Asianet Suvarna News Asianet Suvarna News

ಉಪಚುನಾವಣೆಯಲ್ಲಿ ಜೆಡಿಎಸ್‌ ದೋಸ್ತಿ ಬೇಡ: ಕಾಂಗ್ರೆಸ್ ಮುಖಂಡರು

ಕೆಪಿ​ಸಿಸಿ ಕಚೇ​ರಿ​ಯಲ್ಲಿ ಮಂಗ​ಳವಾರ ರಾಜ್ಯ ಉಸ್ತು​ವಾರಿ ಕೆ.ಸಿ. ವೇಣು​ಗೋ​ಪಾಲ್‌ ನೇತೃ​ತ್ವ​ದಲ್ಲಿ ರಾಮ​ನ​ಗರ ಹಾಗೂ ಜಮ​ಖಂಡಿ ವಿಧಾ​ನ​ಸಭಾ ಕ್ಷೇತ್ರ, ಮಂಡ್ಯ, ಬಳ್ಳಾರಿ ಹಾಗೂ ಶಿವ​ಮೊಗ್ಗ ಲೋಕ​ಸಭಾ ಕ್ಷೇತ್ರ​ಗಳ ಉಪ ಚುನಾ​ವ​ಣೆಗೆ ಅಭ್ಯರ್ಥಿ ಆಯ್ಕೆಗೆ ನಡೆದ ಸಭೆ​ಯ​ಲ್ಲಿ ರಾಮ​ನ​ಗರ ಹಾಗೂ ಮಂಡ್ಯ ಕ್ಷೇತ್ರ​ಗಳ ಸ್ಥಳೀಯ ನಾಯ​ಕರು ಮೈತ್ರಿಗೆ ಪ್ರಬಲ ವಿರೋಧ ವ್ಯಕ್ತ​ಪ​ಡಿ​ಸಿ​ದರು 

Congress leaders oppose  alliance with JDS in Karnataka byelection
Author
Bengaluru, First Published Oct 13, 2018, 8:57 AM IST
  • Facebook
  • Twitter
  • Whatsapp

ಬೆಂಗ​ಳೂರು: ಉಪ ಚುನಾ​ವ​ಣೆ ಮೈತ್ರಿ​ಗಾಗಿ ರಾಮ​ನ​ಗರ ವಿಧಾ​ನ​ಸಭೆ ಕ್ಷೇತ್ರ ಹಾಗೂ ಮಂಡ್ಯ ಲೋಕ​ಸಭಾ ಕ್ಷೇತ್ರಗಳನ್ನು ಜೆಡಿ​ಎ​ಸ್‌ಗೆ ಬಿಟ್ಟು​ಕೊ​ಡುವ ಪ್ರಸ್ತಾ​ಪಕ್ಕೆ ಸ್ಥಳೀಯ ಕಾಂಗ್ರೆ​ಸ್‌ ನಾಯ​ಕ​ರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕಾಂಗ್ರೆ​ಸ್‌-ಜೆಡಿ​ಎಸ್‌ ಮೈತ್ರಿ ವಿಧಾ​ನ​ಸೌ​ಧಕ್ಕೆ ಸೀಮಿ​ತ​ವಾ​ಗಲಿ, ಅದು ಈ ಎರಡು ಕ್ಷೇತ್ರ​ಗಳ ಮಟ್ಟಕ್ಕೆ ಬಂದರೆ ರಾಮ​ನಗರ ಹಾಗೂ ಮಂಡ್ಯ ಜಿಲ್ಲೆ​ಗ​ಳಲ್ಲಿ ಕಾರ್ಯ​ಕ​ರ್ತರು ಸಂಕ​ಷ್ಟಕ್ಕೆ ಸಿಲು​ಕು​ತ್ತಾರೆ. ಪಕ್ಷದ ಭವಿಷ್ಯ ಮಸು​ಕಾ​ಗು​ತ್ತ​ದೆ ಎಂಬ ಪ್ರಬಲ ವಾದ ಮಂಡಿ​ಸಿ​ದ್ದಾ​ರೆ.

