ಬೆಂಗಳೂರು [ಜ.04]: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೆಚ್ಚುವರಿ ನೆರೆ ಪರಿಹಾರಕ್ಕಾಗಿ ಗೋಗರೆದರೂ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡದೇ ಹೋಗಿದ್ದು ನೋಡಿದರೆ ಯಡಿಯೂರಪ್ಪ ಅವರಿಗೆ ಕೆಟ್ಟಹೆಸರು ತಂದು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವ ಉದ್ದೇಶವಿರಬಹುದು ಎಂದು ಪ್ರತಿಪಕ್ಷ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅಲ್ಲದೆ, ಈ ನಡವಳಿಕೆ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್ಚುವರಿ ನೆರೆ ಪರಿಹಾರದ ಬಗ್ಗೆ ಯಡಿಯೂರಪ್ಪ ಅವರು ಮಾಡಿದ ಮನವಿಗೆ ಮೋದಿ ಅವರು ಸೌಜನ್ಯಕ್ಕಾದರೂ ತಮ್ಮ ಮನವಿ ಪರಿಶೀಲಿಸುತ್ತೇನೆ ಎಂದು ಹೇಳದೆ ಹೋಗಿದ್ದಾರೆ. ನನ್ನ ಪ್ರಕಾರ ಇದಕ್ಕೆ ಎರಡು ಕಾರಣ ಇರಬಹುದು. ಒಂದು- ಕೇಂದ್ರ ಸರ್ಕಾರ ದಿವಾಳಿ ಆಗಿರುವ ಹಿನ್ನೆಲೆಯಲ್ಲಿ ಈ ರೀತಿ ಹೇಳಿರಬೇಕು. ಮತ್ತೊಂದು ಕಾರಣ, ಈಗಾಗಲೇ ಬಿಜೆಪಿಯಲ್ಲಿ ಒಂದು ಗುಂಪು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ತೆಗೆಯುವ ಪ್ರಯತ್ನ ನಡೆಸುತ್ತಿದೆ. ಅದರಂತೆ ಯಡಿಯೂರಪ್ಪ ಅವರಿಗೆ ಕೆಟ್ಟಹೆಸರು ತಂದು ಅಧಿಕಾರದಿಂದ ಕೆಳಗಿಳಿಸಲು ಮೋದಿ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಹೋಗಿರಬಹುದು ಎಂದು ಹೇಳಿದರು.

ಬಹಳ ದಿನಗಳ ನಂತರ ರಾಜ್ಯಕ್ಕೆ ಬಂದಿದ್ದ ಮೋದಿ ಅವರ ಮುಂದೆ ಪಾಪ ಯಡಿಯೂರಪ್ಪ ಅವರು ಹೆಚ್ಚುವರಿ ನೆರೆ ಪರಿಹಾರಕ್ಕಾಗಿ ಗೋಗರೆದಿದ್ದಾರೆ. ರಾಜ್ಯಕ್ಕೆ 36 ಸಾವಿರ ಕೋಟಿ ರು. ಪರಿಹಾರ ಕೇಳಿದ್ದೆವು. ಆದರೆ, ನೀವು 1200 ಕೋಟಿ ರು. ಕೊಟ್ಟಿದ್ದೀರಿ. ಹೆಚ್ಚುವರಿ ಪರಿಹಾರ ಕೊಡಿ, ರಾಜ್ಯದ ನೀರಾವರಿ ಯೋಜನೆಗಳಿಗೆ 50 ಸಾವಿರ ಕೋಟಿ ರು. ಕೊಡಿ ಎಂದು ಗೋಗರೆದರು. ಆದರೆ, ಪ್ರಧಾನಿ ಮೋದಿ ಅವರು ಇಂತಹ ಗಂಭೀರ ವಿಚಾರಗಳ ಬಗ್ಗೆ ಕೊನೆಯ ಪಕ್ಷ ತಮ್ಮ ಮನವಿಯನ್ನು ಪರಿಶೀಲಿಸುತ್ತೇನೆ ಎಂದು ಕೂಡ ಪ್ರತಿಕ್ರಿಯೆ ನೀಡಲಿಲ್ಲ. ಅವರ ಈ ನಡವಳಿಕೆ ಕರ್ನಾಟಕದ ಬಗ್ಗೆ ಅವರಿಗಿರುವ ಅಸಡ್ಡೆ, ನಿರ್ಲಕ್ಷ್ಯವನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತಿದೆ ಎಂದು ಹೇಳಿದರು.

