ? ಎಂದು ಪ್ರಶ್ನೆ ಮಾಡಿದ್ದಾರೆ.
'ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಜಾಫರ್ ಷರೀಫ್ ಮೊಮ್ಮಗ ಚುನಾವಣೆಗೆ ನಿಂತಾಗ ಕುಮಾರಸ್ವಾಮಿ ಅವರು ತಮ್ಮ ಪಕ್ಷದಿಂದ ಅಬ್ದುಲ್ ಅಜೀಂ ಅವರನ್ನು ಅಭ್ಯರ್ಥಿಯಾಗಿ ನಿಲ್ಲಿಸಿಲ್ಲವೇ? ರೆಹಮಾನ್ ಷರೀಫ್ ಮೇಲೆ ಅಷ್ಟೊಂದು ಪ್ರೀತಿ ಇದ್ದಿದ್ದರೆ ಮುಸ್ಲಿಂ ಅಭ್ಯರ್ಥಿಯನ್ನು ಎದುರಾಳಿಯಾಗಿ ಯಾಕೆ ನಿಲ್ಲಿಸಿದ್ದು? ಎಂದು ಅವರು ಕೇಳಿದ್ದಾರೆ.
ಸಿದ್ದರಾಮಯ್ಯನವರು ಟಿಪ್ಪು ಜಯಂತಿಯನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಚರಿಸಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಬ್ಯಾಂಕ್ವೆಟ್ ಹಾಲ್ ನಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನಿರಾಕರಿಸಿದ್ದರು. ನಾನು ಗಲಾಟೆ ಮಾಡಿ ಅಲ್ಲಿಯೇ ಸಮಾರಂಭ ನಡೆಸಿದಾಗ ಅವರು ಸಮಾರಂಭಕ್ಕೂ ಬರಲಿಲ್ಲ ಎಂದು ಜಮೀರ್ ಹೇಳಿದ್ದಾರೆ.
ಹಜ್ ಯಾತ್ರೆ ಆರಂಭವಾದ ವರ್ಷದಿಂದ ಇಲ್ಲಿಯ ವರೆಗೆ ಯಡಿಯೂರಪ್ಪ , ಜಗದೀಶ್ ಶೆಟ್ಟರ್, ಸದಾನಂದಗೌಡ ಸೇರಿದಂತೆ ಉಳಿದೆಲ್ಲ ಪಕ್ಷಗಳ ಮುಖ್ಯಮಂತ್ರಿಗಳು ಬಂದಿದ್ದರು. ಆದರೆ ಕುಮಾರಸ್ವಾಮಿ ಅವರು ಎಂದೂ ಬಂದಿಲ್ಲ. ಇದು ಅವರ ಅಲ್ಪಸಂಖ್ಯಾತರ ಬಗೆಗಿನ ನೈಜ ಪ್ರೀತಿ ಎಂದು ಟ್ವೀಟ್ ಮಾಡಿದ್ದಾರೆ.