ಕೆಪಿ​ಸಿಸಿ ಕಚೇ​ರಿ​ಯಲ್ಲಿ ಮಂಗ​ಳವಾರ ರಾಜ್ಯ ಉಸ್ತು​ವಾರಿ ಕೆ.ಸಿ. ವೇಣು​ಗೋ​ಪಾಲ್‌ ನೇತೃ​ತ್ವ​ದಲ್ಲಿ ರಾಮ​ನ​ಗರ ಹಾಗೂ ಜಮ​ಖಂಡಿ ವಿಧಾ​ನ​ಸಭಾ ಕ್ಷೇತ್ರ, ಮಂಡ್ಯ, ಬಳ್ಳಾರಿ ಹಾಗೂ ಶಿವ​ಮೊಗ್ಗ ಲೋಕ​ಸಭಾ ಕ್ಷೇತ್ರ​ಗಳ ಉಪ ಚುನಾ​ವ​ಣೆಗೆ ಅಭ್ಯರ್ಥಿ ಆಯ್ಕೆಗೆ ನಡೆದ ಸಭೆ​ಯ​ಲ್ಲಿ ರಾಮ​ನ​ಗರ ಹಾಗೂ ಮಂಡ್ಯ ಕ್ಷೇತ್ರ​ಗಳ ಸ್ಥಳೀಯ ನಾಯ​ಕರು ಮೈತ್ರಿಗೆ ಪ್ರಬಲ ವಿರೋಧ ವ್ಯಕ್ತ​ಪ​ಡಿ​ಸಿ​ದರು ಎಂದು ಮೂಲ​ಗಳು ತಿಳಿ​ಸಿ​ವೆ.

ಅಲ್ಲದೆ, ರಾಜ್ಯ​ದಲ್ಲಿ ಕಾಂಗ್ರೆಸ್‌ ಕೂಡ ಭಾಗಿ​ದಾರ ಆಗಿ​ರುವ ಸಮ್ಮಿಶ್ರ ಸರ್ಕಾರ ಅಸ್ತಿ​ತ್ವ​ದಲ್ಲಿ ಇದ್ದರೂ ಜೆಡಿ​ಎಸ್‌ ನಾಯ​ಕರು ಜೆಡಿ​ಎಸ್‌ ಪಕ್ಷವೇ ಅಧಿ​ಕಾ​ರ​ದ​ಲ್ಲಿದೆ ಎಂದು ಬಿಂಬಿ​ಸು​ತ್ತಿದ್ದಾರೆ. ಸ್ಥಳೀಯ ಕಾಂಗ್ರೆಸ್‌ ನಾಯ​ಕರು ಹಾಗೂ ಕಾರ್ಯ​ಕ​ರ್ತ​ರಿಗೆ ಅಸ್ತಿತ್ವವೇ ಇಲ್ಲ​ದಂತೆ ಮಾಡು​ತ್ತಿ​ದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯ​ಕ​ರ್ತ​ರನ್ನು ನಿರ್ಲಕ್ಷ್ಯ ಮಾಡು​ವುದು ಮಾತ್ರ​ವಲ್ಲ, ಕೆಲ ಕಾರ್ಯ​ಕ​ರ್ತರ ಮೇಲೆ ಸುಳ್ಳು ದೂರು​ಗ​ಳನ್ನು ಕೂಡ ದಾಖ​ಲಿ​ಸು​ತ್ತಿ​ದ್ದಾರೆ. ತನ್ಮೂ​ಲಕ ಕಾಂಗ್ರೆ​ಸ್‌ನ ಶಕ್ತಿ​ಯನ್ನೇ ಕುಂದಿ​ಸುವ ಪ್ರಯತ್ನ ಜೆಡಿ​ಎ​ಸ್‌​ನಿಂದ ನಡೆ​ದಿ​ದೆ. ಇದು ಹೀಗೇ ಮುಂದು​ವ​ರೆ​ದರೆ ಎರಡು ಜಿಲ್ಲೆ​ಗ​ಳಲ್ಲಿ ಕಾಂಗ್ರೆಸ್‌ಗೆ ಭವಿ​ಷ್ಯವೇ ಇಲ್ಲ​ದಂತಾ​ಗು​ತ್ತದೆ ಎಂಬ ಆತಂಕ​ವನ್ನು ಈ ನಾಯ​ಕರು ವ್ಯಕ್ತ​ಪ​ಡಿ​ಸಿ​ದರು ಎನ್ನ​ಲಾ​ಗಿದೆ.

