Asianet Suvarna News Asianet Suvarna News

'20 ಲಕ್ಷ ಕೋಟಿ ರೂ. ಪ್ಯಾಕೇಜ್ 'ಕನ್ನಡಿಯೊಳಗಿನ ಗಂಟು', ಜನರ ಕೈಗೆ ಸಿಗುತ್ತಿಲ್ಲ'

ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

Congress Leader siddaramaiah Mocks pm modi RS 20 lakh crores special package
Author
Bengaluru, First Published May 17, 2020, 9:58 PM IST

ಬೆಂಗಳೂರು, (ಮೇ.17): ಬಹುಪ್ರಚಾರದ ಮೂಲಕ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ 20 ಲಕ್ಷ ರೂ. ಕೋಟಿ ಪ್ಯಾಕೇಜ್ 'ಕನ್ನಡಿಯೊಳಗಿನ ಗಂಟು' ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಪ್ರಧಾನಿ ಮೋಡಿ ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿ ಬಗ್ಗೆ ವ್ಯಂಗ್ಯವಾಡಿದ್ದಾರೆ. ಅದು ಈ ಕೆಳಗಿನಂತಿದೆ.

"ಬಹುಪ್ರಚಾರದ ಮೂಲಕ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ ರೂ.20 ಲಕ್ಷ ಕೋಟಿ ಕೊರೊನಾ ಪ್ಯಾಕೇಜ್ 'ಕನ್ನಡಿಯೊಳಗಿನ ಗಂಟು' ಅಷ್ಟೆ. ಟಿವಿ ಪರದೆಯಲ್ಲಿ,ಪತ್ರಿಕೆಯ ಪುಟದಲ್ಲಿ ಕಾಣುತ್ತಿದೆ, ಜನರ ಕೈಗೆ ಸಿಗುತ್ತಿಲ್ಲ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 5 ಕಂತುಗಳಲ್ಲಿ ಬಿಚ್ಚಿಟ್ಟ ಪ್ಯಾಕೇಜ್ ಅಂಕಿ ಅಂಶಗಳ ಕಸರತ್ತು.ಹಳೆಯ ಸರಕಿಗೆ ಹೊಸ ಹೊದಿಕೆ ಎಂದಿದ್ದಾರೆ.

"ಕೊರೊನಾ ಹಾವಳಿಯಿಂದ ದೇಶ ಅತ್ಯಂತ ದೊಡ್ಡ ಮಾನವೀಯತೆಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಲಕ್ಷಾಂತರ ವಲಸೆ ಕಾರ್ಮಿಕರು, ಮಹಿಳೆಯರು, ಮಕ್ಕಳು ಊರು ಸೇರಲು ಸಾವು-ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಈ ಜನರ ಪ್ರಸ್ತಾವವೇ ಇಲ್ಲದ ಪ್ಯಾಕೇಜ್ 'ಬೆತ್ತಲೆ ಮನುಷ್ಯನ ಮುಂದೆ ಅರಸನ ಬಟ್ಟೆಗಳ ಮೆರವಣಿಗೆ' ಅಷ್ಟೆ.

"ಜನರ ಜೇಬಿಗೆ ದುಡ್ಡು ಹಾಕಿ ಎಂದು ನೊಬೆಲ್ ಪ್ರಶಸ್ತಿ ವಿಜೇತ ವಿದ್ವಾಂಸರು, ಪ್ರಖ್ಯಾತ ಆರ್ಥಿಕ ತಜ್ಞರು ಹೇಳುತ್ತಿದ್ದರೆ,ಪ್ರಧಾನಿ ಮೋದಿ ಅವರು ಖಾಲಿಯಾಗಿರುವ ಸರ್ಕಾರದ ಜೇಬು ತುಂಬಲು ಹೊರಟಿದ್ದಾರೆ.ಇದರಿಂದ ಬಡವರಿಗೆ,ಹಸಿದ ಹೊಟ್ಟೆಗಳಿಗೆ, ಕಾರ್ಮಿಕರಿಗೆ,ರೈತರಿಗೆ, ಸಣ್ಣ ವ್ಯಾಪಾರಿಗಳಿಗೆ ಸಿಕ್ಕಿದೆಷ್ಟು?" ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ "ದೇಶದಲ್ಲಿ ಗುರುತಿಸಲಾದ 13 ಕೋಟಿ ಬಡವರಿಗೆ ಮಾಸಿಕ ರೂ.5000 ನೀಡಿದರೆ ಆಗುವ ವೆಚ್ಚ ರೂ.65,000 ಕೋಟಿ. ರೂ.7000 ನೀಡಿದರೆ ಆಗುವ ವೆಚ್ಚ 97,500 ಕೋಟಿ.ಇಷ್ಟು ಕೊಟ್ಟು ಪುಣ್ಯ ಕಟ್ಕೊಳ್ಳಿ ಎಂದು ನಮ್ಮ ಪಕ್ಷ ಹೇಳುತ್ತಲೇ ಇದೆ. ಇಷ್ಟನ್ನೂ ನೀಡಲು ಸಾಧ್ಯ ಇಲ್ಲದಷ್ಟು‌ ಸರ್ಕಾರ ದಿವಾಳಿ‌ ಆಗಿದೆಯೇ? ನರೇಗಾ ಯೋಜನೆಯ ಕೆಲಸದ ದಿನಗಳನ್ನು 200ಕ್ಕೆ ಹೆಚ್ಚಿಸಿ ಮತ್ತು ಈ ಯೋಜನೆಯನ್ನು ನಗರಪ್ರದೇಶದ ಬಡವರಿಗೂ ವಿಸ್ತರಿಸಿ ಎಂದು ಪ್ರಾರಂಭದಿಂದಲೇ ನಮ್ಮ ಪಕ್ಷ ಹೇಳುತ್ತಲೇ ಬಂದಿದೆ. ಲಕ್ಷ ಕೋಟಿಗಳ ಪ್ಯಾಕೇಜ್ ನಲ್ಲಿ ಇದರ ಪ್ರಸ್ತಾವವೇ ಇಲ್ಲ." ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಮುಂದುವರಿದು "ಮುಂಗಾರು ಬೆಳೆಯ ಸಿದ್ದತೆಯಲ್ಲಿರುವ ರೈತರು ಈಗಾಗಲೇ ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲದೆ ದಿವಾಳಿಯಾಗಿದ್ದಾರೆ.ಅವರ ಹಳೆ ಸಾಲ ಮನ್ನಾ ಮಾಡಿ,ರಸಗೊಬ್ಬರ, ಕ್ರಿಮಿನಾಶಕ ಮತ್ತು ಕೃಷಿ ಸಲಕರಣೆಗಳ ಮೇಲಿನ ಜಿಎಸ್ ಟಿ ರದ್ದುಪಡಿಸಿ ಎಂಬ ಬೇಡಿಕೆ ಬಗ್ಗೆ ಪ್ರಧಾನಿಗಳು ಮೌನವಾಗಿದ್ದಾರೆ. ಅತಿಸಣ್ಣ,ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಆರ್ಥಿಕ ನೆರವಿನ ಪ್ಯಾಕೇಜ್ ಮೇಲ್ನೋಟಕ್ಕೆ ಬಂಪರ್ ಕೊಡುಗೆ ಎಂದು ಅನಿಸಿದರೂ ಒಳಗಿನ ಗುಟ್ಟು ಬೇರೆ ಇದೆ.