ಬಿಜೆಪಿಯವರಿಗೇ ಬಾಗಿಲು ಹಾಕಿದರು:

ಕಳೆದ ಚುನಾವಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಬಿಜೆಪಿ ಅಧಿಕಾರದಲ್ಲಿದ್ದರೆ ಕರ್ನಾಟಕದ ಭಾಗ್ಯದ ಬಾಗಿಲು ತೆರೆಯುತ್ತದೆ ಎಂದು ಮೋದಿ ಹೇಳಿ ಹೋಗಿದ್ದರು. ಆದರೆ, ಈಗ ನೆರೆ ಪರಿಹಾರ ಕೇಳಲು ಹೋದ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ನಾಯಕರಿಗೇ ಮೋದಿ ತಮ್ಮ ಮನೆಯ ಬಾಗಿಲು ತೆರೆಯುತ್ತಿಲ್ಲ ಎಂದು ಛೇಡಿಸಿದರು.

ಮೋದಿ ಐದೂವರೆ ವರ್ಷದಲ್ಲಿ ದೇಶದ ಆರ್ಥಿಕ ಪರಿಸ್ಥಿತಿಯನ್ನು ದಿವಾಳಿಯತ್ತ ತೆಗೆದುಕೊಂಡು ಹೋಗಿದ್ದಾರೆ. ಹಾಗಾಗಿಯೇ ನೆರೆ ಪರಿಹಾರಕ್ಕೆ ಹಣ ಕೊಡಲಾಗುತ್ತಿಲ್ಲ. ರಾಜ್ಯಕ್ಕೆ ಬರಬೇಕಾದ ಸಾವಿರಾರು ಕೋಟಿ ರು.ಅನುದಾನ ಕೊಡದೆ ರಾಜ್ಯ ಸರ್ಕಾರವನ್ನೂ ದಿವಾಳಿ ಮಾಡಲು ಹೊರಟಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ಶೇ.8ರಿಂದ 9ರಷ್ಟಿದ್ದ ದೇಶದ ಜಿಡಿಜಿ ನನ್ನ ಪ್ರಕಾರ ಈಗ ಶೇ.2.5ಕ್ಕೆ ಕುಸಿದಿದೆ. ಆರ್ಥಿಕ ವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ. ನಿರುದ್ಯೋಗ ತಾಂಡವವಾಡುತ್ತಿದೆ. ಬಂಡವಾಳ ಹೂಡಿಕೆಯಾಗುತ್ತಿಲ್ಲ. ಹೀಗಾಗಿಯೇ ರಾಜ್ಯಗಳಿಗೆ ಕೇಂದ್ರದಿಂದ ಬರಬೇಕಾದ ಯಾವ ಅನುದಾನವೂ ಬರುತ್ತಿಲ್ಲ ಎಂದರು.

‘ನಮ್ಮ ಬೇಡಿಕೆಗೆ ಪ್ರಧಾನಿ ಸ್ಪಂದಿಸಿದ್ದಾರೆ: ಮೌನ, ಮುನಿಸು ಎಲ್ಲವೂ ಸುಳ್ಳು’..