ಇದಕ್ಕೆ ಪ್ರತಿ​ಯಾಗಿ ರಾಜ್ಯ ಉಸ್ತು​ವಾರಿ ಕೆ.ಸಿ. ವೇಣು​ಗೋ​ಪಾಲ್‌ ಹಾಗೂ ರಾಜ್ಯ ನಾಯ​ಕರು ಸಮ್ಮಿಶ್ರ ಸರ್ಕಾರ ಅಸ್ತಿ​ತ್ವ​ದ​ಲ್ಲಿ​ರುವ ಹಿನ್ನೆ​ಲೆ​ಯಲ್ಲಿ ಮತ್ತು ಹೈಕ​ಮಾಂಡ್‌ ಸೂಚನೆಯೂ ಇರುವ ಕಾರಣ ಮೈತ್ರಿ ಅನಿ​ವಾರ್ಯ ಎಂದು ಸ್ಥಳೀಯ ನಾಯ​ಕ​ರಿಗೆ ಮನ​ವ​ರಿಕೆ ಮಾಡಿ​ಕೊ​ಡಲು ಹೆಣ​ಗ​ಬೇ​ಕಾ​ಯಿತು. ಅಂತಿ​ಮ​ವಾಗಿ ಮೈತ್ರಿ ಹೇಗೆ ಕ್ಷೇತ್ರ​ದಲ್ಲಿ ಪಕ್ಷದ ಶಕ್ತಿ​ಯನ್ನು ಕುಂದಿ​ಸು​ತ್ತಿದೆ ಎಂಬು​ದನ್ನು ನಿಮ್ಮ ಗಮ​ನಕ್ಕೆ ತಂದಿ​ದ್ದೇವೆ. ಮೈತ್ರಿ ಮಾಡಿ​ಕೊ​ಳ್ಳು​ವು​ದೇ ಆದರೆ, ಸ್ಥಳೀಯವಾಗಿ ಕಾಂಗ್ರೆಸ್‌ ನಾಯ​ಕರು ಹಾಗೂ ಕಾರ್ಯ​ಕ​ರ್ತರ ರಕ್ಷ​ಣೆ​ ಮಾಡಲು ಅನು​ವಾ​ಗುವಂತಹ ಷರ​ತ್ತು​ಗ​ಳನ್ನು ಜೆಡಿ​ಎಸ್‌ ಮುಂದಿ​ಡ​ಬೇಕು. ಇದನ್ನು ಮಾಡದೇ ಜೆಡಿ​ಎಸ್‌ ಹೇಳಿ​ದ್ದ​ಕ್ಕೆಲ್ಲ ಮಣೆ ಹಾಕಿ​ದರೆ ಮುಂದಾ​ಗುವ ಅನಾ​ಹು​ತ​ಗ​ಳಿಗೆ ತಾವು ಹೊಣೆ​ಯಲ್ಲ ಎಂಬ ನೇರ ಎಚ್ಚ​ರಿ​ಕೆ​ಯನ್ನು ಸ್ಥಳೀಯ ನಾಯ​ಕರು ನೀಡಿ​ದರು ಎಂದು ಮೂಲ​ಗಳು ಹೇಳಿ​ವೆ.

ರಾಮ​ನ​ಗ​ರದಲ್ಲಿ ಭಾರಿ ವಿರೋಧ:

ಉಪ ಚುನಾ​ವ​ಣೆ​ಗೆ ಅಭ್ಯ​ರ್ಥಿ​ಗಳ ಆಯ್ಕೆಗೆ ದಿನ​ವಿಡೀ ನಡೆದ ಸರಣಿ ಸಭೆ​ಗಳ ಆರಂಭ ರಾಮ​ನ​ಗರ ವಿಧಾ​ನ​ಸಭಾ ಕ್ಷೇತ್ರದ ನಾಯ​ಕ​ರಿಂದ ಆಯಿತು. ಈ ಸಭೆಯಲ್ಲಿ ಕ್ಷೇತ್ರ​ದಿಂದ ಸಚಿವ ಡಿ.ಕೆ. ಶಿವ​ಕು​ಮಾರ್‌, ಸಂಸದ ಡಿ.ಕೆ. ಸುರೇಶ್‌, ಸ್ಥಳೀಯ ನಾಯ​ಕ​ರಾದ ಸಿ.ಎಂ. ಲಿಂಗಪ್ಪ, ಕಳೆದ ಬಾರಿಯ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌ ಸೇರಿ​ದಂತೆ ಪ್ರಮುಖ ನಾಯ​ಕರು ಪಾಲ್ಗೊಂಡಿ​ದ್ದರು. ಸಭೆ​ಯಲ್ಲಿ ಈ ನಾಯ​ಕರು ಪ್ರಬ​ಲ​ವಾಗಿ ಮೈತ್ರಿ​ಯನ್ನು ವಿರೋ​ಧಿ​ಸಿ​ದರು.

