ಬೆಂಗಳೂರು, (ಜ.09): ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ಭರ್ಜರಿ ಕಾರ್ಯತಂತ್ರಗಳನ್ನು ರೂಪಿಸುತ್ತಿವೆ.

ಇದಕ್ಕೆ ಪೂರಕವೆಂಬಂತೆ ಬೆಳಗಾವಿ ಅಖಾಡಕ್ಕೆ ಅಭ್ಯರ್ಥಿಯನ್ನ ಕಣಕ್ಕಿಳಿಸುವ ಸಂಬಂಧ ಇಂದು (ಶನಿವಾರ) ಕೆಪಿಸಿಸಿ ಕಚೇರಿಯಲ್ಲಿ ಮಹತ್ವದ ಸಭೆ ನಡೆದಿದೆ.

ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ಎರಡು ಹೆಸರು ಫೈನಲ್ ಎಂದ ಡಿಕೆಶಿ
 
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಬೆಳಗಾವಿ ನಾಯಕರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕಿ ಅಂಜಲಿ ನಿಂಬಾಳ್ಕರ್, ಮಹಾಂತೇಶ ಕೌಜಲಗಿ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದಾರೆ.

ನಾನೂ ಟಿಕೆಟ್ ಆಕಾಂಕ್ಷಿ ಎಂದ ಹುಕ್ಕೇರಿ
ಸಭೆಯ ಆರಂಭದಲ್ಲಿ ಸತೀಶ್ ಜಾರಕಿಹೊಳಿ ಅವರನ್ನ ಚುನಾವಣೆಗೆ ನಿಲ್ಲಿಸಬೇಕು ಎಂದು ರಾಜ್ಯ ಹಾಗೂ ಜಿಲ್ಲೆಯ ನಾಯಕರು ಇಂಗಿತ ವ್ಯಕ್ತಪಡಿಸಿದರು. ಈ ಚರ್ಚೆಯ ಮಧ್ಯೆ ಪ್ರಕಾಶ್ ಹುಕ್ಕೇರಿ ಮಾತನಾಡಿ.. ನನಗೆ ಟಿಕೆಟ್ ಕೊಟ್ಟರೆ ಸ್ಪರ್ಧಿಸಲು ಸಿದ್ಧನಿದ್ದೇನೆ ಎಂದು ಹೇಳಿಬಿಟ್ಟರು. ಇದರಿಂದಾಗಿ ಸಭೆಯಲ್ಲಿದ್ದ ನಾಯಕರೆಲ್ಲಾ ಗೊಂದಲಕ್ಕೆ ಒಳಗಾಗಿದ್ದಾರೆ.

ಈ ಮೊದಲು ಸುರೇಶ್ ಅಂಗಡಿ ಅವರ ಕುಟುಂಬಕ್ಕೆ ಟಿಕೆಟ್ ಕೊಟ್ಟರೇ ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಪ್ರಕಾಶ್ ಹುಕ್ಕೇರಿ ಅಚ್ಚರಿ ಹೇಳಿಕೆ ಕೊಟ್ಟಿದ್ದರು. ಈ ಹಿನ್ನೆಲೆಯೆಲ್ಲಿ ಎಂ.ಬಿ.ಪಾಟೀಲ್ ನೇತೃತ್ವದ ಸಮಿತಿಯು, ಬೆಳಗಾವಿ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ ಅವರ ಹೆಸರನ್ನು ಶಿಫಾರಸ್ಸು ಮಾಡಿತ್ತು. ಆದ್ರೆ, ಇದೀಗ ಪ್ರಕಾಶ್ ಹುಕ್ಕೇರಿ ನನಗೆ ಟಿಕೆಟ್ ಕೊಡಿ ಎಂದು ಎದ್ದು ನಿಂತಿದ್ದು, ಕಾಂಗ್ರೆಸ್ ನಾಯಕರಿಗೆ ತಲೆನೋವು ಶುರುವಾಗಿದೆ.