ಕರ್ನಾಟಕಕ್ಕೆ ಸುಮಾರು 5600 ಕೋಟಿ ರು. ಜಿಎಸ್‌ಟಿ ಬಾಕಿ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ 2700 ಕೋಟಿ ರು. ಬಾಕಿ ಕೊಟ್ಟಿಲ್ಲ. ಕುಡಿಯುವ ನೀರು, ಸ್ವಚ್ಛ ಭಾರತ ಸೇರಿದಂತೆ ಅನೇಕ ಯೋಜನೆಗಳ ಅನುದಾನ ಕೊಡಲಾಗುತ್ತಿಲ್ಲ. 36 ಸಾವಿರ ಕೋಟಿ ರು. ನೆರೆ ಪರಿಹಾರ ಕೇಳಿದರೆ ಜುಜುಬಿ 1200 ಕೋಟಿ ರು. ಕೊಡುತ್ತಾರೆ. ಸಂತ್ರಸ್ತರು ಇಂದಿಗೂ ಶೆಡ್‌ಗಳಿಲ್ಲದೆ ಶಾಲೆ, ಸಮುದಾಯ ಭವನಗಳಲ್ಲಿ ವಾಸಿಸುತ್ತಿದ್ದಾರೆ. ಬೆಳೆ ಪರಿಹಾರ ಕೊಟ್ಟಿಲ್ಲ. ಈ ಬಗ್ಗೆ ಇದ್ದಿದ್ದು ಇದ್ದಂಗೆ ಹೇಳಿದರೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವು ಸಚಿವರು ಮೈಪರಚಿಕೊಳ್ತಾರೆ. ಆ ರೇಣುಕಾಚಾರ್ಯನಿಗೆ ಆರ್ಥಿಕ ವ್ಯವಸ್ಥೆ ಬಗ್ಗೆ ಜ್ಞಾನ ಇದೆಯೋ ಇಲ್ಲವೋ ಗೊತ್ತಿಲ್ಲ. ವಿಚಿತ್ರವೆಂದರೆ ಅವರೂ ಈ ಬಗ್ಗೆ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಭಾಷಣ ಶೂರ ಮೋದಿ ಸುಳ್ಳುಗಳ ಸರದಾರ:

ಭಾಷಣದಲ್ಲಿ ಶೂರರಾದ ಮೋದಿ ಕರ್ನಾಟಕ್ಕೆ ಬಂದಾಗಲೆಲ್ಲಾ ಒಂದೊಂದು ಸುಳ್ಳು ಹೇಳಿ ಹೋಗುತ್ತಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ತುಮಕೂರಿನ ವಸಂತನರಸಾಪುರದ ಫುಡ್‌ಪಾರ್ಕ್ ಉದ್ಘಾಟಿಸಿ ಅಲ್ಲಿ 10 ಸಾವಿರ ನೇರ ಹುದ್ದೆ, 25 ಸಾವಿರ ಪರೋಕ್ಷ ಹುದ್ದೆ ಸೃಷ್ಟಿಯಾಗಲಿದೆ ಎಂದಿದ್ದರು. ಜಿಲ್ಲೆಯಲ್ಲಿ ಲಘು ಯುದ್ಧ ಹೆಲಿಕಾಪ್ಟರ್‌ ತಯಾರಿಕಾ ಘಟಕ ಆರಂಭಿಸಿ, 2018ಕ್ಕೆ ಮೊದಲ ಹೆಲಿಕಾಪ್ಟರ್‌ ಹಾರಾಡಲಿದೆ ಎಂದಿದ್ದರು. ಇವತ್ತಿನವರೆಗೂ ಅಷ್ಟುಉದ್ಯೋಗವೂ ಸೃಷ್ಟಿಯಾಗಿಲ್ಲ, ಒಂದು ಹೆಲಿಕಾಪ್ಟರೂ ಹಾರಾಡಲಿಲ್ಲ. ಇನ್ನು, ಹೇಮಾವತಿ ಮತ್ತು ನೇತ್ರಾವತಿ ನದಿ ಜೋಡಿಸುವುದಾಗಿ ಹೇಳಿದ್ದರು. ಎಲ್ಲಿ ಜೋಡಣೆಯಾಗಿದೆಯೋ ಗೊತ್ತಿಲ್ಲ. ಮಹದಾಯಿ ವಿಚಾರದಲ್ಲಿ ಮೋದಿ, ಯಡಿಯೂರಪ್ಪ, ಪ್ರಕಾಶ್‌ ಜಾವ್ಡೇಕರ್‌ ಎಲ್ಲರೂ ಸುಳ್ಳು ಹೇಳಿದರು. ದೇಶದ ಜನರಿಗೆ ಮೋದಿ ನೀಡಿದ್ದ ಭರವಸೆಗಳಲ್ಲಿ ಈ ವರೆಗೆ ಶೇ.90ಕ್ಕೂ ಹೆಚ್ಚು ಭರವಸೆಗಳು ಹಾಗೇ ಇವೆ ಎಂದು ವಾಗ್ದಾಳಿ ನಡೆಸಿದರು.

ಮೋದಿ ಭಾರತದ ಪ್ರಧಾನಿಯೋ ಪಾಕ್‌ ಪ್ರಧಾನಿಯೋ?...