ದೇಶದಲ್ಲಿರುವ 6.2 ಲಕ್ಷ ಕೋಟಿ ಕಿರುಉದ್ದಿಮೆಗಳಲ್ಲಿ 45 ಲಕ್ಷ ದೊಡ್ಡಗಾತ್ರದ ಕಿರುಉದ್ದಿಮೆಗಳಿಗೆ ಮಾತ್ರ ಈ ನೆರವು ಲಭ್ಯ. ಉಳಿದವರ ಗತಿ ಏನು? ಸಣ್ಣ ಕೈಗಾರಿಕೆಗಳಿಗೆ ಸಾಲ, ಸಾಲಕ್ಕೆ ಖಾತರಿ ನೀಡಿಕೆಯ ಬಗ್ಗೆ ಪ್ಯಾಕೇಜ್ ಹೇಳಿದೆ. ಉತ್ಪಾದನೆ ಇಲ್ಲದೆ ಖಾಲಿ ಬಿದ್ದಿರುವ ಕೈಗಾರಿಕೆಗಳಿಗೆ ಸಾಲ‌ಮಾಡುವ ಶಕ್ತಿ ಎಲ್ಲಿದೆ?

ಕಾರ್ಮಿಕರ ಸಂಬಳ ನೀಡಿಕೆಗೆ ನೆರವು,ಹಳೆ ಸಾಲದ ಮೇಲಿನ ಬಡ್ಡಿ ಮನ್ನಾ ಮೊದಲಾದ ನೆರವಿನಿಂದ ಮಾತ್ರ ಸಣ್ಣ ಕೈಗಾರಿಕೆಗಳ ರಕ್ಷಣೆ ಸಾಧ್ಯ. ದೇಶದಲ್ಲಿ ಜನ ರಾಜ್ಯದಿಂದ ರಾಜ್ಯಕ್ಕೆ, ಜಿಲ್ಲೆಯಿಂದ ಜಿಲ್ಲೆಗೆ ಹೋಗಲು ಪರದಾಡುತ್ತಿದ್ದಾರೆ.ಕೇಂದ್ರ ಸರ್ಕಾರ ಆಕಾಶದಲ್ಲಿ ವಿಮಾನ ಸಂಚಾರ ವ್ಯವಸ್ಥೆಯನ್ನು ಸುಲಭ ಮಾಡಿ ದುಡ್ಡು ಮಾಡುವ ಯೋಚನೆಯಲ್ಲಿದೆ. ಇದು ಹಸಿದ ಹೊಟ್ಟೆಗಳ ಅಪಹಾಸ್ಯವಲ್ಲದೆ ಇನ್ನೇನು?

"ದೇಶಪ್ರೇಮದ ವಾರಸುದಾರರು ತಾವೆಂದು‌ ಸಾರಿಸಾರಿ ಹೇಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈಗ ರಕ್ಷಣಾ ಇಲಾಖೆಯ FDI ಮಿತಿಯನ್ನು ಶೇ 74ಕ್ಕೆ ಹೆಚ್ಚಿಸುವ ಮೂಲಕ ದೇಶದ ಭದ್ರತೆಯ ಜೊತೆ ರಾಜಿ ಮಾಡಲು ಹೊರಟಿದ್ದಾರೆ. ಇದೇನಾ ದೇಶ ಪ್ರೇಮ? " ಎಂದು ಸಿದ್ದರಾಮಯ್ಯ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios