ರಾಜ್ಯದ ಮುಖ್ಯಮಂತ್ರಿಗಳಿಗೆ ಯಾವುದೇ ಸ್ಪಷ್ಟತೆ ಇಲ್ಲ. ರಾಜ್ಯದ ಅಭಿವೃದ್ಧಿ ಬಗ್ಗೆ ದೂರದೃಷ್ಟಿಇಲ್ಲ. ಅದಕ್ಕೆ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ:  ಎಂ.ಬಿ. ಪಾಟೀಲ 

ಹುಬ್ಬಳ್ಳಿ(ಆ.21): ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದಾಗ ಆಗಿನ ಮುಖ್ಯಮಂತ್ರಿಗಳು ಸಿಲಿಕಾನ್‌ ವ್ಯಾಲಿ, ಸಿಂಗಾಪೂರ ಮಾಡಿದರೆ, ಪ್ರಸ್ತುತ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯವನ್ನು ಯುಪಿ ಮಾಡಲು ಹೊರಟಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಆರೋಪಿಸಿದರು.

ನಗರದ ಕಾರವಾರ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಹಾಲಿ ಶಾಸಕರು, ಮಾಜಿ ಶಾಸಕರು, ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಗಳಿಗೆ ಯಾವುದೇ ಸ್ಪಷ್ಟತೆ ಇಲ್ಲ. ರಾಜ್ಯದ ಅಭಿವೃದ್ಧಿ ಬಗ್ಗೆ ದೂರದೃಷ್ಟಿಇಲ್ಲ. ಅದಕ್ಕೆ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇಂಥವರಿಂದ ರಾಜ್ಯ ಏನು ಅಭಿವೃದ್ಧಿ ಕಾಣಲು ಸಾಧ್ಯ ಎಂದು ಪ್ರಶ್ನಿಸಿದರು.

ಕಳೆದ 70 ವರ್ಷಗಳಲ್ಲಿ . 2.60 ಲಕ್ಷ ಕೋಟಿ ಸಾಲ ಮಾಡಿದ್ದರೆ, ಈಗಿನ ಬಿಜೆಪಿ ಸರ್ಕಾರ ಕೇವಲ 4 ವರ್ಷದಲ್ಲಿ . 2.40 ಲಕ್ಷ ಕೋಟಿ ಸಾಲ ಮಾಡಿದೆ. ಆದರೆ, ಈ ಹಣದಿಂದ ಯಾವುದೇ ಅಭಿವೃದ್ಧಿಯೂ ಆಗಿಲ್ಲ. ಹಾಗಾದರೆ, ಈ ದುಡ್ಡು ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ ಅವರು, ಅಭಿವೃದ್ಧಿ ಮರೆತು ದುರಾಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರವನ್ನು ಕಿತ್ತೊಗೆಯಲು ಈಗಿನಿಂದಲೇ ಸಜ್ಜಾಗಬೇಕು ಎಂದು ಕಾಂಗ್ರೆಸ್‌ ಕಾರ್ಯಕರ್ತರಿಗೆ, ಮುಖಂಡರಿಗೆ ಸಲಹೆ ನೀಡಿದರು.

ಸಾವರ್ಕರ್ ಪೋಟೊ ಸುಟ್ಟು ಮೊಟ್ಟೆ ಹೊಡೆದ ಪ್ರಕರಣ; 12 ಜನ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಎಫ್‌ಐಆರ್‌ 

ಈಗಾಗಲೇ ಕಾಂಗ್ರೆಸ್‌ ಸದಸ್ಯತ್ವ ಅಭಿಯಾನ ನಡೆಸಿದ ಪರಿಣಾಮ ರಾಜ್ಯದಲ್ಲಿ 80 ಲಕ್ಷ ಸದಸ್ಯರ ನೋಂದಣಿ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಜನರು ಕಾಂಗ್ರೆಸ್‌ನತ್ತ ಬರುತ್ತಾರೆ. ಅದಕ್ಕಾಗಿ ಪಕ್ಷದ ಕಾರ್ಯಕರ್ತರು, ಮುಖಂಡರು ಯಾವುದೇ ಗುಂಪುಗಾರಿಕೆಗೆ ಅವಕಾಶ ನೀಡದೇ, ಒಗ್ಗಟ್ಟಿನಿಂದ ಪಕ್ಷದ ಸಂಘಟನೆ ಮಾಡುವ ಮೂಲಕ 2023ರ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು. ಅದಕ್ಕೆ ಕೆಪಿಸಿಸಿ ಎಲ್ಲ ರೀತಿಯ ಸಹಕಾರ ನೀಡದೆ ಎಂದರು.

ಸಭೆಯಲ್ಲಿ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಸಚಿವರಾದ ಸಂತೋಷ ಲಾಡ್‌, ಹನುಮಂತಪ್ಪ ಆಲ್ಕೋಡ, ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಶಾಸಕರಾದ ಡಿ.ಆರ್‌. ಪಾಟೀಲ, ನಾಗರಾಜ ಛಬ್ಬಿ, ಎನ್‌.ಎಚ್‌. ಕೋನರಡ್ಡಿ, ಪ್ರಕಾಶಗೌಡ ಪಾಟೀಲ, ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರು, ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ, ಮುಖಂಡರಾದ ಶರಣಪ್ಪ ಕೊಟಗಿ, ನಾಗರಾಜ ಗೌರಿ, ಸದಾನಂದ ಡಂಗನವರ, ಮೋಹನ ಅಸುಂಡಿ, ರಜತ್‌ ಉಳ್ಳಾಗಡ್ಡಿಮಠ, ಇಸ್ಮಾಯಿಲ್‌ ತಮಟಗಾರ, ಪರ್ವೇಜ್‌ ಕೊಣ್ಣೂರು ಸೇರಿದಂತೆ ಅನಕರು ಇದ್ದರು.