ಪಾಕ್‌ ಸದೆಬಡಿದವರು ನಾವು!

ಕಾಂಗ್ರೆಸ್‌ನವರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುವ ಬದಲು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸಲಿ ಎಂದು ಮೋದಿ ಹೇಳುತ್ತಿದ್ದಾರೆ. ಪಾಕ್‌ ಒಂದು ದುಷ್ಟರಾಷ್ಟ್ರ ನಿಜ. ಆದರೆ, ಬಿಜೆಪಿಯವರು ಮಾಡುತ್ತಿರುವುದೇನು? ದೇಶದ ಸಂವಿಧಾನಕ್ಕೆ ವಿರುದ್ಧವಾಗಿ ಧರ್ಮ ಆಧಾರಿತವಾಗಿ ಕಾನೂನು ಮಾಡುತ್ತಿರುವುದು ಸರಿಯೇ? ನಿಮ್ಮಿಂದ ನಾವು ಪಾಠ ಕಲಿಯಬೇಕಿಲ್ಲ. ಮೊದಲ ಬಾರಿಗೆ ಪಾಕಿಸ್ತಾನವನ್ನು ಸಂಪುರ್ಣ ಸದೆಬಡಿದಿದ್ದು ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಎಂಬುದನ್ನು ತಿಳಿದುಕೊಳ್ಳಲಿ. ಆಗ 90 ಸಾವಿರ ಪಾಕ್‌ ಸೈನಿಕರು ಭಾರತಕ್ಕೆ ಶರಣಾಗಿದ್ದರು ಎಂಬುದನ್ನು ಮೋದಿ ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದರು.

ಭಾರತ ರತ್ನ ಘೋಷಿಸಬಹುದಿತ್ತು

ಪ್ರಧಾನಿ ಮೋದಿ ಅವರು ಸಿದ್ದಗಂಗಾ ಮಠದ ಮುಗ್ಧ ಮಕ್ಕಳ ಮುಂದೆ ಪಾಕಿಸ್ತಾನ, ಸಿಎಎ ಮತ್ತಿತರ ವಿಚಾರಗಳನ್ನು ಪ್ರಸ್ತಾಪಿಸಿ ರಾಜಕೀಯ ಭಾಷಣ ಮಾಡುವ ಬದಲು ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡುವುದಾಗಿ ಘೋಷಣೆ ಮಾಡಬಹುದಿತ್ತು ಎಂದು ಇದೇ ವೇಳೆ ಸಿದ್ದರಾಮಯ್ಯ ನುಡಿದರು.

ಸ್ವಾಮೀಜಿ ಮರಣ ಹೊಂದಿದ ಬಳಿಕ ಮೋದಿ ಮಠಕ್ಕೆ ಹೋಗಿದ್ದಾರೆ. ಈಗಲಾದರೂ ಶ್ರೀಗಳಿಗೆ ಭಾರತ ರತ್ನ ಘೋಷಿಸಬಹುದಿತ್ತಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಎರಡು ಬಾರಿ ಶ್ರೀಗಳಿಗೆ ಭಾರತರತ್ನ ನೀಡುವಂತೆ ಶಿಫಾರಸು ಮಾಡಿದ್ದೆ. ಸಾವರ್ಕರ್‌ಗೆ ಭಾರತರತ್ನ ಕೊಡ್ತೀವಿ ಎನ್ನುವ ಮೋದಿ ಶಿವಕುಮಾರ ಸ್ವಾಮೀಜಿ ಅವರಿಗೆ ಏಕೆ ಘೋಷಣೆ ಮಾಡಲಿಲ್ಲ? ಎಳೆಯ ಮಕ್ಕಳಿಗೆ ಅವರ ವಿದ್ಯಾಭ್ಯಾಸ, ಭವಿಷ್ಯದ ಬಗ್ಗೆ ನಾಲ್ಕು ಮಾತು ಹೇಳುವ ಬದಲು ಪಾಕಿಸ್ತಾನ, ಸಿಎಎ ವಿಚಾರ ಮಾತನಾಡುವ ಅಗತ್ಯವಿತ್ತೇ ಎಂದು ಪ್ರಶ್ನಿಸಿದರು.