ಬೆಂಗಳೂರು [ನ.15]:  ಉಪ ಚುನಾವಣೆಗೆ ಬಾಕಿ ಉಳಿದ ಏಳು ಕ್ಷೇತ್ರಗಳ ಅಭ್ಯರ್ಥಿ ಹೆಸರು ಅಂತಿಮಗೊಳಿಸಲು ಕರೆಯಲಾಗಿದ್ದ ಹಿರಿಯ ಕಾಂಗ್ರೆಸ್‌ ನಾಯಕರ ಸಭೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಬಹುತೇಕ ಎಲ್ಲಾ ನಾಯಕರು ಗೈರು ಹಾಜರಾಗುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ಉಪ ಚುನಾವಣೆಗೆ ಕಾಂಗ್ರೆಸ್‌ ಈಗಾಗಲೇ ಎಂಟು ಕ್ಷೇತ್ರಗಳ ಅಭ್ಯರ್ಥಿ ಹೆಸರು ಘೋಷಿಸಿದ್ದು, ಬಾಕಿ ಉಳಿದ ಏಳು ಮಂದಿಯ ಹೆಸರು ಅಂತಿಮಗೊಳಿಸಲು ಗುರುವಾರ ಸಂಜೆ ಕೆಪಿಸಿಸಿ ಕಚೇರಿಯಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಗೆ ಕೆಪಿಸಿಸಿಯು 28 ಮಂದಿ ನಾಯಕರಿಗೆ ಆಹ್ವಾನ ನೀಡಿತ್ತು.

ಈ ಪೈಕಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮಹಾರಾಷ್ಟ್ರ ರಾಜ್ಯ ರಾಜಕಾರಣದಲ್ಲಿ ವ್ಯಸ್ತರಾಗಿದ್ದರಿಂದ ಬಂದಿರಲಿಲ್ಲ. ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಸಹ ಹಾಜರಿರಲಿಲ್ಲ. ಈ ನಾಯಕರು ತಮ್ಮ ಗೈರಿಗೆ ಕಾರಣ ನೀಡಿದ್ದರು. ಇನ್ನು ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಸಭೆಗೆ ಗೈರು ಹಾಜರಾಗಿದ್ದರು.

ಉಳಿದಂತೆ ಪ್ರಮುಖ ನಾಯಕರಾದ ಹಾಗೂ ಸಿದ್ದರಾಮಯ್ಯ ಅವರೊಂದಿಗೆ ತೀವ್ರ ಭಿನ್ನಾಭಿಪ್ರಾಯ ಹೊಂದಿರುವ ಬಿ.ಕೆ. ಹರಿಪ್ರಸಾದ್‌, ಕೆ.ಎಚ್‌. ಮುನಿಯಪ್ಪ, ಎಚ್‌.ಕೆ. ಪಾಟೀಲ್‌ರಂತಹ ನಾಯಕರು ಸಭೆಯಿಂದ ದೂರ ಉಳಿದರು. ಅಲ್ಲದೆ, ಎಲ್‌.ಹನುಮಂತಯ್ಯ, ಸಲೀಂ ಅಹಮದ್‌, ರಾಮಲಿಂಗಾರೆಡ್ಡಿ, ರಾಜ್ಯಸಭಾ ಸದಸ್ಯರಾದ ನಾಸಿರ್‌ ಹುಸೇನ್‌, ರಾಜೀವ್‌ಗೌಡ, ಸಂಸದ ಡಿ.ಕೆ.ಸುರೇಶ್‌ ಹಾಗೂ ಜೆ.ಸಿ. ಚಂದ್ರಶೇಖರ್‌ ಸಹ ಸಭೆಗೆ ಹಾಜರಾಗಲಿಲ್ಲ ಎಂದು ತಿಳಿದುಬಂದಿದೆ.

ಹೀಗೆ, ಸಿದ್ದರಾಮಯ್ಯ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಎಲ್ಲಾ ನಾಯಕರು ಸಭೆಯಿಂದ ಹೊರಗುಳಿದಿರುವುದು ಪಕ್ಷದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ನಡೆದಿದ್ದ ಹಿರಿಯ ನಾಯಕರ ಸಭೆಯಲ್ಲಿ ಕೆ.ಎಚ್‌. ಮುನಿಯಪ್ಪ ಹಾಗೂ ಬಿ.ಕೆ. ಹರಿಪ್ರಸಾದ್‌ ಅವರು ಸಿದ್ದರಾಮಯ್ಯ ಅವರೊಂದಿಗೆ ವಾಗ್ವಾದ ನಡೆಸಿ ಸಭೆಯಿಂದಲೇ ಅರ್ಧಕ್ಕೆ ಹೊರನಡೆದಿದ್ದರು. ಶಿವಾಜಿನಗರ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಆ ಸಂದರ್ಭದಲ್ಲಿ ವಾಗ್ವಾದ ನಡೆದಿತ್ತು. ಹರಿಪ್ರಸಾದ್‌ ಅವರು ಸಲೀಂ ಅಹಮದ್‌ ಅವರಿಗೆ ಟಿಕೆಟ್‌ ನೀಡಬೇಕು ಎಂದು ವಾದಿಸಿದ್ದರು. ಇನ್ನು ಮುನಿಯಪ್ಪ ಅವರು ರಮೇಶ್‌ ಕುಮಾರ್‌ ವಿರುದ್ಧ ಹರಿಹಾಯ್ದಿದ್ದರು.

ಇದಾದ ನಂತರ ನಡೆದಿರುವ ಗುರುವಾರದ ಸಭೆಗೆ ಎಲ್ಲಾ ನಾಯಕರು ಗೈರುಹಾಜರಾಗುವ ಮೂಲಕ ಮತ್ತೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸಭೆಯಲ್ಲಿ ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌ ಅವರಲ್ಲದೆ, ಎಂ.ಬಿ. ಪಾಟೀಲ್‌, ಕೆ.ಜೆ. ಜಾಜ್‌ರ್‍, ಸತೀಶ್‌ ಜಾರಕಿಹೊಳಿ, ನಜೀರ್‌ ಅಹಮದ್‌, ವಿ. ಮುನಿಯಪ್ಪ ಮೊದಲಾದವರು ಪಾಲ್ಗೊಂಡಿದ್ದರು.