ಬಿಜೆಪಿ ಅಂದ್ರೆ ಭ್ರಷ್ಟ ಜನತಾ ಪಾರ್ಟಿ, ಭ್ರಷ್ಟಶೂರ ಬೊಮ್ಮಾಯಿ: ಸುರ್ಜೆವಾಲಾ ಟೀಕೆ

ಬಿಜೆಪಿ ಅಂದ್ರೆ, ಭ್ರಷ್ಟ ಜನತಾ ಪಾರ್ಟಿ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಭ್ರಷ್ಟಶೂರ ಬೊಮ್ಮಾಯಿ ಎಂದು ಕಾಂಗ್ರೆಸ್‌ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ವಾಗ್ದಾಳಿ ನಡೆಸಿದರು. 

Congress Leader Randeep Singh Surjewala Outraged Against BJP Govt At Chikkamagaluru gvd

ಚಿಕ್ಕಮಗಳೂರು (ಮಾ.04): ಬಿಜೆಪಿ ಅಂದ್ರೆ, ಭ್ರಷ್ಟ ಜನತಾ ಪಾರ್ಟಿ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಭ್ರಷ್ಟಶೂರ ಬೊಮ್ಮಾಯಿ ಎಂದು ಕಾಂಗ್ರೆಸ್‌ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ವಾಗ್ದಾಳಿ ನಡೆಸಿದರು. ಶುಕ್ರವಾರ ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕರ್ನಾಟಕ ರಾಜ್ಯದಲ್ಲಿರೋದು 40 ಪರ್ಸೆಂಟ್‌ ಸರ್ಕಾರ. ಇದು, ಇಡೀ ರಾಷ್ಟ್ರಕ್ಕೆ ಗೊತ್ತಿರುವ ವಿಷಯ. ಈ ರಾಜ್ಯದ ಸಿಎಂ ಬಸವರಾಜ್‌ ಬೊಮ್ಮಾಯಿ ಯಾವುದೇ ರಾಜ್ಯಕ್ಕೆ ಹೋಗಲಿ ಅಲ್ಲಿನ ಜನ ಅವರಿಗೆ 40 ಪರ್ಸೆಂಟ್‌ ಬೋರ್ಡ್‌ ಹಾಕಿ ಸ್ವಾಗತ ಕೋರುತ್ತಾರೆ. 

ಅವರಿಗೆ ಪೇ ಸಿಎಂ ಹೆಸರೂ ಇದೆ ಎಂದು ಗಂಭೀರ ಆರೋಪ ಮಾಡಿದರು. ಗುತ್ತಿಗೆ ಬಿಲ್‌ ಪಡೆಯಲು ಸಚಿವರಿಗೆ, ಶಾಸಕರಿಗೆ 40 ಪರ್ಸೆಂಟ್‌ ಕಮಿಷನ್‌ ಕೊಡಬೇಕಾದ ಪರಿಸ್ಥಿತಿ ಕರ್ನಾಟಕದಲ್ಲಿದೆ ಎಂದು 50 ಸಾವಿರ ಸದಸ್ಯರನ್ನು ಹೊಂದಿದ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದರು. ಪ್ರಧಾನಿಯವರು ಕರ್ನಾಟಕಕ್ಕೆ 8 ಬಾರಿ ಬಂದು ಹೋಗಿದ್ದರೂ ಭ್ರಷ್ಟಾಚಾರ ಆರೋಪದ ಬಗ್ಗೆ ಚಕಾರ ಎತ್ತಿಲ್ಲ ಎಂದು ಆಕ್ಷೇಪಿಸಿದರು. 40 ಪರ್ಸೆಂಟ್‌ ಕಮಿಷನ್‌ ಕೊಡದಿದ್ದರಿಂದ ಬಿಲ್‌ ಬಿಡುಗಡೆಯಾಗಿಲ್ಲ ಎಂದು ಬೆಳಗಾವಿ ಬಿಜೆಪಿ ಕಾರ್ಯಕರ್ತ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಮಾಡಿಕೊಂಡರು.

ಪ್ರಧಾನಿ ಮೋದಿ ಸಮ್ಮುಖ ಯಾವ ನಾಯಕರೂ ಪಕ್ಷ ಸೇರೋಲ್ಲ: ಕೇಂದ್ರ ಸಚಿವ ಜೋಶಿ

ಅವರ ಮನೆಗೆ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್‌ನ ಹಲವು ನಾಯಕರು ಭೇಟಿ ನೀಡಿ ಸಾಂತ್ವನ ಹೇಳಿದ್ದರು.ಅವರ ಕುಟುಂಬ ತುಂಬಾ ಕಷ್ಟದಲ್ಲಿದೆ. ಪ್ರಧಾನಿ ಬೆಳಗಾವಿಗೆ ಬಂದಾಗ ನೊಂದ ಕುಟುಂಬವನ್ನು ಭೇಟಿ ಮಾಡದೆ ಹೋಗಿದ್ದಾರೆ ಎಂದರು. ತುಮಕೂರು,ಬೆಂಗಳೂರಿನಲ್ಲಿ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡರು. ಸಿಎಂ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಅವರಿಗೆ ದುಡ್ಡಿನ ದಾಹ ಇದ್ರೆ, ಕಾಂಗ್ರೆಸ್‌ ಪಕ್ಷ ಮನೆ ಮನೆಗಳಿಗೆ ತೆರಳಿ ಹಣ ಸಂಗ್ರಹ ಮಾಡಿ ಅವರಿಗೆ ಕೊಡಲು ಸಿದ್ಧವಿದೆ ಎಂದು ವಾಗ್ದಾಳಿ ನಡೆಸಿದರು.

ಪೊಲೀಸ್‌ ಸಬ್‌ ಇನ್ಸ್‌ಸ್ಪೆಕ್ಟರ್‌ ಪೋಸ್ಟಿಂಗ್‌ಗೆ ಲಂಚ, ಖಾಸಗಿ ಶಾಲೆಗಳ ಅನುದಾನ ಮಂಜೂರಿಗೆ ಕಮಿಷನ್‌, ಇಷ್ಟೆಅಲ್ಲದೆ, ಮಠಗಳ ಅನುದಾನ ಬಿಡುಗಡೆಗೆ ಶೇ.10 ರಿಂದ 30 ರಷ್ಟುಕಮಿಷನ್‌, ಸಹಾಯಕ ಉಪನ್ಯಾಸಕರ ನೇಮಕಾತಿ, ವಿವಿಧ ಇಲಾಖೆಗಳ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌,ಜ್ಯೂನಿಯರ್‌ ಎಂಜಿನಿಯರ್‌ ನೇಮಕಾತಿ, ಡಿಸಿಸಿ ಬ್ಯಾಂಕಿನ ಖಾಲಿ ಹುದ್ದೆಗಳ ಭರ್ತಿ, ಪೌರ ಕಾರ್ಮಿಕರು ಹೀಗೆ ಹುದ್ದೆಗಳಿಗೆ ಹಣ ಪಡೆದು ಭರ್ತಿ ಮಾಡಲಾಗಿದೆ. ರೈತ ಮಕ್ಕಳು ಜಮೀನು ಮಾರಿ ಲಂಚ ಕೊಟ್ಟು ಸರ್ಕಾರಿ ಕೆಲಸಕ್ಕೆ ಸೇರುವದ ಪರಿಸ್ಥಿತಿ ಬಿಜೆಪಿ ನಿರ್ಮಾಣ ಮಾಡಿದೆ ದೂರಿದರು.

