Karnataka Government Viveka Scheme Controversy: ‘ವಿವೇಕ’ ಯೋಜನೆಯಡಿ ನಿರ್ಮಾಣವಾಗುವ ಶಾಲಾ ಕೊಠಡಿಗಳಿಗೆ ‘ಅರುಣೋದಯ’ ಬಣ್ಣ ಬಳಿಯುವ ಪ್ರಸ್ತಾವನೆಗೆ ರಾಜ್ಯ ಕಾಂಗ್ರೆಸ್‌ ನಾಯಕರು ಕಿಡಿ ಕಾರಿದ್ದು, ‘ರಾಜ್ಯ ಸರ್ಕಾರ ಮಕ್ಕಳ ಭವಿಷ್ಯವನ್ನೇ ನಿರ್ನಾಮ ಮಾಡಲು ಹೊರಟಿದೆ.

ಬೆಂಗಳೂರು (ನ.15): ‘ವಿವೇಕ’ ಯೋಜನೆಯಡಿ ನಿರ್ಮಾಣವಾಗುವ ಶಾಲಾ ಕೊಠಡಿಗಳಿಗೆ ‘ಅರುಣೋದಯ’ ಬಣ್ಣ ಬಳಿಯುವ ಪ್ರಸ್ತಾವನೆಗೆ ರಾಜ್ಯ ಕಾಂಗ್ರೆಸ್‌ ನಾಯಕರು ಕಿಡಿ ಕಾರಿದ್ದು, ‘ರಾಜ್ಯ ಸರ್ಕಾರ ಮಕ್ಕಳ ಭವಿಷ್ಯವನ್ನೇ ನಿರ್ನಾಮ ಮಾಡಲು ಹೊರಟಿದೆ. ಇದು ವಿವೇಕ ಯೋಜನೆಯಲ್ಲ ಅವಿವೇಕದ ಪರಮಾವಧಿ’ ಎಂದು ಟೀಕಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಪ್ರಿಯಾಂಕ ಖರ್ಗೆ, ‘ನಮಗೆ ಬಣ್ಣದ ಸಮಸ್ಯೆಯಲ್ಲ, ವಿದ್ಯಾರ್ಥಿಗಳ ಭವಿಷ್ಯದ ಚಿಂತೆಯಾಗಿದೆ. ಶಿಕ್ಷಣದ ಗುಣಮಟ್ಟ ಕುಸಿದಿರುವ ಬಗ್ಗೆ ಕೇಂದ್ರವೇ ವರದಿ ನೀಡಿದೆ. 

ಹೀಗಿದ್ದರೂ ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳ ಬಗ್ಗೆ ಮಾತನಾಡುತ್ತಿಲ್ಲ. ಬಣ್ಣದ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಹೇಳಿದರು. ‘ಶಿಕ್ಷಣ ಹಾಗೂ ವಿದ್ಯಾರ್ಥಿಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಮಕ್ಕಳ ಭವಿಷ್ಯವನ್ನು ನಿರ್ನಾಮ ಮಾಡುವುದೇ ಅವರ ಆದ್ಯತೆ ಎಂಬಂತಾಗಿದೆ. ನಮ್ಮಂತಹ ದೇಶಭಕ್ತರು ಯಾರೂ ಇಲ್ಲ ಎನ್ನುತ್ತೀರಲ್ಲ. ಕೇಸರಿ ಬಣ್ಣದ ಬದಲು ತ್ರಿವರ್ಣ ಬಣ್ಣ ಮಾಡಿ’ ಎಂದು ಒತ್ತಾಯಿಸಿದರು.