ಜೆಡಿ​ಎ​ಸ್‌ ನಾಯ​ಕತ್ವ ಹೇಗೆ ಕ್ಷೇತ್ರ​ದಲ್ಲಿ ಕಾಂಗ್ರೆಸ್‌ ಕಾರ್ಯ​ಕ​ರ್ತ​ರನ್ನು ದಮ​ನಿ​ಸು​ತ್ತಿದೆ ಎಂಬುದನ್ನು ಎಳೆ​ಎ​ಳೆ​ಯಾಗಿ ಬಿಡಿ​ಸಿಟ್ಟನಾಯ​ಕರು ಮೈತ್ರಿ​ಗಾಗಿ ಕ್ಷೇತ್ರ​ವನ್ನು ಜೆಡಿ​ಎ​ಸ್‌ಗೆ ಬಿಟ್ಟು​ಕೊ​ಡು​ವುದು ಕ್ಷೇತ್ರ​ದಲ್ಲಿ ಪಕ್ಷದ ಅವ​ನ​ತಿಗೆ ಕಾರ​ಣ​ವಾ​ಗು​ತ್ತದೆ. ಯಾವ ಕಾರ​ಣಕ್ಕೂ ಮೈತ್ರಿ ಮಾಡಿ​ಕೊ​ಳ್ಳ​ಬಾ​ರದು ಎಂದು ವಾದಿ​ಸಿ​ದರು ಎನ್ನ​ಲಾ​ಗಿದೆ.

ಇದರ ನಂತರ ದಿನದಂತ್ಯ​ದಲ್ಲಿ ನಡೆದ ಮಂಡ್ಯ ಲೋಕ​ಸಭಾ ಕ್ಷೇತ್ರದ ನಾಯ​ಕರ ಸಭೆ​ಯಲ್ಲೂ ಇದೇ ರೀತಿಯ ವಾದ ಮಂಡ​ನೆ​ಯಾ​ಗಿದೆ. ಸ್ಥಳೀಯ ನಾಯ​ಕ​ರಾದ ಚೆಲು​ವ​ರಾ​ಯ​ಸ್ವಾಮಿ, ರಮೇಶ್‌ ಬಂಡಿ​ಸಿ​ದ್ದೇ​ಗೌಡ, ನರೇಂದ್ರ​ಸ್ವಾಮಿ ಅವರು ಮಂಡ್ಯ ಲೋಕ​ಸಭಾ ಕ್ಷೇತ್ರ​ದಲ್ಲಿ ಕಾಂಗ್ರೆ​ಸ್‌ಗೆ ಉತ್ತಮ ಅಸ್ತಿ​ತ್ವ​ವಿದೆ. ಈ ಕ್ಷೇತ್ರ​ವನ್ನು ಜೆಡಿ​ಎಸ್‌ಗೆ ಬಿಟ್ಟು​ಕೊ​ಡು​ವುದು ಆತ್ಮ​ಹ​ತ್ಯಾ​ಕಾರಿ ಬೆಳ​ವ​ಣಿ​ಗೆ​ಯಾ​ಗು​ತ್ತದೆ. ಹೀಗಾಗಿ, ಮೈತ್ರಿಯನ್ನು ವಿಧಾ​ನ​ಸೌ​ಧಕ್ಕೆ ಸೀಮಿ​ತ​ಗೊ​ಳಿಸ​ಬೇಕು ಎಂದು ವಾದಿ​ಸಿ​ದ​ರು.