ಪೊಲೀಸ್‌ ಸಬ್‌ಇನ್ಸ್‌ಸ್ಪೆಕ್ಟರ್‌ ನೇಮಕಾತಿ ಅಕ್ರಮ ಸಂಬಂಧ ಓರ್ವ ಹಿರಿಯ ಪೊಲೀಸ್‌ ಅಧಿಕಾರಿ ಜೈಲು ಪಾಲಾಗಿದ್ದಾರೆ. ಈ ಪ್ರಕರಣ ನಡೆದ ಸಂದರ್ಭದಲ್ಲಿ ರಾಜ್ಯದಲ್ಲಿ ಬೊಮ್ಮಾಯಿ ಗೃಹ ಸಚಿವರಾಗಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಕೆಎಸ್‌ಡಿಎಲ್‌ ಟೆಂಡರ್‌ ಪಡೆಯಲು ಬಿಜೆಪಿ ಶಾಸಕ ಮಾಡಲ್‌ ವಿರೂಪಾಕ್ಷಪ್ಪ ಅವರ ಪುತ್ರ 40 ಲಕ್ಷ ರು. ಲಂಚ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾರೆ. ಅವರ ಮನೆ ತಪಾಸಣೆಯಲ್ಲಿ ಸುಮಾರು 6 ಕೋಟಿ ರು. ಸಿಕ್ಕಿದೆ. ಈ ಹಿಂದೆ ಪ್ರಧಾನಿ ಮೋದಿಯವರು ಮಾತನಾಡುವಾಗ ನಾನು ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ ಎಂದಿದ್ದರು, ಆದರೆ, ಅವರದೇ ಪಕ್ಷದ ಸಚಿವರು, ಶಾಸಕರು ಹಣ ತಿಂದು ಲೂಟಿ ಮಾಡುತ್ತಿದ್ದಾರೆ. ಇದು, ಭ್ರಷ್ಟಜನತಾ ಪಾರ್ಟಿ, ಭ್ರಷ್ಟಶೂರ ಬೊಮ್ಮಾಯಿ ಎಂದು ಆರೋಪಿಸಿದರು.

ಲೋಕಾಯುಕ್ತ ದಾಳಿಗೆ ಸರ್ಕಾರವೇ ಸೂಚನೆ ನೀಡಿತ್ತಾ?: ಶಾಸಕ ಬೋಪಯ್ಯ

ಬಸವರಾಜ್‌ ಪಾಟೀಲ್‌ ಯತ್ನಾಳ್‌ ಅವರು ಮುಖ್ಯಮಂತ್ರಿ ಹುದ್ದೆಯ ವ್ಯಾಪಾರ ಮಾಡುತ್ತಿದ್ದಾರೆ ಎಂದು ತಮ್ಮದೆ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದ್ದರು, ಹಾಗಾದರೆ ಬಸವರಾಜ್‌ ಬೊಮ್ಮಾಯಿ ಎಷ್ಟುಹಣ ಕೊಟ್ಟು ಈ ಹುದ್ದೆಗೆ ಬಂದಿದ್ದಾರೆ..? ಬಹಿರಂಗವಾಗಿ ಹೇಳಿ, ಇಲ್ಲವಾದ್ರೆ ಯತ್ನಾಳ್‌ ವಿರುದ್ಧ ಕ್ರಮ ಕೈಗೊಳ್ಳಿ ಎಂದರು. ಕಾರ್ಯಕ್ರಮದಲ್ಲಿ ಎಐಸಿಸಿ ಕಾರ್ಯದರ್ಶಿ, ಕೇರಳದ ಶಾಸಕ ರೋಜಿಜಾನ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್‌, ಪಕ್ಷದ ಹಿರಿಯ ಮುಖಂಡರಾದ ಸಿ.ಆರ್‌. ಸಗೀರ್‌ ಆಹ್ಮದ್‌, ಡಾ.ಬಿ.ಎಲ್‌.ಶಂಕರ್‌, ಡಿ.ಕೆ. ತಾರಾದೇವಿ, ಶಾಸಕ ಟಿ.ಡಿ. ರಾಜೇಗೌಡ, ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್‌, ಮಾಜಿ ಶಾಸಕರಾದ ಶ್ರೀನಿವಾಸ್‌, ಎಸ್‌.ಎಂ. ನಾಗರಾಜ್‌, ಡಾ. ಡಿ.ಎಲ್‌. ವಿಜಯಕುಮಾರ್‌, ಎಚ್‌.ಡಿ. ತಮ್ಮಯ್ಯ, ಬಿ.ಎಚ್‌. ಹರೀಶ್‌, ಮಂಜೇಗೌಡ, ರೇಖಾ ಹುಲಿಯಪ್ಪಗೌಡ, ಎಂ.ಸಿ. ಶಿವಾನಂದಸ್ವಾಮಿ ಇದ್ದರು.

Latest Videos
Follow Us:
Download App:
  • android
  • ios