ಕೊಠಡಿಗಳಿಗೆ ಕೇಸರಿ ಬಣ್ಣ ಬಳಿದ್ರೆ ತಪ್ಪೇನು?: ಸಿಎಂ ಬೊಮ್ಮಾಯಿ

ನಾಚಿಕೆಯಾಗಬೇಕು: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಮಾತನಾಡಿ, ಕೇಸರಿ ಬಣ್ಣ ಬಳಿಯುತ್ತೇವೆ ಎನ್ನುವ ಇವರಿಗೆ ನಾಚಿಕೆಯಾಗಬೇಕು. ಶಾಲೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಶಿಕ್ಷಕರ ಸಮಸ್ಯೆಯಿದೆ, ಬಿಸಿಯೂಟ ಸಮಸ್ಯೆಯಿದೆ. ಇವುಗಳನ್ನು ಬಗೆಹರಿಸುವುದು ಬಿಟ್ಟು ಬಣ್ಣ ಬಳಿಯುತ್ತೇವೆ ಎನ್ನುತ್ತಾರೆ. ನಮಗೆ ಕೇಸರಿ ಕಂಡರೆ ಭಯವಿಲ್ಲ ಗೌರವವಿದೆ. ಆದರೆ ಮಕ್ಕಳ ಮನಸ್ಸಿನಲ್ಲಿ ಶಿಕ್ಷಣದ ಹೊರತಾಗಿ ಅನ್ಯ ವಿಚಾರವನ್ನು ತುಂಬುವುದಕ್ಕೆ ಹಾಗೂ ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುವುದಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದರು.

ಕೇಸರಿ ಬಣ್ಣ ಬಿಜೆಪಿ ಗುತ್ತಿಗೆಯಲ್ಲ: ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾತನಾಡಿ, ಕೇಸರಿ ಬಣ್ಣದ ಬಗ್ಗೆ ನಮ್ಮ ವಿರೋಧವಿಲ್ಲ. ಅದು ಅವರ (ಬಿಜೆಪಿ) ಗುತ್ತಿಗೆಯಲ್ಲ. ಮಕ್ಕಳ ವಿಚಾರದಲ್ಲಿ ಚೆಲ್ಲಾಟ ಆಡುವುದನ್ನು ನಾವು ವಿರೋಧಿಸುತ್ತೇವೆ ಎಂದರು ಹೇಳಿದರು.ಕೇಸರಿ ಬಣ್ಣ ಹಚ್ಚುವ ವಿಚಾರಕ್ಕೆ ಆರ್ಕಿಟೆಕ್ಟ್ ಸಲಹೆ ಎನ್ನುತ್ತಾರೆ. ಹಾಗಾದರೆ ಗುಂಬಜ್‌ ರೀತಿಯ ಬಸ್ಸು ನಿಲ್ದಾಣ ಇವರ ಮಂತ್ರಿಗಳೇ ನಿರ್ಮಾಣ ಮಾಡಿದ್ದರಾ? ಈಗ ಅವುಗಳನ್ನು ಧ್ವಂಸ ಮಾಡುವ ಮಾತನಾಡುತ್ತಾರೆ. ಪ್ರತಾಪ್‌ ಸಿಂಹ ಅವರದ್ದು ಬರೀ ಧ್ವಂಸ ಮಾಡುವುದೇ ಪ್ರವೃತ್ತಿ ಎಂದರು.

ನಾನು ಸಿಎಂ ಆಗ್ಬೇಕಾದ್ರೆ ಕಾಂಗ್ರೆಸ್‌ಗೆ ಮತ ಹಾಕಿ: ಸಿದ್ದರಾಮಯ್ಯ

ಸರ್ಕಾರಿ ಕಟ್ಟಡವನ್ನೂ ಕೆಡವುತ್ತೀರಾ: ಗುಂಬಜ್‌ ಮಾದರಿಯ ಬಸ್ಸು ಶೆಲ್ಟರ್‌ ಒಡೆದು ಹಾಕುವ ಪ್ರತಾಪ್‌ಸಿಂಹ ಹೇಳಿಕೆಗೆ, ಪ್ರತಾಪ್‌ ಸಿಂಹ ಒಬ್ಬ ಸಂಸದ. ಅವರಿಗೆ ತಾನು ಏನು ಮಾತನಾಡುತ್ತಿದ್ದೇನೆ ಎಂಬ ಜ್ಞಾನ ಇರಬೇಕು. ಗುಂಬಜ್‌ ರೀತಿಯ ಸರ್ಕಾರಿ ಕಟ್ಟಡಗಳು ಇವೆ. ಅವುಗಳನ್ನೂ ಒಡೆದು ಹಾಕುತ್ತಾರಾ? ಅದಕ್ಕೆ ಹೇಳಿಕೆ ಕೊಡಲಿ ನೋಡೋಣ ಎಂದು ಸಲೀಂ ಸವಾಲು ಹಾಕಿದರು.