ಅಲ್ಲದೆ, ಜೆಡಿ​ಎಸ್‌ ಸ್ಥಳೀಯ ನಾಯ​ಕರು ಮಂಡ್ಯ​ದಲ್ಲಿ ಕಾಂಗ್ರೆಸ್‌ ಕಾರ್ಯ​ಕ​ರ್ತರು ಹಾಗೂ ನಾಯ​ಕ​ರನ್ನು ದಮ​ನಿ​ಸ​ತೊ​ಡ​ಗಿ​ದ್ದಾರೆ. ರಾಜ್ಯ​ದಲ್ಲಿ ಇರು​ವುದು ಜೆಡಿ​ಎಸ್‌ ಸರ್ಕಾರ ಎಂಬಂತೆ ಅವರು ವರ್ತಿ​ಸು​ತ್ತಿ​ದ್ದಾರೆ. ಇದಕ್ಕೆ ಬೆಂಬಲ ಎಂಬಂತೆ ಜೆಡಿ​ಎಸ್‌ ನಾಯ​ಕ​ರಾದ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ, ಸಚಿವ ರೇವಣ್ಣ ಹಾಗೂ ವರಿಷ್ಠ ಎಚ್‌.ಡಿ. ದೇವೇ​ಗೌಡ ಅವರು ದೆಹಲಿ ಸೇರಿ​ದಂತೆ ಪ್ರತಿ​ಯೊಂದು ಕಡೆಗೂ ತಾವೇ ಹೋಗು​ತ್ತಾರೆ. ಸಮ್ಮಿಶ್ರ ಸರ್ಕಾ​ರದ ಭಾಗಿ​ದಾ​ರ​ರಾ​ಗಿ​ರುವ ಕಾಂಗ್ರೆಸ್‌ನ ಸಚಿ​ವ​ರನ್ನು ಜೊತೆಗೆ ಒಯ್ಯು​ವು​ದಿಲ್ಲ. ತನ್ಮೂ​ಲಕ ರಾಜ್ಯ​ದಲ್ಲಿ ಜೆಡಿ​ಎಸ್‌ ಸರ್ಕಾ​ರವೇ ಇದೆ ಎಂಬಂತೆ ವರ್ತಿ​ಸು​ತ್ತಿ​ದ್ದಾ​ರೆ.

ಕ್ಷೇತ್ರ​ದ​ಲ್ಲಂತೂ ಕಾಂಗ್ರೆ​ಸ್‌ನ ಕಟ್ಟರ್‌ ಕಾರ್ಯ​ಕ​ರ್ತ​ರಿಗೆ ಕಿರು​ಕುಳ ಆರಂಭ​ವಾ​ಗಿದೆ. ನಮ್ಮ ಪಕ್ಷದ ಕಾರ್ಯ​ಕ​ರ್ತರ ಮೇಲೆ ಸುಳ್ಳು ಕೇಸ್‌​ಗ​ಳನ್ನು ಹಾಕಿ​ಸ​ಲಾ​ಗು​ತ್ತಿದೆ. ಸ್ಥಳೀಯ ಮಟ್ಟದ ಪ್ರಾಧಿ​ಕಾ​ರ​ಗಳ ನೇಮ​ಕಾತಿಯಲ್ಲಿ ಕೇವಲ ಜೆಡಿ​ಎಸ್‌ ಕಾರ್ಯ​ಕ​ರ್ತ​ರಿಗೆ ಮಾತ್ರ ಮಣೆ​ ಹಾ​ಕ​ಲಾ​ಗು​ತ್ತಿದೆ. ಕಾಂಗ್ರೆಸ್‌ ಕಾರ್ಯ​ಕ​ರ್ತ​ರ​ನ್ನು ಉದ್ದೇ​ಶ​ಪೂ​ರ್ವ​ಕ​ವಾಗಿ ದೂರ​ವಿ​ಡ​ಲಾ​ಗು​ತ್ತಿದೆ. ಹೀಗಾಗಿ ಮೈತ್ರಿ ಮಾಡಿ​ಕೊ​ಳ್ಳ​ಲೇ​ಬಾ​ರದು ಎಂದು ವಾದಿ​ಸಿ​ದರು ಎಂದು ಮೂಲ​ಗಳು ತಿಳಿ​ಸಿ​ವೆ.

ಇದಕ್ಕೆ ಪ್ರತಿ​ಯಾಗಿ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಹಾಗೂ ಉಸ್ತು​ವಾರಿ ವೇಣು​ಗೋ​ಪಾಲ್‌ ಅವರು ಹೈಕ​ಮಾಂಡ್‌ ಸೂಚನೆ ಹಿನ್ನೆ​ಲೆ​ಯಲ್ಲಿ ಮೈತ್ರಿಯ ಅನಿ​ವಾ​ರ್ಯ​ತೆ​ಯನ್ನು ಮನ​ದಟ್ಟು ಮಾಡಿ​ಕೊ​ಡಲು ಯತ್ನಿ​ಸಿ​ದ್ದಾರೆ. ಅಂತಿ​ಮ​ವಾಗಿ ಮೈತ್ರಿ ಮಾಡಿ​ಕೊ​ಳ್ಳು​ವುದೇ ಆದರೆ, ಕಾಂಗ್ರೆಸ್‌ ಕಾರ್ಯ​ಕ​ರ್ತರ ಹಿತ ಕಾಯು​ವಂತಹ ಷರ​ತ್ತು​ಗಳನ್ನು ಜೆಡಿ​ಎ​ಸ್‌ಗೆ ವಿಧಿ​ಸ​ಬೇಕು. ಈ ಹಿಂದೆ ಸಮ​ನ್ವಯ ಸಮಿತಿ ಸಭೆ​ಯಲ್ಲಿ ನಿರ್ಧಾ​ರ​ವಾ​ದಂತೆ ಸ್ಥಳೀಯ ಪ್ರಾಧಿ​ಕಾ​ರ​ಗಳ ನೇಮ​ಕಾತಿ ವೇಳೆ ಜೆಡಿ​ಎಸ್‌ ಶಾಸ​ಕ​ರಿ​ರುವ ಕ್ಷೇತ್ರ​ಗ​ಳಲ್ಲಿ ತಲಾ ಇಬ್ಬರು ಕಾಂಗ್ರೆಸ್‌ ಶಾಸ​ಕ​ರಿಗೆ ಅವಕಾಶ ನೀಡ​ಬೇಕು. ಕಾಂಗ್ರೆಸ್‌ ಕಾರ್ಯ​ಕ​ರ್ತರ ಮೇಲೆ ಹಾಕ​ಲಾ​ಗಿ​ರುವ ಸುಳ್ಳು ಕೇಸ್‌​ಗ​ಳನ್ನು ಹಿಂಪ​ಡೆ​ಯ​ಬೇಕು. ಕಾರ್ಯ​ಕ​ರ್ತರ ಶೋಷಣೆ ತಪ್ಪ​ಬೇಕು. ರಾಜ್ಯ​ದಲ್ಲಿ ಇರು​ವುದು ಸಮ್ಮಿಶ್ರ ಸರ್ಕಾರವೆಂಬ ಭಾವನೆ ಸಾಮಾ​ನ್ಯ​ರಲ್ಲಿ ಬರು​ವಂತೆ ಜೆಡಿ​ಎಸ್‌ ನಾಯ​ಕರ ನಡ​ವ​ಳಿಕೆ ಇರು​ವಂತೆ ನೋಡಿ​ಕೊ​ಳ್ಳ​ಬೇಕು ಎಂದು ಆಗ್ರ​ಹಿ​ಸಿ​ದರು ಎನ್ನ​ಲಾ​ಗಿ​ದೆ.

ಬಳ್ಳಾರಿ ಕ್ಷೇತ್ರಕ್ಕೆ ತೀವ್ರ ಪೈಪೋ​ಟಿ:

ಇದೇ ವೇಳೆ ಬಳ್ಳಾರಿ ಮೀಸಲು ಲೋಕ​ಸಭಾ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್‌ ನೀಡ​ಬೇಕು ಎಂಬ ಬಗ್ಗೆಯೂ ಚರ್ಚೆ ನಡೆ​ಸ​ಲಾ​ಯಿತು. ಸಭೆ​ಯಲ್ಲಿ ಪಾಲ್ಗೊಂಡಿದ್ದ ಶಾಸಕರಾದ ನಾಗೇಂದ್ರ, ಭೀಮಾ ನಾಯ್ಕ, ಕೆ.ಸಿ.ಕೊಂಡಯ್ಯ ಅವರು ಯಾರು ಗೆಲ್ಲ​ಬ​ಹುದು ಎಂಬ ಬಗ್ಗೆ ಚರ್ಚಿ​ಸಿ​ದರು. ಶಾಸಕ ನಾಗೇಂದ್ರ ಅವರ ಸಹೋದರ ವೆಂಕ​ಟೇಶ್‌ ಪ್ರಸಾದ್‌, ಸ್ಥಳೀಯ ನಾಯಕ ನಟ​ಕ​ಲ್ಲಪ್ಪ ಹಾಗೂ ಲೋಕೇಶ್‌ ನಾಯಕ್‌ ಅವರ ಹೆಸರು ಪ್ರಸ್ತಾ​ಪ​ವಾ​ಯಿತು. ಈ ಬಗ್ಗೆ ಸ್ಥಳೀಯ ನಾಯ​ಕ​ರಿಂದ ತೀವ್ರ ವಾದ - ಪ್ರತಿ​ವಾದ ನಡೆದ ಹಿನ್ನೆ​ಲೆ​ಯಲ್ಲಿ ಜಿಲ್ಲಾ ಉಸ್ತು​ವಾರಿ ಸಚಿವ ಡಿ.ಕೆ. ಶಿವ​ಕು​ಮಾರ್‌ ನೇತೃ​ತ್ವ​ದಲ್ಲಿ ಸಭೆ ನಡೆಸಿ ಅಭ್ಯ​ರ್ಥಿ​ಯನ್ನು ಸೂಚಿ​ಸು​ವಂತೆ ತಿಳಿ​ಸ​ಲಾ​ಯಿತು.

ಇದೇ ವೇಳೆ ಸ್ಥಳೀಯ ಕಾಂಗ್ರೆಸ್‌ ನಾಯ​ಕ​ರಲ್ಲಿ ಉಂಟಾ​ಗಿ​ರುವ ಭಿನ್ನಾ​ಭಿ​ಪ್ರಾ​ಯ​ದ ಬಗ್ಗೆ ರಾಜ್ಯ ನಾಯ​ಕರು ತೀವ್ರ ಆತಂಕ ವ್ಯಕ್ತ​ಪ​ಡಿ​ಸಿ​ದರು. ಲೋಕ​ಸಭೆ ಉಪ ಚುನಾ​ವ​ಣೆ​ಯಿಂದ ದೇಶಾ​ದ್ಯಂತ ಸಂದೇಶ ರವಾ​ನೆ​ಯಾ​ಗ​ಲಿ​ರುವ ಹಿನ್ನೆ​ಲೆ​ಯಲ್ಲಿ ಭಿನ್ನಾ​ಭಿ​ಪ್ರಾಯ ಮರೆತು ಒಗ್ಗ​ಟ್ಟಾಗಿ ಕಾಂಗ್ರೆಸ್‌ ಅಭ್ಯ​ರ್ಥಿಯ ಗೆಲು​ವಿಗೆ ಶ್ರಮಿ​ಸು​ವಂತೆ ಸೂಚಿ​ಸ​ಲಾ​ಯಿ​ತು.

ಶಿವ​ಮೊಗ್ಗ ಕ್ಷೇತ್ರ ಒಕ್ಕ​ಲಿ​ಗ ಅಭ್ಯ​ರ್ಥಿ​ಗೆ?:

ಇದಾದ ನಂತರ ಶಿವ​ಮೊಗ್ಗ ಲೋಕ​ಸಭಾ ಕ್ಷೇತ್ರದ ಟಿಕೆಟ್‌ ಹಂಚಿಕೆ ಬಗ್ಗೆ ಸಭೆ ನಡೆ​ಯಿತು. ಈ ಸಭೆ​ಯಲ್ಲಿ ಮಾಜಿ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಸೇರಿ​ದಂತೆ ಸ್ಥಳೀಯ ನಾಯ​ಕರು ಪಾಲ್ಗೊಂಡಿದ್ದರು. ಚರ್ಚೆಯ ವೇಳೆ ಈ ಬಾರಿ ಶಿವ​ಮೊ​ಗ್ಗ​ದಲ್ಲಿ ಜೆಡಿ​ಎಸ್‌ ಬೆಂಬ​ಲ ದೊರೆ​ತರೆ ಕಾಂಗ್ರೆಸ್‌ ಗೆಲ್ಲುವ ನಿರೀ​ಕ್ಷೆ​ಯಿ​ರುವ ಕಾರಣ ಕಾಂಗ್ರೆ​ಸ್‌​ನಿಂದ ಒಕ್ಕ​ಲಿಗ ಅಭ್ಯ​ರ್ಥಿ​ಯನ್ನು ಕಣಕ್ಕೆ ಇಳಿ​ಸುವ ಬಗ್ಗೆ ತೀರ್ಮಾ​ನಿ​ಸ​ಲಾ​ಯಿತು ಎನ್ನ​ಲಾ​ಗಿದೆ. ಈ ಹಿನ್ನೆ​ಲೆ​ಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾ​ಕರ್‌ ಹಾಗೂ ಮಾಜಿ ಕಾಡಾ ಅಧ್ಯಕ್ಷ ಎಚ್‌.​ಎಸ್‌. ಸುಂದರೇಶ್‌ ಅವರ ಹೆಸ​ರನ್ನು ಪರಿ​ಗ​ಣಿ​ಸ​ಲಾ​ಗಿದ್ದು, ಈ ಪೈಕಿ ಒಬ್ಬ​ರಿಗೆ ಟಿಕೆಟ್‌ ನೀಡು​ವಂತೆ ಸ್ಥಳೀಯ ನಾಯ​ಕರು ಸೂಚಿ​ಸಿ​ದರು ಎಂದು ಮೂಲ​ಗಳು ತಿಳಿ​ಸಿ​ವೆ.

ರಾಹುಲ್‌ ಬಂದ ನಂತರ ಆಖೈ​ರು

ದಿನ​ವಿಡೀ ನಡೆದ ಸಭೆ​ಯಲ್ಲಿ ಕಾಂಗ್ರೆಸ್‌ ಸ್ಪರ್ಧಿ​ಸ​ಲಿ​ರುವ ಮೂರು ಕ್ಷೇತ್ರ​ಗಳ ಪೈಕಿ ಜಮ​ಖಂಡಿ ವಿಧಾ​ನ​ಸಭಾ ಕ್ಷೇತ್ರಕ್ಕೆ ಅಕಾ​ಲಿಕ ನಿಧ​ನಕ್ಕೆ ಒಳ​ಗಾದ ಕಾಂಗ್ರೆಸ್‌ ಶಾಸಕ ಸಿದ್ದು ನ್ಯಾಮಗೌಡ ಅವರ ಪುತ್ರ ಆನಂದ ನ್ಯಾಮ​ಗೌಡಗೆ ಟಿಕೆಟ್‌ ನೀಡಲು ನಿರ್ಧ​ರಿ​ಸ​ಲಾ​ಯಿ​ತು.

ಶಿವ​ಮೊಗ್ಗ ಲೋಕ​ಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಕಿಮ್ಮನೆ ರತ್ನಾ​ಕರ ಹಾಗೂ ಸುಂದ​ರೇಶ್‌ ಅವರಿಬ್ಬರ ಪೈಕಿ ಒಬ್ಬ​ರನ್ನು ಆಯ್ಕೆ ಮಾಡಲು ತೀರ್ಮಾ​ನಿ​ಸ​ಲಾ​ಯಿತು. ಆದರೆ, ಬಳ್ಳಾರಿ ಲೋಕ​ಸಭಾ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಒಮ್ಮತ ಮೂಡದ ಕಾರಣ ಉಸ್ತು​ವಾರಿ ಸಚಿ​ವ​ರೊಂದಿಗೆ ಸ್ಥಳೀಯ ನಾಯ​ಕರು ಚರ್ಚಿಸಿ ಅಂತಿ​ಮ​ವಾಗಿ ಒಬ್ಬರ ಹೆಸ​ರನ್ನು ಸೂಚಿ​ಸು​ವಂತೆ ತಿಳಿ​ಸ​ಲಾ​ಯಿತು. ಮೂಲ​ಗಳ ಪ್ರಕಾರ ಅ.13ರಂದು ಎಐ​ಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ನಗ​ರಕ್ಕೆ ಆಗ​ಮಿ​ಸ​ಲಿದ್ದು, ಈ ವೇಳೆ ರಾಜ್ಯ ನಾಯ​ಕರು ಅವ​ರೊಂದಿಗೆ ಅಂತಿ​ಮ​ವಾಗಿ ಚರ್ಚಿಸಿ ಈ ಮೂರು ಕ್ಷೇತ್ರಗ​ಳಿಗೆ ಅಭ್ಯರ್ಥಿ​ಗ​ಳನ್ನು ಆಖೈ​ರು​ಗೊ​ಳಿ​ಸ​ಲಿ​ದ್ದಾ​ರೆ.

Follow Us:
Download App:
  • android
  • ios